ಯಳಂದೂರು: ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಿ ಜಿಲ್ಲೆಯನ್ನು ವಿಷಮುಕ್ತ ಆಹಾರ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪಣ ತೊಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು. ತಾಲೂಕಿನ ಹೊನ್ನೂರು ಗ್ರಾಮದ ಪ್ರಕಾಶ್ ಅವರ ಜಮೀನಿನಲ್ಲಿ ರೈತ ಸಂಘ, ಹಸಿರು ಸೇನೆ, ನಿಸರ್ಗ ನೈಸರ್ಗಿಕ ಸಾಯಯವ ಕೃಷಿಕರ ಸಂಘ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಮೌಲ್ಯವರ್ಧನೆ ಕುರಿತಾಗಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಗತ್ಯ ತರಬೇತಿ: ಮಹಿಳೆಯರಿಗೆ ಸಾವಯವ ಕೃಷಿ ಬಗ್ಗೆ ತರಬೇತಿ ನೀಡಲಾಗುತ್ತಿದೆ. ನಾವು ಬೆಳೆಯುವ ಪದಾರ್ಥಗಳಿಗೆ ಮಾರುಕಟ್ಟೆಯನ್ನು ಹೇಗೆ ರೂಪಿಸಿಕೊಳ್ಳಬೇಕು. ಸಿರಿಧಾನ್ಯಗಳ ಬೆಳೆ, ಇವುಗಳ ಮಾರುಕಟ್ಟೆ ಬೆಲೆ, ಇದರಿಂದ ತಯಾರಿಸುವ ಆಹಾರ ಪದಾರ್ಥ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಿ ವಿಷಮುಕ್ತ ಆಹಾರ ಜಿಲ್ಲೆಯನ್ನಾಗಿ ರೂಪಿಸಬೇಕೆಂದು ತಿಳಿಸಿದರು.
ಬಳಕೆ ಹೆಚ್ಚಾಗಲಿ: ಕೃಷಿ ವಿಜ್ಞಾನ ಸಂಘದ ಸಂಚಾಲಕಿ ಚಂದ್ರಕಲಾ ಮಾತನಾಡಿ, ಪುರಾತನ ಕಾಲದ ಬೆಳೆಗಳಾದ ಸಿರಿಧಾನ್ಯ ಪೋಷಕಾಂಶಗಳ ಆಹಾರ. ಮನುಷ್ಯ ಮತ್ತೆ ಈ ಆಹಾರ ಪದ್ಧತಿಗೆ ವಾಲಿದ್ದಾನೆ. ಸಿರಿಧಾನ್ಯಗಳಲ್ಲಿ ನಾರು, ಪ್ರೋಟಿನ್ ಸೇರಿದಂತೆ ಹಲವು ಮಹತ್ವವಾದ ಪೋಷಕಾಂಶ ಇವೆ. ಇದರ ಬಳಕೆ ಹೆಚ್ಚಾಗಬೇಕು ಎಂದು ಮನವಿ ಮಾಡಿದರು. ಬೇಡಿಕೆಯೂ ಹೆಚ್ಚಾಗಿದ್ದು ಅನೇಕ ಇತರೆ ಪದಾರ್ಥ ತಯಾರಿಸಿ ಮಾರುಕಟ್ಟೆ ಒದಗಿಸಬಹುದು. ಇಂತಹ ಆಹಾರ ಪದಾರ್ಥಗಳನ್ನು ತಯಾರಿಸಲು, ಬೆಳೆಯಲು ಸಂಘದ ವತಿಯಿಂದ ಅನೇಕ ಕಾರ್ಯಕ್ರಮ, ತರಬೇತಿ ನಡೆಯುತ್ತವೆ. ಮಹಿಳೆಯರು ತರಬೇತಿ ಪಡೆದು ಸ್ವಾವಲಂಬಿ ಬದುಕು ಸಾಗಿಸಬೇಕೆಂದರು.
ಭತ್ತ ನಾಟಿ ಮಾಡುವ ಯಂತ್ರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಮುಂದಿನ ತಿಂಗಳಿಂದ ಯಂತ್ರಶ್ರೀ ಯೋಜನೆಯಡಿ ನಮ್ಮ ತಾಲೂಕಿಗೆ 5 ಭತ್ತ ನಾಟಿ ಮಾಡುವ ಯಂತ್ರ ಇಡಲಾಗುವುದು. ಇದರಿಂದ ಕೂಲಿ ಕಾರ್ಮಿಕರ ಕೊರತೆ ನೀಗಿಸಬಹುದು. ಜೊತೆಗೆ ಯಂತ್ರ ಕಟಾವು ಯಂತ್ರ ಪೂರೈಸಲಾಗುವುದು. ಸಿರಿಧಾನ್ಯ ಬಳಕೆ, ಬೆಳೆಗಳಿಗೆ ನಮ್ಮ ಸಂಸ್ಥೆ ವತಿಯಿಂದಲೂ ಹೆಚ್ಚಿನ ಪ್ರೋತ್ಸಾಹವಿದ್ದು ಇದನ್ನು ಬೆಳೆಯಬೇಕು. ಜೊತೆಗೆ ಸ್ವತಃ ನಾವೇ ಇದನ್ನು ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿರಿಧಾನ್ಯ ಖಾದ್ಯ ಘಮಲು: ಇದೇ ಸಂದರ್ಭದಲ್ಲಿ ಕೊರಲೆಯಿಂದ ಮಾಡಿದ 15 ಆಹಾರ ಪದಾರ್ಥ ಗಮನ ಸೆಳೆದವು. ನೈಸರ್ಗಿಕ ಕೃಷಿ, ತೆಂಗಿನ ಎಣ್ಣೆಯಲ್ಲಿ ಕರಿದ ಬಾಳೆಕಾಯಿ ಚಿಪ್ಸ್, ಬೇಲದ ಹಣ್ಣಿನ ಪಾನಕ, ಕೊರಲೆ ಪಾಯಸ, ಉದಲಿನ ಪೊಂಗಲ್‌ನ ತಿಂಡಿಯನ್ನು ನೆರೆದಿದ್ದವರಿಗೆ ಬಡಿಸಲಾಯಿತು. ಮೈಸೂರು ನಿಸರ್ಗ ಟ್ರಸ್ಟ್‌ನ ಬಸವರಾಜು, ಬೆಂಗಳೂರು ಸಾವಯವ ಕೃಷಿ ಟ್ರಸ್ಟ್‌ನ ಸಿದ್ಧರಾಮೇಶ್, ಅಂಬಳೆ ಶಿವಕುಮಾರ್, ಪ್ರವೀಣ್, ಶ್ರೀನಿವಾಸ್, ಮಹಾದೇವಸ್ವಾಮಿ, ನೂರಾರು ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.