Advertisement

ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರ ಪ್ರೇಮ ಮೂಡಿಸಿ

09:07 PM Jun 17, 2019 | Lakshmi GovindaRaj |

ನೆಲಮಂಗಲ: ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಅಂಕಗಳನ್ನು ಗಳಿಸಿಕೊಳ್ಳಲು ನೀಡುವ ಪ್ರೋತ್ಸಾಹವನ್ನು ರಾಷ್ಟ್ರ ಪ್ರೇಮ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳು ನೀಡಬೇಕು ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತ ಭಾರತ ಸೇವಾದಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಮ್ಮ ಮಕ್ಕಳನ್ನು ಸರ್ಕಾರ ಶಾಲೆಗೆ ಸೇರಿಸಿ ಶೀರ್ಷಿಕೆಯಡಿ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರಿ ಸೌಲಭ್ಯಗಳನ್ನು ಉಪಯೋಸಿಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಿ ದೇಶ ಸುಭದ್ರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಭಾರತ ಸೇವಾದಳ ಸಮಿತಿ ಪರಿಣಾಮಕಾರಿಯಾಗಿ ಕರ್ಯನಿರ್ವಹಿಸುತಿದೆ. ಮಕ್ಕಳಿಗೆ ದೇಶಭಕ್ತಿ ಮತ್ತು ರಾಷ್ಟ್ರ ಪ್ರೇಮದ ಕುರಿತಾಗಿ ಬಾಲ್ಯದಲ್ಲಿ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ.

ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿಯಿಂದಾಗಿ ಸಾಕಷ್ಟು ಪೋಷಕರು ಸಾಲದ ಸಂಕಷ್ಟವನ್ನು ಎದುರಿಸುವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಸೇರಿದಂತೆ ಪಠ್ಯಪುಸ್ತಕ ಲೇಖನಿ ಸಾಮಾಗ್ರಿ, ಶೈಕ್ಷಣಿಕ ಮಾರ್ಗದರ್ಶಿ, ವಿದ್ಯಾರ್ಥಿ ವೇತನ, ಕಂಪ್ಯೂಟರ್‌ ಶಿಕ್ಷಣ, ಯೋಗ

ಮತ್ತು ನೈತಿಕ ಶಿಕ್ಷಣ, ರಾಷ್ಟ್ರೀಯ ಭಾವೈಕ್ಯತೆ ಸೇರಿದಂತೆ ಸಾಕಷ್ಟು ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಟ್ಟಾರೆ ಮಕ್ಕಳಲ್ಲಿ ಅಡಕವಾಗಿರುವ ಸೃಜನಶೀಲತೆ ಮತ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವಲ್ಲಿ ಸರ್ಕಾರಿ ಶಾಲೆಗಳು ಪ್ರಮುಖವಾಗಿವೆ ಎಂದರು.

Advertisement

ಭಾರತ ಸೇವಾ ದಳ ಜಿಲ್ಲಾ ಸಂಘಟಕ ಶಿವಕುಮಾರ್‌ ಮಾತನಾಡಿ, ಭಾರತ ಸೇವಾದಳ ದೇಶದ ಸ್ವಾತಂತ್ರ ಹೋರಾಟದಲ್ಲಿ ತನ್ನದೇ ಕೊಡುಗೆ ನೀಡಿದೆ. ವಿದ್ಯಾರ್ಥಿಗಳಿಗೆ ದೇಶಭಕ್ತಿ ಮತ್ತು ನಾಡುನುಡಿಯ ಕುರಿತಾದ ಗೌರವ ರಾಷ್ಟ್ರ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲಾ ಎಂದರು.

ದಾಖಲಾತಿ ಅಭಿಯಾನ: ಸರ್ಕಾರಿ ಹಿರಿಯ ಮಾದರಿ ಶಾಲೆಯ ಆವರಣದಲ್ಲಿ ಪ್ರಾರಂಭವಾದ ದಾಖಲಾತಿ ಆಂದೋಲನ ಜಾಥಾ ಪಟ್ಟಣ ಮುಖ್ಯಬೀದಿಗಳಲ್ಲಿ ಸಾಗಿ ಮಕ್ಕಳನ್ನು ತಪ್ಪದೆ ಶಾಲೆಗೆ ಸೇರಿಸಿ, ಶಿಕ್ಷಣದಿಂದ ಮಕ್ಕಳನ್ನು ವಂಚಿಸಬೇಡಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, ವಿದ್ಯಾಭ್ಯಾಸ ನನ್ನ ಶಕ್ತಿ ನನ್ನ ಭವಿಷ್ಯ, ಕೂಲಿಯಿಂದ ಶಾಲೆಗೆ, ಶಿಕ್ಷಣವು ಪ್ರತಿಯೊಬ್ಬರ ನೈತಿಕ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಶಾಲಾ ಮಕ್ಕಳೊಂದಿಗೆ ಪಟ್ಟಣದಲ್ಲಿ ಜಾಥಾ ನಡೆಸಲಾಯಿತು.

ಸೇವಾದಳ ಜಿಲ್ಲಾಅಧ್ಯಕ್ಷ ಕೆ.ಎನ್‌.ಪ್ರಕಾಶ್‌, ಕಾರ್ಯಾಧ್ಯಕ್ಷ ಕೆ.ಜಿ. ಭೀಮರಾಜು, ತಾಲೂಕು ಕಾರ್ಯಾಧ್ಯಕ್ಷ ಜಿ.ವಿ.ಕುಮಾರ್‌, ಕಾರ್ಯದರ್ಶಿ ಆರ್‌.ಜಿ.ಬಸವರಾಜು, ಅಕ್ಷರ ದಾಸೋಹದ ನಿರ್ದೇಶಕ ಶಿವಕುಮಾರ್‌, ಟಿಪಿಒ ಗುರು ಪ್ರಕಾಶ್‌, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಲೊಕೇಶ್‌, ಹುಚ್ಚ ಭೈರಯ್ಯ, ಶಿಕ್ಷಕ ಮುಖಂಡ ರೇಣುಕಸ್ವಾಮಿ, ಶಿವಶಂಕರ್‌, ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next