Advertisement

ಸದ್ದಿಲ್ಲದೇ ಅಣ್ಣಿಗೇರಿಗೆ ಹರಿದು ಬಂದಳು ಮಲಪ್ರಭೆ

04:46 PM Aug 24, 2018 | Team Udayavani |

ಅಣ್ಣಿಗೇರಿ: ನೀರಿಗೆ ಹಾಹಾಕಾರ ಆಗುವವರೆಗೆ ತಡೆಯಲಿಲ್ಲ. ಸಂಗ್ರಹಾಗಾರದಲ್ಲಿರುವ ತಳಮಟ್ಟದ ನೀರು ಕುಡಿದು ಜನರು ರೋಗರುಜಿನಕ್ಕೆ ಈಡಾಗುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಜಿಲ್ಲಾ ಧಿಕಾರಿ ಕಚೇರಿಗೆ ಮೇಲಿಂದ ಮೇಲೆ ಅಲೆದಾಡಲಿಲ್ಲ. ಸವದತ್ತಿಯ ನವಿಲುತೀರ್ಥಕ್ಕೆ ಹೋಗಿ ಬಾಗಿನ ಅರ್ಪಿಸಿ ಅದರ ಖರ್ಚು-ವೆಚ್ಚವನ್ನೆಲ್ಲ ಪುರಸಭೆಯ ಲೆಕ್ಕಕ್ಕೆ ಸೇರಿಸಿ, ಅಣ್ಣಿಗೇರಿಗೆ ಮಹದುಪಕಾರ ಮಾಡಿದೆ ಎನ್ನುವ ಪ್ರಚಾರವನ್ನಂತೂ ತೆಗೆದುಕೊಳ್ಳಲೇ ಇಲ್ಲ! ತಾವು ಪಟ್ಟಣಕ್ಕೆ ಕುಡಿಯುವ ನೀರನ್ನು ಮಲಪ್ರಭೆಯಿಂದ ಸರಬರಾಜು ಮಾಡಿಸಿದ ರೀತಿಯನ್ನು ಶಾಸಕ ಶಂಕರಪಾಟೀಲ ಮುನೇನಕೊಪ್ಪ ವ್ಯಾಖ್ಯಾನಿಸಿದ್ದು ಹೀಗೆ.

Advertisement

ಆ. 19ರಿಂದ ಇಲ್ಲಿನ ಜಲಸಂಗ್ರಹಾಗಾರ ಅಂಬಿಗೇರಿಗೆ ಸದ್ದಿಲ್ಲದೇ ಮಲಪ್ರಭೆ ನೀರು ಹರಿಸಲಾಗುತ್ತಿದೆ. ಮಲಪ್ರಭಾ ಬಲದಂಡೆ ಕಾಲುವೆಯಿಂದ 15 ದಿನಗಳ ಕಾಲ ಹರಿಯುವ ಈ ನೀರಿನಲ್ಲಿ ಶೇ. 90 ಕಾಲುವೆಗುಂಟ ಮುಂದೆ ಹರಿದು ಹೋದರೆ, ಅಣ್ಣಿಗೇರಿ ಪಟ್ಟಣಕ್ಕೆ ಶೇ. 10 ಮಾತ್ರ ಪೂರೈಕೆಯಾಗುತ್ತದೆ. ಇದು ಪಟ್ಟಣದ ನೀರಿನ ಕೊರತೆಯನ್ನು ಸದ್ಯಕ್ಕೆ ಒಂದೂವರೆ ತಿಂಗಳವರೆಗೆ ನೀಗಲಿದೆ.

ಒಟ್ಟು 23 ಎಕರೆ 12 ಗುಂಟೆ ವಿಸ್ತೀರ್ಣ ಹೊಂದಿದ ಅಂಬಿಗೇರಿ ಜಲಸಂಗ್ರಹಾಗಾರದಲ್ಲಿ 506.15 ಮಿಲಿಯನ್‌ ಲೀಟರ್‌ ನೀರನ್ನು ಸಂಗ್ರಹಿಸಬಹುದಾಗಿದೆ. ಈ ಹಿಂದೆ ಮಲಪ್ರಭಾ ಕಾಲುವೆಯಿಂದ ನೀರೆತ್ತಿ ಅಂಬಿಗೇರಿಗೆ ತುಂಬಿಸುವುದು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪಟ್ಟಣಕ್ಕೆ ನೀರಿನ ಅಭಾವ ತಲೆದೋರುತ್ತಿತ್ತು.

ಅಣ್ಣಿಗೇರಿಗೆ ಮಲಪ್ರಭಾ ನೀರನ್ನು ಸಮರ್ಪಕವಾಗಿ ಪೂರೈಸುವಲ್ಲಿ ಇದ್ದಿದ್ದ ಅಡೆತಡೆಗಳ ನಿವಾರಣೆಗಾಗಿ ಹೊಸ ಪರಿಕರಗಳನ್ನು ಅಳವಡಿಸಲು ತಾವು ಈ ಹಿಂದೆ ಶಾಸಕರಾಗಿದ್ದ ಅವ ಧಿಯಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಅವರು ಸರಕಾರದಿಂದ 1.5 ಕೋಟಿ ರೂ. ಮಂಜೂರಿ ಮಾಡಿಸಿದ್ದರು.

ಹಿಂದೆಯೂ ಬಂದಿದ್ದಳು: ಈ ಹಿಂದೆ ನೀರಿನ ತೊಂದರೆಯಿಂದ ಪರಿತಪಿಸುತ್ತಿದ್ದ ಅಣ್ಣಿಗೇರಿ ಪಟ್ಟಣಕ್ಕೆ ನವಲಗುಂದ ಚನ್ನಮ್ಮನ ಕೆರೆಯಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಸಲು ಆಗಿನ ಜಿಲ್ಲಾ ಧಿಕಾರಿ ನಿರ್ಧರಿಸಿದ್ದರು. ಆಗ ನವಲಗುಂದದ ಹಲವಾರು ಪ್ರಮುಖರು ಆ ನಿರ್ಧಾರವನ್ನು ವಿರೋಧಿಸಿದ್ದರು. ರಕ್ತವನ್ನಾದರೂ ಕೊಟ್ಟೇವು, ಆದರೆ ನೀರು ಕೊಡುವುದಿಲ್ಲ ಎನ್ನುವ ಮೂಲಕ ಪ್ರತಿಭಟನೆ ಹಾದಿ ತುಳಿದಿದ್ದರು. ಅಂದು ಶಾಸಕರಾಗಿದ್ದ ಮುನೇನಕೊಪ್ಪ ತಮ್ಮ ಪ್ರಭಾವ ಬಳಸಿ ತಕ್ಷಣ ಅಣ್ಣಿಗೇರಿಗೆ ಮಲಪ್ರಭಾ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದರು. ಈಗಲೂ ಸದ್ದಿಲ್ಲದೇ ಮತ್ತೆ ಮಲಪ್ರಭೆಯ ನೀರು ಹರಿಸುವಲ್ಲಿ ಯಶ ಕಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next