ಭವ್ಯ ಭಾರತದ ಕನಸುಗಾರ, ಅಪ್ರತಿಮ ತಾಂತ್ರಿಕ ತಜ್ಞ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಶುಕ್ರವಾರ (ಸೆ.15) ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಗುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲೂ ವಿಶ್ವೇಶ್ವರಯ್ಯ ಜನ್ಮ ಜಯಂತಿ ಅಂಗವಾಗಿ ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಗುತ್ತಿದೆ. ಬ್ರಿಟಿಷ್ ಇಂಡಿಯಾ ಕಾಲದಲ್ಲಿ ವಿಶ್ವೇಶ್ವರಯ್ಯ ಅವರು ಇಲ್ಲಿ ಸಿವಿಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ವಿಶ್ವೇಶ್ವರಯ್ಯನವರ ದೂರದೃಷ್ಟಿಗಾಗಿ 1955ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇದನ್ನೂ ಓದಿ:Asia Cup 2023: ತಿಲಕ್ ವರ್ಮಾ ಪದಾರ್ಪಣೆ; ಟೀಂ ಇಂಡಿಯಾದಲ್ಲಿ ಐದು ಬದಲಾವಣೆ
ಅಂದಿನ ಮೈಸೂರು ಪ್ರಾಂತ್ಯದ (ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ) ಮುದ್ದೇನಹಳ್ಳಿಯಲ್ಲಿ 1861ರ ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯ ಜನಿಸಿದ್ದರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದ ಸರ್ ಎಂವಿ ಅವರು ನಂತರ ಮದ್ರಾಸ್ ಯೂನಿರ್ವಸಿಟಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದರು. ತದನಂತರ ಬಾಂಬೆ ಯೂನಿರ್ವಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು.
1885ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಲೋಕೋಪಯೋಗಿ (ಪಿಡಬ್ಲ್ಯುಡಿ) ಇಲಾಖೆಯಲ್ಲಿ ವಿಶ್ವೇಶ್ವರಯ್ಯನವರು ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. 1889ರಲ್ಲಿ ವಿಶ್ವೇಶ್ವರಯ್ಯನವರನ್ನು ಭಾರತೀಯ ನೀರಾವರಿ ಸಮಿತಿಗೆ ಆಹ್ವಾನಿಸಲಾಗಿತ್ತು. ಅಲ್ಲಿ ವಿಶ್ವೇಶ್ವರಯ್ಯನವರು ಅಣೆಕಟ್ಟೆಗೆ ಸ್ವಯಂಚಾಲಿತ ವಾಟರ್ ಫ್ಲಡ್ ಗೇಟ್ ಗಳನ್ನು ವಿನ್ಯಾಸಗೊಳಿಸಿದ್ದರು. 1903ರಲ್ಲಿ ನೀರಾವರಿಗಾಗಿ ಮೊದಲ ಬಾರಿಗೆ ಪುಣೆ ಸಮೀಪದ ಖಾಡಾಕ್ವಾಸ್ಲಾ ಅಣೆಕಟ್ಟಿನ ಜಲಾಶಯಕ್ಕೆ ಫ್ಲಡ್ ಗೇಟ್ ಗಳನ್ನು ಅಳವಡಿಸಿ ನೀರಿನ ಮಟ್ಟವನ್ನು ಏರಿಸಲಾಗಿತ್ತು. ಈ ಗೇಟ್ ಗಳ ಯಶಸ್ಸಿನ ನಂತರ ಗ್ವಾಲಿಯರ್ ನ ಟೈಗ್ರಾ ಅಣೆಕಟ್ಟಿನಲ್ಲಿ ಮತ್ತು ಕರ್ನಾಟಕದ ಮೈಸೂರಿನಲ್ಲಿರುವ ಕೆಆರ್ ಎಸ್ ಅಣೆಕಟ್ಟಿನಲ್ಲಿ ಗೇಟ್ ಗಳನ್ನು ಸ್ಥಾಪಿಸಲಾಗಿತ್ತು.
