Advertisement

ಮಲಾಡ್‌ ಕನ್ನಡ ಸಂಘ: ಒಳಾಂಗಣ ಕೇರಂ,ಚೆಸ್‌ ಪಂದ್ಯಾಟ

10:35 AM Feb 01, 2018 | |

ಮುಂಬಯಿ: ಮಲಾಡ್‌ ಕನ್ನಡ ಸಂಘದ ವತಿಯಿಂದ ಒಳಾಂಗಣ ಕೇರಂ ಮತ್ತು ಚೆಸ್‌ ಪಂದ್ಯಾಟವು ಜ. 28ರಂದು ಮಲಾಡ್‌ ಮಾರ್ವೇರೋಡ್‌ನ‌ ದೀಪಮಾಲ ಕೋ. ಆಪರೇಟಿವ್‌ ಸೊಸೈಟಿಯ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಅಪರಾಹ್ನ 2ರಿಂದ ಪ್ರಾರಂಭಗೊಂಡ ಪಂದ್ಯಾಟವು ರಾತ್ರಿ 8ರವರೆಗೆ ನಡೆಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ಮಲಾಡ್‌ ಕನ್ನಡ ಸಂಘದ ಯುವ ವಿಭಾಗದ ವತಿಯಿಂದ ಒಳಾಂಗಣ ಪಂದ್ಯಾಟಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ, ತಿಮ್ಮಪ್ಪ ಶೆಟ್ಟಿ ಹಾಗೂ ಕೊಂಜಾಲುಗುತ್ತು ದಯಾನಂದ ಶೆಟ್ಟಿ, ನವೀನ್‌ ಡಿ. ಕರ್ಕೇರ ಅವರು ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ವತಿಯಿಂದ ಅತಿಥಿಗಳನ್ನು ಗೌರವಿಸಲಾಯಿತು.

ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ ಅವರು ಮಾತನಾಡಿ, ಯುವಶಕ್ತಿ ಹೆಚ್ಚಾಗಿ ಇಂದು ಸಂಘ-ಸಂಸ್ಥೆಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡು, ಸಂಘದ ಪ್ರಗತಿಗಾಗಿ ದುಡಿಯಬೇಕು. ಸಂಘದ ಅಧ್ಯಕ್ಷರ ಆಶಯಕ್ಕೆ ಪೂರಕವಾಗಿ ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸಿದಾಗ ಸಂಘವು ವೇಗವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರನ್ನು ಆಕರ್ಷಿಸುವ ಉದ್ದೇಶದಿಂದ ಇಂತಹ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಪಂದ್ಯದಲ್ಲಿ ಸೋಲು-ಗೆಲುವು ಸಾಮಾನ್ಯ. ಸೋತವರು ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿ ಮುಂದೆ ಗೆಲ್ಲುವುದಕ್ಕೆ ಪ್ರಯತ್ನಿಸಬೇಕು. ಎಲ್ಲಾ ಪಂದ್ಯಗಳಲ್ಲೂ ಪ್ರಯತ್ನ ಮುಖ್ಯ ಹಾಗೂ ಸಂಘದ ನಿಮ್ಮ ಸೇವಾಭಾವ ಮುಖ್ಯ ಎಂದು ನುಡಿದು ವಿಜೇತರನ್ನು ಅಭಿನಂದಿಸಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹರೀಶ್‌ ಎನ್‌. ಶೆಟ್ಟಿ ಅವರು ಮಾತನಾಡಿ, ಕಳೆದ 17 ವರ್ಷಗಳ ಅವಿರತ ಕಾರ್ಯಚಟುವಟಿಕೆಗಳಿಂದ ನಿರತವಾಗಿರುವ ಮಲಾಡ್‌ ಕನ್ನಡ ಸಂಘವು ಮಹಾನಗರದೆಲ್ಲೆಡೆ ನಾಡು-ನುಡಿಯ  ಕಂಪನ್ನು ಪಸರಿಸುವ ಕಾಯಕ ದಲ್ಲಿ ತೊಡಗಿದೆ. ಸಂಘದಲ್ಲಿ ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಾಗ ಅದು ಬೆಳೆಯುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ಕ್ರೀಡಾಳುಗಳ ಸಂಖ್ಯೆ ಹೆಚ್ಚಾಗಿದೆ. ಸಂಸ್ಥೆಯ ಬೆಳವಣಿಗೆಯ ದೃಷ್ಟಿಯಿಂದ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ನುಡಿದು ವಿಜೇತರಿಗೆ ಶುಭಹಾರೈಸಿದರು.

Advertisement

ಪ್ರಾರಂಭದಲ್ಲಿ ಲಕ್ಷ್ಮೀ ಸುಂದರ ಪೂಜಾರಿ ಪ್ರಾರ್ಥನೆಗೈದರು. ವೇದಿಕೆಯಲ್ಲಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರಕಾಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಶಂಕರ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್‌ ಎಸ್‌. ಪೂಜಾರಿ, ಮಹಿಳಾ ವಿಭಾಗದ ಕಾರ್ಯದರ್ಶಿ ಶಾಂಭವಿ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಯುವ ವಿಭಾಗದ ಕಾರ್ಯದರ್ಶಿ ಶಂಕರ ಎಚ್‌. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ರಜನಿ ಶೆಟ್ಟಿ ಅವರು ಸ್ಪರ್ಧಾಳುಗಳ ಯಾದಿಯನ್ನು ಓದಿದರು. ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ:ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next