ಚಿಕ್ಕವರಾಗಿದ್ದಾಗ ಜೋರು ಮಳೆ ಬಂದು ರೇಡಿಯೋಗಳಲ್ಲಿ “ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ’ ಎಂಬ ಸುದ್ದಿಗಾಗಿ ನಾವೆಲ್ಲರೂ ಚಾತಕಪಕ್ಷಿಗಳಂತೆ ಕಾದು ಕುಳಿತುಕೊಳ್ಳುತ್ತಿದ್ದೆವು. ಅದರಲ್ಲೂ ಹಳ್ಳಿಗಾಡಿನ ಪ್ರದೇಶವಾಗಿದ್ದರೆ ಒಂದಷ್ಟು ಪ್ರದೇಶಗಳು ನೀರಿನಿಂದ ಆವೃತವಾಗುವುದು, ಸೇತುವೆಗಳು ಮುಳುಗುವುದು ಇತ್ಯಾದಿ ಘಟನೆಗಳು ಸರ್ವೇ ಸಾಮಾನ್ಯವಾಗಿದ್ದವು. ಇವೆಲ್ಲವೂ ಮಕ್ಕಳಿಗೆ ರಜೆಯ ನೆಪಗಳು. ಈ ಕುಂಟು ನೆಪಗಳನ್ನು ಹೋಗಲಾಡಿಸಲೆಂದೇ ಬಾಂಗ್ಲಾದೇಶದಲ್ಲಿ ಬೋಟ್ ಶಾಲೆಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಹತ್ತಾರು ಕಿ.ಮೀಗಳನ್ನು ನಡೆದು, ಸೇತುವೆಗಳನ್ನು ದಾಟಿ, ಬಸ್ಸು ಹತ್ತಿ ತ್ರಾಸಪಟ್ಟುಕೊಂಡು ಶಾಲೆಗೆ ತಲುಪಬೇಕಿಲ್ಲ. ಶಾಲೆಯೇ ತೇಲುತ್ತಾ ಮಕ್ಕಳ ಮನೆ ಬಳಿಗೆ ಬರುವವು!
ಬಾಂಗ್ಲಾದೇಶದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವುದು ಸಾಮಾನ್ಯವಾದ ಸಂಗತಿ. ಆ ಸಂದರ್ಭದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವುದಲ್ಲದೆ ಬದುಕುವುದು ದುಸ್ತರವಾಗಿಬಿಡುತ್ತದೆ. ಶಾಲೆಗಳಂತೂ ನೀರಿನಲ್ಲಿ ಮುಳುಗಿ ಹೋಗಿ ತಿಂಗಳುಗಳ ಕಾಲ ಬಂದ್ ಆಗಿರುತ್ತವೆ. ಆಹಾರ ನೀರಿಗೆ ಕಷ್ಟಪಡಬೇಕಾದ ಸಂದರ್ಭದಲ್ಲಿ ಯಾರು ತಾನೇ ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತಿಸುತ್ತಾರೆ ಹೇಳಿ. ಅದಕ್ಕೇ ತೇಲುವ ಶಾಲೆಗಳ ಐಡಿಯಾ ಅಲ್ಲಿ ಚಾಲ್ತಿಯಲ್ಲಿದೆ.
