ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ಇಂಟಲಿಜೆನ್ಸ್ ಬ್ಯೂರೊ(ಐಬಿ), ರಾ ನಡೆಸಿದ ತನಿಖೆಯ ವರದಿಗಳನ್ನು ಬಹಿರಂಗಗೊಳಿಸುವುದು ಸರಿಯಾದ ಕ್ರಮವಲ್ಲ. ಇದು ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಷ್ಟ್ರದ ಹಿತಾಸಕ್ತಿಗಾಗಿ ಕೇಂದ್ರ ಗುಪ್ತಚರ ಸಂಸ್ಥೆಗಳು ಕೆಲಸ ಮಾಡುತ್ತಿವೆ.
ಹೀಗಾಗಿ, ಸೂಕ್ಷ್ಮ ವರದಿಗಳನ್ನು ಬಹಿರಂಗ ಮಾಡುವ ಮೊದಲು ಯೋಚಿಸಬೇಕು,’ ಎಂದರು. ಇದರಿಂದಾಗಿ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವಿನ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ.
ಸುಪ್ರೀಂ ಕೋರ್ಟ್‌ನ ಕೊಲಿಜಿಯಂನ ನಿರ್ಣಯಗಳಲ್ಲಿ ಐಬಿ ಮತ್ತು ರಾ ವರದಿಯ ಕೆಲವು ಭಾಗಗಳನ್ನು ಉಲ್ಲೇಖೀಸಿರುವ ಬಗ್ಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಂದಿದೆ. ವರದಿಯ ಕೆಲವು ಅಂಶಗಳನ್ನು ಬಿಡುಗಡೆ ಮಾಡಿರುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದರು.
ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಮತ್ತು ಸಿಜೆಐ ಸದಾ ಸಂಪರ್ಕದಲ್ಲಿ ಇದ್ದೇ ಇರುತ್ತೇವೆ. ಅವರು ನ್ಯಾಯಾಂಗದ ಮುಖ್ಯಸ್ಥರು. ನಾನು ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಸೇತುವೆಯಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಒಂಟಿಯಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ,’ ಎಂದು ರಿಜಿಜು ಹೇಳಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ವಿವಾದಾತ್ಮಕ ಹೇಳಿಕೆಗಳು ನ್ಯಾಯಾಂಗವನ್ನು ಬಲಪಡಿಸಲಿವೆಯೇ?.
– ಕಪಿಲ್ ಸಿಬಲ್, ಕೇಂದ್ರದ ಮಾಜಿ ಸಚಿವ