1906-07ರಲ್ಲಿ ಬ್ರಿಟಿಷ್ ಸರ್ಕಾರದ ಸೂಚನೆ ಮೇರೆಗೆ ವಿಶ್ವೇಶ್ವರಯ್ಯನವರು ನೀರು ಹಾಗೂ ಚರಂಡಿ ವ್ಯವಸ್ಥೆಯ ಅಧ್ಯಯನಕ್ಕಾಗಿ ಅಡೆನ್ ನ ಬ್ರಿಟಿಷ್ ಕಾಲೋನಿ (ಇಂದಿನ ಯೆಮೆನ್) ಗೆ ತೆರಳಿದ್ದರು. 1908ರಲ್ಲಿ ವಿಶ್ವೇಶ್ವರಯ್ಯನವರು ಸ್ವಇಚ್ಛೆಯಿಂದ ತಮ್ಮ 47ನೇ ವಯಸ್ಸಿಗೆ ನಿವೃತ್ತಿ ಪಡೆದಿದ್ದರು. ಬಳಿಕ ಕೈಗಾರಿಕರಣಗೊಂಡ ದೇಶಗಳಲ್ಲಿ ಅಧ್ಯಯನ ನಡೆಸಲು ನಿರ್ಧರಿಸಿದ್ದರು.
ಪ್ರವಾಹದಿಂದ ಹೈದರಾಬಾದ್ ನ್ನು ಉಳಿಸಿದ್ದು ಡಾ.ಸರ್ ಎಂವಿ:
ಹೈದರಾಬಾದ್ ಅಂದು ಮೂಸಿ ನದಿಯಿಂದ ನಿರಂತರವಾಗಿ ಅಪಾಯದಲ್ಲಿದ್ದ ಪರಿಣಾಮ ಸರ್. ಎಂ. ವಿಶ್ವೇಶ್ವರಯ್ಯನವರನ್ನು ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡಲಾಯ್ತು. ಈ ವೇಳೆಯಲ್ಲಿ ನಗರವನ್ನು ಪ್ರವಾಹದಿಂದ ರಕ್ಷಿಸುವ ಮೂಲಭೂತ ಕೊಡುಗೆಯನ್ನು ವಿಶ್ವೇಶ್ವರಯ್ಯನವರು ನೀಡಿದ್ದರು. ಸಮುದ್ರ ಕೊರೆತದಿಂದ ಬಂದರನ್ನು ರಕ್ಷಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
1909ರಲ್ಲಿ ದಿವಾನ್ ಸರ್ ವಿ.ಪಿ.ಮಾಧವ ರಾವ್ ಅವರ ಆಹ್ವಾನದ ಮೇರೆಗೆ ವಿಶ್ವೇಶ್ವರಯ್ಯ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡಿದ್ದರು. ಈ ಸಂದರ್ಭದಲ್ಲಿ ಕೆಆರ್ ಎಸ್ ಅಣೆಕಟ್ಟಿನ ಮುಖ್ಯ ಇಂಜಿನಿಯರ್ ಆಗಿದ್ದು, ನಂತರ ಕರ್ನಾಟಕದ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಇಂಜಿನಿಯರ್ ಗಳ ಮಂಡಳಿಯ ಅಧ್ಯಕ್ಷರಾಗಿದ್ದರು.
1912ರಲ್ಲಿ ಕೃಷ್ಣರಾಜ ಒಡೆಯರ್ IV ಅವರು ವಿಶ್ವೇಶ್ವರಯ್ಯನವರನ್ನು ದಿವಾನರಾಗಿ ನೇಮಿಸಿದ್ದರು. ಹೀಗೆ 1918ರವರೆಗೆ ಸುಮಾರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ದಿವಾನರಾಗಿದ್ದ ಅವಧಿಯಲ್ಲಿ ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಮೈಸೂರು ಸೋಪ್ ಫ್ಯಾಕ್ಟರಿ, ಪ್ಯಾರಾಸಿಟಾಯ್ಡ್ ಪ್ರಯೋಗಾಲಯ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಸರ್.ಎಂ.ವಿಶ್ವೇಶ್ವರಯ್ಯ 1962ರ ಏಪ್ರಿಲ್ 14ರಂದು ನಿಧನರಾಗಿದ್ದರು.