ಆಧಾರ್ ಮಾಹಿತಿಯ ಜತೆಗೆ ವ್ಯವಹರಿಸುವಾಗ ಯಾವ ರೀತಿಯಲ್ಲೂ ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆಯಾಗದಿರಲು ಆಧಾರ್ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಿದೆ ಸಮಿತಿ.
ದತ್ತಾಂಶ ಸಂರಕ್ಷಣೆ ಮತ್ತು ಖಾಸಗಿತನ ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಕಳೆದ ಕೆಲ ಸಮಯದಿಂದೀಚೆಗೆ ಭಾರೀ ಚರ್ಚೆ ಯಾಗುತ್ತಿದೆ. ಜನರ ಬದುಕು ಡಿಜಿಟಲ್ ವ್ಯವಸ್ಥೆಯ ಮೇಲೆ ಹೆಚ್ಚೆಚ್ಚು ಅವಲಂಬಿತವಾಗುತ್ತಿರುವ ಸಂದರ್ಭದಲ್ಲಿ ದತ್ತಾಂಶ ಸಂರಕ್ಷಣೆಗೆ ಸಮಗ್ರವಾದ ಕಾಯಿದೆಯೊಂದರ ಅಗತ್ಯವಿದೆ ಎಂಬ ಅಂಶ ಈ ಚರ್ಚೆಯಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದತ್ತಾಂಶ ಸಂರಕ್ಷಣೆಗಾಗಿ ಕಾನೂನು ರಚಿಸುವ ನಿಟ್ಟಿನಲ್ಲಿ ಕರಡು ಮಸೂದೆಯನ್ನು ರೂಪಿಸಲು ಸರಕಾರ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಬಿ. ಎನ್. ಶ್ರೀಕೃಷ್ಣ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಇತ್ತೀಚೆಗೆ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.
ದತ್ತಾಂಶ ಸೋರಿಕೆ ಮತ್ತು ಕಳವು ಭಾರತ ಮಾತ್ರವಲ್ಲದೆ ಜಗತ್ತಿನಾ ದ್ಯಂತ ಇರುವ ಒಂದು ಸಾಮಾನ್ಯ ಸಮಸ್ಯೆ. ಬಹಳ ಜನಪ್ರಿಯವಾಗಿರುವ ಸಂವಹನ ಮಾಧ್ಯಮ ಫೇಸ್‌ಬುಕ್ ಕೂಡಾ ಇತ್ತೀಚೆಗೆ ದತ್ತಾಂಶ ಕಳವಿನ ಆರೋಪಕ್ಕೆ ಗುರಿಯಾಗಿತ್ತು. ಅದೇ ರೀತಿ ದತ್ತಾಂಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಅನುಮತಿಯಿಲ್ಲದೆ ಬಳಸುವ ಸಮಸ್ಯೆಯೂ ಚರ್ಚೆಗೀಡಾ ಗಿರುವ ವಿಚಾರ. ಹಲವು ಕಂಪೆನಿಗಳು ಜನರಿಗೆ ಅರಿವಿಲ್ಲದಂತೆ ಡಿಜಿಟಲ್ ರೂಪದಲ್ಲಿರುವ ಅವರ ಖಾಸಗಿ ಮಾಹಿತಿಗಳನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿರುವ ದೂರುಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಿವೆ. ಕಾನೂನು ರಚನೆಯ ಅಗತ್ಯ ತಲೆದೋರಲು ಇದೂ ಒಂದು ಕಾರಣವಾಗಿತ್ತು. ಜರ್ಮನಿಯೂ ಸೇರಿದಂತೆ ಯುರೋಪ್‌ನ ಹಲವು ದೇಶಗಳು ಈಗಾ ಗಲೇ ದತ್ತಾಂಶ ಸಂರಕ್ಷಣೆಗಾಗಿ ಕಠಿನ ಕಾನೂನುಗಳನ್ನು ರಚಿಸಿ ಕೊಂಡಿವೆ. ಈ ದೃಷ್ಟಿಯಿಂದ ನೋಡು ವುದಾದರೆ ನಾವಿನ್ನೂ ಕಾಯಿದೆ ರಚನೆಯ ಆರಂಭಿಕ ಹಂತ ದಲ್ಲಿದ್ದೇವೆ. ಅತ್ಯಧಿಕ ಡಿಜಿ ಟಲ್ ಬಳಕೆದಾರರು ಇರುವ ಹೊರತಾಗಿ ಕಾನೂನು ರಚ ನೆಗೆ ನಾವು ಇಷ್ಟು ತಡಮಾಡಿದ್ದೇ ದತ್ತಾಂಶ ದುರ್ಬಳಕೆಯಾಗಲು ಕಾರಣವಾಯಿತು ಎನ್ನುವ ಆರೋಪವೂ ಇದೆ.
ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗಚವಂತಹ ದತ್ತಾಂಶ ಸೋರಿಕೆ ಅಥವಾ ಕಳ್ಳತನವನ್ನು ತಡೆಯುವ ಸಲುವಾಗಿ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಬಯೋಮೆಟ್ರಿಕ್ ದತ್ತಾಂಶಗಳು, ಧರ್ಮ, ಹಣ ಕಾಸು ಸ್ಥಿತಿಗತಿ, ಆರೋಗ್ಯ, ಲೈಂಗಿಕ ಆದ್ಯತೆಗಳು ಇತ್ಯಾದಿ ಖಾಸಗಿ ವಿಚಾರಗಳಿಗೆ ಸಂಬಂಧಿಸಿ ಸಮಿತಿ ಪ್ರತ್ಯೇಕ ವ್ಯಾಖ್ಯಾನಗಳನ್ನೂ ನೀಡಿದೆ. ಬಳಕೆದಾರರ ಅನುಮತಿ ಯಿಲ್ಲದೆ ಖಾಸಗಿ ಮಾಹಿತಿಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳುತ್ತಿರುವ ಫೇಸ್‌ಬುಕ್, ಗೂಗಲ್‌ನಂತಹ ಬಹುರಾಷ್ಟ್ರೀಯ ಡಿಜಿಟಲ್ ಕಂಪೆನಿಗಳಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವ ಅಂಶವೂ ಶ್ರೀಕೃಷ್ಣ ಸಮಿತಿ ರಚಿಸಿರುವ ಕರಡು ಮಸೂದೆಯಲ್ಲಿದೆ. ದತ್ತಾಂಶ ಸಂರಕ್ಷಣೆ ವಿಚಾರ ಬಂದಾಗ 12 ಅಂಕಿಗಳ ಆಧಾರ್ ಕೂಡಾ ಚರ್ಚೆಗೆ ಬರುತ್ತದೆ. ಜಗತ್ತಿನ ಅತಿ ದೊಡ್ಡ ದತ್ತಾಂಶ ಖಜಾನೆ ಎಂಬ ಹಿರಿಮೆಗೆ ಪಾತ್ರವಾಗಿರುವ ಆಧಾರ್ ಮಾಹಿತಿಯ ಜತೆಗೆ ವ್ಯವಹರಿಸುವಾಗ ಯಾವ ರೀತಿಯಲ್ಲೂ ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆಯಾಗದಿರಲು ಆಧಾರ್ ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಿದೆ ಸಮಿತಿ. ಇದಕ್ಕೆ ಸರಕಾರ ತಯಾರಾಗಬಹುದೇ? ಏಕೆಂದರೆ ಆಧಾರ್ ವಿಚಾರಕ್ಕೆ ಬಂದರೆ ಸರಕಾರವೇ ಅದರ ಅತಿ ದೊಡ್ಡ ಬಳಕೆದಾರ.
ದತ್ತಾಂಶ ಸಂರಕ್ಷಣೆ ಕಾಯಿದೆ ಪರಿಣಾಮಕಾರಿಯಾಗಬೇಕಾದರೆ ಸರಕಾರ ತನ್ನ ಕೈಯಲ್ಲಿರುವ ಈ ಅಪೂರ್ವ ಅಧಿಕಾರವನ್ನು ಬಿಟ್ಟು ಕೊಡುವ ಔದಾರ್ಯವನ್ನು ತೋರಿಸಬೇಕಾಗುತ್ತದೆ. ಕರಡು ಮಸೂದೆಗೆ ಸಂಬಂಧಿಸಿ ದಂತೆ ಎಷ್ಟು ಕ್ಷಿಪ್ರವಾಗಿ ಸರಕಾರ ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಮೇಲೆ ಅದರ ಬದ್ಧತೆ ಎಷ್ಟಿದೆ ಎನ್ನುವುದು ನಿರ್ಧಾರವಾಗುತ್ತದೆ. ಖಾಸಗಿ ದತ್ತಾಂಶಗಳನ್ನು ಸಂಬಂಧಪಟ್ಟ ವ್ಯಕ್ತಿಯ ಅನುಮತಿಯಿಲ್ಲದೆ ಉಪಯೋಗಿಸಬಾರದು ಮತ್ತು ಕೊಟ್ಟ ಅನುಮತಿಯನ್ನು ಹಿಂಪಡೆಯುವ ಹಕ್ಕು ವ್ಯಕ್ತಿಗಿರುತ್ತದೆ ಎನ್ನುವುದು ಸಮಿತಿಯ ಮುಖ್ಯ ಶಿಫಾರಸುಗಳಲ್ಲಿ ಒಂದು. ಈ ಅಂಶ ಕಾನೂನಿನಲ್ಲಿ ಸೇರ್ಪಡೆಯಾದರೆ ನಿಜವಾಗಿಯೂ ಜನರಿಗೆ ತಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿಕೊಳ್ಳುವ ಬಲಿಷ್ಠ ಅಸ್ತ್ರವೊಂದು ಸಿಕ್ಕಿದಂತಾಗುತ್ತದೆ. ಅನುಮತಿಯಿಲ್ಲದೆ ದತ್ತಾಂಶ ಬಳಸುವ ಎಲ್ಲ ಬಾಧ್ಯತೆಗಳು ಇಂಟರ್‌ನೆಟ್ ಕಂಪೆನಿಗಳ ಮೇಲಿರುವುದರಿಂದ ದೊಡ್ಡ ಮೊತ್ತದ ಪರಿಹಾರ ಪಡೆಯುವ ಅವಕಾಶವೂ ಇರುತ್ತದೆ. ಜನರ ಖಾಸಗಿ ಮಾಹಿತಿಗಳು ಬಹಳ ಪವಿತ್ರ ಎಂದು ಪರಿಗಣಿಸುವಂತೆ ಮಾಡಲು ಈ ಕಾನೂನು ನೆರವಾಗಬಲ್ಲುದು. ಹೀಗಾಗಿ ಆದಷ್ಟು ತ್ವರಿತವಾಗಿ ಕಾನೂನು ರಚಿಸುವ ಪ್ರಕ್ರಿಯೆಯನ್ನು ಮುಗಿಸಲು ಸರಕಾರ ಮನಸು ಮಾಡಬೇಕು.