Advertisement

ರಾಷ್ಟ್ರೀಯ ಲೋಕ್‌ ಅದಾಲತ್‌ ಸದುಪಯೋಗಪಡಿಸಿಕೊಳ್ಳಿ

09:46 PM Feb 06, 2020 | Lakshmi GovindaRaj |

ಚಾಮರಾಜನಗರ: ರಾಷ್ಟ್ರೀಯ ಲೋಕ್‌ ಅದಾಲತ್‌ ಅನ್ನು ಚಾಮರಾಜನಗರ ಜಿಲ್ಲೆಯಲ್ಲಿ ಫೆ.8ರಂದು ಆಯೋಜಿಸಲಾಗಿದೆ. ಈ ಮೂಲಕ ರಾಜಿಯಾಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ ಪಾಟೀಲ್‌ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪರಿಹಾರ ಕೇಂದ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕ್‌ ಅದಾಲತ್‌ಗಾಗಿ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲ ನ್ಯಾಯಾಲಯದಲ್ಲಿ ಒಟ್ಟು ಎಂಟು ಸಭೆಗಳಿಗೆ ಸಂಧಾನಕಾರರನ್ನು ನೇಮಿಸಲಾಗಿದೆ. ಸಂಧಾನಕಾರರು ಎರಡು ಪಕ್ಷಗಾರರ ಭಿನ್ನಾಭಿಪ್ರಾಯ, ಸಮಸ್ಯೆಗಳನ್ನು ಆಲಿಸಿ, ಉಭಯ ಪಕ್ಷಗಾರರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ರಾಜೀ ಕಾರ್ಯ ನಡೆಸಲಿದ್ದಾರೆ.

ಇದರಿಂದ ಪ್ರಕರಣವನ್ನು ಶೀಘ್ರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಲೋಕ್‌ ಅದಾಲತ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರ ಯಾವುದೇ ಸಿವಿಲ್‌ ಪ್ರಕರಣಗಳಾದ ದಾಂಪತ್ಯ, ಮಕ್ಕಳ ಸಂರಕ್ಷಣೆ, ಮೋಟಾರ್‌ ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳು,

ವಿಶೇಷ ಕಾನೂನಿನಡಿ ಶಿಕ್ಷಿಸಲ್ಪಡುವ ಅಪರಾಧಗಳಾದ ಚೆಕ್ಕು ಅಮಾನ್ಯಿಕರಣ, ವಿದ್ಯುತ್‌ ಕಳವು, ಕಾರ್ಮಿಕ ಕಾಯ್ದೆಯಡಿ ಬರುವ ಪ್ರಕರಣಗಳು, ಅಕ್ರಮ ಕಲ್ಲು- ಮರಳು ಸಾಗಾಣಿಕೆ ಸಂಬಂಧಿಸಿದ ಪ್ರಕರಣಗಳು, ಇತರೆ ಯಾವುದೇ ಅಪರಾಧ ಸ್ವರೂಪದ ರಾಜೀ ಆಗಬಹುದಾದ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

6000 ಪ್ರಕರಣ ರಾಜಿ ಗುರಿ: ಲೋಕ್‌ ಅದಾಲತ್‌ನಲ್ಲಿ ಸಿವಿಲ್‌, ಕ್ರಿಮಿನಲ್‌ ಸೇರಿದಂತೆ ಒಟ್ಟು 1414 ಪ್ರಕರಣಗಳನ್ನು ಹೊಂದಿದೆ. ಅದರಂತೆ ಈ ಬಾರಿಯ ಲೋಕ್‌ ಅದಾಲತ್‌ಗೆ 904 ಸಿವಿಲ್‌, 510 ಕ್ರಿಮಿನಲ್‌, 300 ವ್ಯಾಜ್ಯ ಪೂರ್ವ, ಇತರೆ 6000 ಪ್ರಕರಣಗಳನ್ನು ರಾಜಿ ಮಾಡಲು ಗುರಿ ಹೊಂದಿದ್ದೇವೆ.

Advertisement

ಸಂಧಾನಕಾರರು ತಮ್ಮ ಮುಂದೆ ಬಂದ ಪ್ರಕರಣಗಳನ್ನು ಉಭಯ ಪಕ್ಷಗಾರರ ಭಿನ್ನಾಭಿಪ್ರಾಯ ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸುವ ರಾಜಿ ಸೂತ್ರಗಳನ್ನು ತಿಳಿಸುತ್ತಾರೆ. ಪಕ್ಷಗಾರರು ರಾಜಿ ಸೂತ್ರಕ್ಕೆ ಒಪ್ಪದಿದ್ದಲ್ಲಿ, ಸಂಧಾನ ಆಗುವುದರಿಂದ ಉಂಟಾಗುವ ಅನುಕೂಲತೆಗಳ ಬಗ್ಗೆ ಸಂಧಾನಕಾರರು ತಿಳಿಸಿಕೊಡುತ್ತಾರೆ ಎಂದು ತಿಳಿಸಿದರು.

ಮೇಲ್ಮನವಿ ಸಲ್ಲಿಕೆಗೆ ಅವಕಾಶವಿಲ್ಲ: ಲೋಕ್‌ ಅದಾಲತ್‌ನಲ್ಲಿ ಸಂಧಾನವಾದ ಪ್ರಕರಣಗಳ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಪಕ್ಷಗಾರರು ಸಂಧಾಯ ಮಾಡಿದ ಶೇ.75ರಷ್ಟು ನ್ಯಾಯಾಲಯ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ.

ಮುಂದಿನ ವ್ಯಾಜ್ಯಗಳಿಗೆ ಆಸ್ಪದ ಕೊಡದೇ ಸಹಕಾರ, ಸಹಬಾಳ್ವೆಗೆ ಅವಕಾಶ ಮಾಡಿಕೊಡುವ ಲೋಕ್‌ ಅದಾಲತ್‌ ಅನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next