Advertisement

ಇತಿಹಾಸದ ಅರಿವು ಮೂಡಿಸಿ

01:03 PM May 21, 2019 | Suhan S |

ಶಿವಮೊಗ್ಗ: ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಸಮಗ್ರವಾಗಿ ಅರಿತವ ಮಾತ್ರ ಸಮರ್ಥವಾಗಿ ಭವಿಷ್ಯವನ್ನು ರೂಪಿಸಬಲ್ಲ ಎಂದು ಇತಿಹಾಸ ತಜ್ಞ ಹಾಗೂ ಹೆಸರಾಂತ ಪ್ರಾಚ್ಯವಸ್ತು ಸಂಗ್ರಹಕಾರ ಎಚ್. ಖಂಡೋಬರಾವ್‌ ಪ್ರತಿಪಾದಿಸಿದರು.

Advertisement

ನಗರದ ಹೊರವಲಯದಲ್ಲಿನ ಲಕ್ಕಿನಕೊಪ್ಪ ಅಮೂಲ್ಯ ಶೋಧ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ತಮಗೆ ನೀಡಲಾದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳಲ್ಲಿ ಇತಿಹಾಸದ ಅರಿವನ್ನು ಮೂಡಿಸಬೇಕು. ನಮ್ಮ ಪರಂಪರೆಯ ಪರಿಚಯ ಮಾಡಿಕೊಡಬೇಕು. ಆಗ ಮಾತ್ರ ಅವರು ಅಭಿಮಾನದಲ್ಲಿ ಬದುಕಲು ಸಾಧ್ಯ ಎಂದರು.

ಇಂದು ಸಮಾಜದಲ್ಲಿ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಅವಜ್ಞೆ ಇದೆ. ಹೀಗಾಗಿ, ನಮ್ಮ ಪಠ್ಯ ಕ್ರಮದಲ್ಲಿಯೂ ಕೂಡಾ ಇತಿಹಾಸವನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಂದಿನ ಪೀಳಿಗೆ ನೈಜ ಇತಿಹಾಸದಿಂದ ವಂಚಿತವಾಗುವ ಅಪಾಯವಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಶಕ್ತಿಮೀರಿ ಈ ಅಮೂಲ್ಯ ಶೋಧ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ನಿರೂಪಿಸಲಾಗಿದೆ. ಇಲ್ಲಿ ರಾಜ್ಯದ ವಿವಿಧೆಡೆಗಳಿಂದ ಸಂಗ್ರಹಿತವಾದ ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.

ಈ ಅಮೂಲ್ಯ ಶೋಧದಲ್ಲಿ ಸ್ವಂತ ಖರ್ಚಿನಿಂದ ಈವರೆಗೆ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಕ್ಯಾಂಟೀನ್‌ ಸೇರಿದಂತೆ, ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಆಸಕ್ತಿಯಿದೆ. ಹೀಗಾಗಿ ದಾನಿಗಳು ಮುಂದೆ ಬಂದು ಸಹಕಾರ ನೀಡಬೇಕು. ಇದು ಶ್ರಮದ ಸಾರ್ಥಕತೆ ಕಾಣುವುದು ಅದು ಪ್ರಯೋಜನವಾದಾಗ ಮಾತ್ರ್ತ್ರ. ಹೀಗಾಗಿ, ನಾಡಿನ ಜನತೆ ಸಾರ್ವಕಾಲಿಕ ಮಹತ್ವದ ಈ ಸಂಗ್ರಹಾಲಯದ ಬಗ್ಗೆ ಗಮನ ಹರಿಸಬೇಕು ಎಂದು ಕೋರಿದರು.

Advertisement

ಯುವಜನ ಚಾರಣ ಸಂಸ್ಥೆ ತನ್ನದೇ ಆದ ರೀತಿಯಲ್ಲಿ ಯುವ ಜನತೆ ಸೇರಿದಂತೆ ಸಾರ್ವಜನಿಕರಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸುವಲ್ಲಿ ಗಮನಾರ್ಹ ಪಾತ್ರವಹಿಸಿದೆ. ಇದರ ಅಂಗವಾಗಿ, ಈಗ ಆರೋಗ್ಯದೆಡೆಗೆ ನಡಿಗೆ ಹೆಸರಿನಲ್ಲಿ ಶಿವಮೊಗ್ಗೆಯಿಂದ ಲಕ್ಕಿನಕೊಪ್ಪವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಈ ವಸ್ತು ಸಂಗ್ರಹಾಲಯ ವೀಕ್ಷಿಸಿದ್ದು ನಿಜಕ್ಕೂ ಕೂಡಾ ಅನುಕರಣೀಯ ಕಾರ್ಯ. ಸಾರ್ವಜನಿಕರಲ್ಲಿ ಈ ಸಾಹಸ ಪ್ರವೃತ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನ್ಮುಖವಾಗಲಿ ಎಂದು ಆಶಿಸಿದರು.

ಯುವಜನ ಚಾರಣ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಜಿ. ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಸ್‌. ಎಸ್‌. ವಾಗೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಯುವ ಮುಖಂಡ ಎಸ್‌. ದತ್ತಾತ್ರಿ, ಜಿಲ್ಲಾ ಸೈಕಲ್ ಕ್ಲಬ್‌ನ ಅಧ್ಯಕ್ಷ ಶ್ರೀಕಾಂತ್‌ ಹಾಗೂ ಅರೋಗ್ಯದೆಡೆಗೆ ನಡಿಗೆ ಕಾರ್ಯಕ್ರಮದ ಸಂಚಾಲಕ ಎಂ. ರಫಿ ಉಪಸ್ಥಿತರಿದ್ದರು.

ನಗರದ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಆವರಣದಿಂದ ಬೆಳಿಗ್ಗೆ 5:30ಕ್ಕೆ ಆರಂಭಗೊಂಡ ಈ ಆರೋಗ್ಯದೆಡೆಗೆ ನಡಿಗೆ, ಲಕ್ಕಿನ ಕೊಪ್ಪದ ಅಮೂಲ್ಯ ಶೋಧದಲ್ಲಿ ಸಂಪನ್ನಗೊಂಡಿತು. 60ಕ್ಕೂ ಹೆಚ್ಚು ಉತ್ಸಾಹಿ ಸಾಹಸಿಗರು ಈ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next