ಮಳೆ ಮತ್ತು ಪ್ರವಾಹದಿಂದ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗುವುದನ್ನು ಅರಿತ “ಶಿಧುಲಾಯ… ಸ್ವಾನಿರ್ವಾರ್’ ಎಂಬ ಸಂಸ್ಥೆಯು ಮಕ್ಕಳಿಗೆ ಅನುಕೂಲ ಕಲ್ಪಿಸಲು 2002 ರಲ್ಲಿ ಬೋಟ… ಶಾಲೆಯೊಂದನ್ನು ಮೊತ್ತ ಮೊದಲ ಬಾರಿಗೆ ಪ್ರಾರಂಭಿಸಿತ್ತು. ಈ ಉಪಾಯ ಇಂದು ಯಶಸ್ವಿಯಾಗಿದ್ದು ಒಟ್ಟು 22 ಬೋಟ… ಶಾಲೆಗಳು ಅಲ್ಲಿ ಕಾರ್ಯಾಚರಿಸುತ್ತಿವೆ.ಅಲ್ಲಿ ಓದುತ್ತಿರುವ ಒಟ್ಟು ಮಕ್ಕಳ ಸಂಖ್ಯೆ ಕೇಳಿದರೆ ನೀವು ಬೆಚ್ಚಿಬೀಳುವುದು ಖಂಡಿತ. ಸುಮಾರು 2,000 ವಿದ್ಯಾರ್ಥಿಗಳು ಬೋಟ್ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸಾಮಾನ್ಯ ಶಾಲೆಗೇ ಅಷ್ಟು ಮಂದಿ ಸೇರಿಸುವುದು ಕಷ್ಟ. ಅಂಥದ್ದರಲ್ಲಿ ಈ ಬೋಟ್ ಶಾಲೆ ಮಕ್ಕಳಿಗೆ ಆಕರ್ಷಣೆಯೂ ಆಗಿರುವುದರಿಂದ ಮಕ್ಕಳು ಗೈರುಹಾಜರಾಗುವುದಿಲ್ಲ ಎನ್ನುವುದು ಅಲ್ಲಿನ ಶಿಕ್ಷಕರ ಅಭಿಪ್ರಾಯ.
ಈ ಬೋಟ್‌ಗಳಲ್ಲಿ ಮಕ್ಕಳು ಕಲಿಯಲು ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಳವಡಿಸಲಾಗಿದೆ. ಒಂದು ಬೋಟ… ದಿನಕ್ಕೆ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಇಲ್ಲಿ ಕಲಿಯುವ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಮತ್ತೂಂದು ಸಂಗತಿಯೆಂದರೆ ಹಳ್ಳಿಗಳ ದಡಕ್ಕೆ ತೆರಳುವ ಈ ತೇಲುವ ಶಾಲೆಗಳು ಮಕ್ಕಳನ್ನು ಹತ್ತಿಸಿಕೊಂಡು, ತರಗತಿ ಮುಗಿದ ಬಳಿಕ ಮತ್ತೆ ಅವರವರ ಹಳ್ಳಿಗಳಿಗೆ ಬಿಟ್ಟು ಬರುತ್ತವೆ. ಒಂದು ರೀತಿ ಇವುಗಳು ಶಾಲಾ ವಾಹನಗಳಂತೆಯೂ ಕಾರ್ಯ ನಿರ್ವಹಿಸುತ್ತಿವೆ.
ಸೋಲಾರ್ ಮತ್ತು ಕಂಪ್ಯೂಟರ್!
ಈ ಬೋಟ್ಗಳಲ್ಲಿ ನಡೆಯುವ ಶಾಲೆಗಳಲ್ಲಿ ಸೋಲಾರ್ ಶಕ್ತಿಯನ್ನು ಅಳವಡಿಸಲಾಗಿದೆ. ಒಳಗಡೆ ಇರುವ ದೀಪದ ಬಲುºಗಳು, ಕಂಪ್ಯೂಟರ್ ಮತ್ತಿತರ ಉಪಕರಣಗಳು ಸೋಲಾರ್ ಶಕ್ತಿಯಿಂದಲೇ ಕೆಲಸ ಮಾಡುತ್ತವೆ. ಬಿಡುವಿನ ವೇಳೆಯಲ್ಲಿ ಓದಿಕೊಳ್ಳಲು ಮಕ್ಕಳಿಗೊಂದು ಪುಟ್ಟ ಗ್ರಂಥಾಲಯವೂ ಇದೆ.
ದಂಡಿನಶಿವರ ಮಂಜುನಾಥ್