ಮಕ್ಕಳ ಚಿತ್ರಗಳು ಸದ್ದಿಲ್ಲದೆಯೇ ಚಿತ್ರೀಕರಣಗೊಳ್ಳುವುದು ಹೊಸದೇನಲ್ಲ. ಆ ಸಾಲಿಗೆ ಈಗ “ಟ್ಯಾಬ್’ ಎಂಬ ಮಕ್ಕಳ ಚಿತ್ರವೂ ಒಂದು. ಈಗಾಗಲೇ ಈ ಚಿತ್ರ ಚಿತ್ರೀಕರಣ ಮುಗಿಸಿ, ಇದೀಗ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಇನ್ನು, ಈ ಚಿತ್ರದ ಮೂಲಕ ಮಲ್ಲಿಕಾರ್ಜುನ್ ಹೊಯ್ಸಳ ನಿರ್ದೇಶಕರಾಗುತ್ತಿದ್ದಾರೆ. ಅವರ ಕಥೆ ಒಪ್ಪಿ ಎ. ಶ್ರೀನಿವಾಸ ಮೂರ್ತಿ ನಿರ್ಮಿಸಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು “ಟ್ಯಾಬ್’ ಕುರಿತು ಸಾಗುವ ಸಿನಿಮಾ. ತಂತ್ರಜ್ಞಾನ ಈಗಂತೂ ದಿನ ದಿನಕ್ಕೂ ಹೆಚ್ಚುತ್ತಿದೆ. ಅಂತೆಯೇ ಮಕ್ಕಳಲ್ಲೂ ಸಹ ಆಸಕ್ತಿ ಹೆಚ್ಚಾಗುತ್ತಿದೆ. ಒಂದು “ಟ್ಯಾಬ್’ಗಾಗಿ ಇಬ್ಬರು ಮಕ್ಕಳು ಏನೆಲ್ಲಾ ಕಸರತ್ತು ನಡೆಸುತ್ತಾರೆ. ಅದನ್ನು ಖರೀದಿ ಮಾಡಲು ಹಲವು ತಪ್ಪುಗಳನ್ನು ಎಸಗುತ್ತಾರೆ. ನಂತರ ತಮ್ಮ ತಪ್ಪಿನ ಅರಿವಾಗಿ ಅದನ್ನು ತಿದ್ದಿಕೊಳ್ಳುತ್ತಾರೆ. ಇದು “ಟ್ಯಾಬ್’ನ ಕಥೆ.
ಅಂದಹಾಗೆ, ನಿರ್ದೇಶಕ ಮಲ್ಲಿಕಾರ್ಜುನ ಹೂಯ್ಸಳ ಅವರು, ಮಕ್ಕಳ ಮುಗ್ಧತೆಯನ್ನು ಇಟ್ಟುಕೊಂಡೇ ಅವರು “ಮುಗ್ಧ ಮನಸುಗಳು’ ಎಂಬ ಕಾದಂಬರಿಯನ್ನು ಬರೆದ್ದಿದ್ದರಂತೆ. ಆ ಕಾದಂಬರಿಯನ್ನು ನಿರ್ಮಾಪಕ ಶ್ರೀನಿವಾಸಮೂರ್ತಿ ಅವರಿಗೆ ತೋರಿಸಿದಾಗ, ಅವರು, ಮೊದಲು ಸಿನಿಮಾ ಮಾಡೋಣ, ಆಮೇಲೆ ಕಾದಂಬರಿ ಬಿಡುಗಡೆ ಮಾಡೋಣ ಅಂತ ಸಲಹೆ ನೀಡಿ, ಪ್ರೋತ್ಸಾಹಿಸುವುದರ ಜತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಯಲಹಂಕ ಸಮೀಪದಲ್ಲಿ ನಡೆದಿದೆ. ಈಗ ತೆರೆಗೆ ಬರಲು ಸಿದ್ಧವಾಗಿದ್ದು, ಮೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡತ್ತಿದೆ ಚಿತ್ರತಂಡ.
ಈ ಚಿತ್ರದಲ್ಲಿ ಮಾಸ್ಟರ್ ಜಯಂತ್ ಮತ್ತು ಬೇಬಿ ಸಾತ್ವಿಕ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾರಾಯಣಸ್ವಾಮಿ ಹಾಗೂ ಲಕ್ಷ್ಮೀ ಹೆಗಡೆ ಅಪ್ಪ, ಅಮ್ಮನಾಗಿ ನಟಿಸಿದ್ದಾರೆ. ಇಲ್ಲಿ ನಾರಾಯಣಸ್ವಾಮಿ ಅವರದು ಕುಡುಕ ತಂದೆಯ ಪಾತ್ರವಂತೆ. ಉಳಿದಂತೆ ದತ್ತಣ್ಣ, ಸಿದ್ದರಾಜ್ ಕಲ್ಯಾಣ್‌ಕರ್, ಅರುಣ ಬಾಲರಾಜ್, ಬೇಬಿ ಇಂಪನಾ ಇತರರು ನಟಿಸಿದ್ದಾರೆ. ಎ.ಎಂ.ನೀಲ್ ಅವರ ಸಂಗೀತದಲ್ಲಿ ಕವಿರಾಜ್ ಒಂದು ಗೀತೆ ಬರೆದಿದ್ದಾರೆ. ರಾಜೇಶ್ ಕೃಷ್ಣನ್ ಒಂದು ಗೀತೆಗೆ ದನಿಯಾಗಿದ್ದಾರೆ. ಧನ್‌ಪಾಲ್ ಛಾಯಗ್ರಾಹಕರು. ಸಂಜೀವ್‌ರೆಡ್ಡಿ ಅವರ ಕತ್ತರಿ ಪ್ರಯೋಗ ಚಿತ್ರಕ್ಕಿದೆ. ಅಂದಹಾಗೆ, “ಮುಗ್ಧ ಮನಸುಗಳು’ ಕಾದಂಬರಿಯನ್ನು ಶ್ರೀ ಶಿವಕುಮಾರಸ್ವಾಮೀಜಿ ಅವರಿಂದ ಲೋಕಾರ್ಪಣೆ ಮಾಡಲು ನಿರ್ಮಾಪಕರು ಎಲ್ಲಾ ತಯಾರಿ ಮಾಡಿಕೊಂಡಿದ್ದಾರಂತೆ.