Advertisement

ಕುಟುಂಬದ ಹೊರಗಿನವರನ್ನು ನಿಮ್ಮ ಪಕ್ಷದ ಅಧ್ಯಕ್ಷರನ್ನಾಗಿಸಿ

07:53 AM Nov 17, 2018 | Team Udayavani |

ಅಂಬಿಕಾಪುರ/ಜೈಪುರ: “ಸಾಧ್ಯವಿದ್ದರೆ ನೆಹರೂ- ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲಿ. ಹಾಗಾದರೆ ಮಾತ್ರ ಆ ಪಕ್ಷದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆ ಎಂಬುದನ್ನು ನಾನು ನಂಬುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. ಈ ಮೂಲಕ ಚಾಯ್‌ವಾಲ ಪ್ರಧಾನಿಯಾಗಲು ನೆಹರೂ ಸ್ಥಾಪಿಸಿದ ಸಾಂಸ್ಥಿಕ ಸಂಸ್ಥೆಗಳೇ ಮೂಲ ಕಾರಣ ಎಂದಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹಾಗೂ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿ ಕಾರ್ಜುನ ಖರ್ಗೆಗೆ ಪ್ರಧಾನಿ ಮೋದಿ ಶುಕ್ರವಾರ ಬಲವಾದ ತಿರುಗೇಟು ನೀಡಿದ್ದಾರೆ. “ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್‌ ಉಳಿಸಿಕೊಂಡಿದ್ದರಿಂದ ಚಾಯ್‌ವಾಲಾ ಪ್ರಧಾನಿ ಯಾಗಲು ಸಾಧ್ಯವಾಯಿತು’ ಎಂದು ಈ ಹಿಂದೆ ಖರ್ಗೆ ಹೇಳಿದ್ದರು. ಹೀಗಾಗಿ ಪ್ರಧಾನಿ ಮೋದಿ ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ.

Advertisement

ಪಂಡಿತ್‌ ನೆಹರೂ ಅವರಿಂದಲೇ ಚಾಯ್‌ವಾಲಾ ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಾರೆ. ನೀವು ಪ್ರಜಾಪ್ರಭುತ್ವ, ಸಂವಿಧಾನವನ್ನು ಗೌರವಿಸು ವುದೇ ಆದರೆ ಗಾಂಧಿ- ನೆಹರೂ ಕುಟುಂಬದ ಹೊರಗಿನ ವ್ಯಕ್ತಿಯನ್ನು ಕೇವಲ 5 ವರ್ಷ ಕಾಲ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಿಸಿ. ಒಂದು ವೇಳೆ ನೀವು ಅಂಥ ತೀರ್ಮಾನ ಕೈಗೊಂಡರೆ ನಿಷ್ಠನಾಗಿರುವ ವ್ಯಕ್ತಿಗೆ ಕೂಡ ಕಾಂಗ್ರೆಸ್‌ನಲ್ಲಿ ಅಧ್ಯಕ್ಷನಾಗುವ ಅವಕಾಶ ಸಿಗುತ್ತದೆ. ನೆಹರೂಜಿ ಅಂಥ ಪ್ರಜಾ ಸತ್ತಾತ್ಮಕ ವ್ಯವಸ್ಥೆಯನ್ನು ಸೃಜಿಸಿದ್ದರು ಎಂದು ಹೇಳ ಬಹುದು ಎಂದು ಮೋದಿ ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿಯವರ “ಐದು ವರ್ಷ’ ಎಂಬ ಪ್ರಸ್ತಾ ಪವೂ ಮಹತ್ವ ಪಡೆದಿದೆ. ಕೇಂದ್ರ ಮಾಜಿ ಸಚಿವ ಸೀತಾರಾಮ್‌ ಕೇಸರಿ 1996ರ ಸೆಪ್ಟಂಬರ್‌ನಿಂದ 1998ರ ಮಾರ್ಚ್‌ ವರೆಗೆ ಪಕ್ಷದ ಅಧ್ಯಕ್ಷ ರಾಗಿದ್ದರು. ಅವರಿಗೆ ಐದು ವರ್ಷಗಳ ಕಾಲ ಪೂರ್ತಿ ಹುದ್ದೆ ಯಲ್ಲಿರಲು ಸಾಧ್ಯವಾಗಿಲ್ಲ ಎಂದು ಪರೋಕ್ಷ ವಾಗಿ ಪ್ರಸ್ತಾಪ ಮಾಡಿದಂತಾಗಿದೆ. 

ನಾಲ್ಕು ದಶಕಗಳ ಕಾಲ ದೇಶವನ್ನಾಳಿದ ಬಳಿಕ ಚಾಯ್‌ ವಾಲಾ ದೇಶದ ಪ್ರಧಾನಿಯಾದದ್ದು ಅವರಿಗೆ ಸಹಿಸಲಾಗುತ್ತಿಲ್ಲ. “ಅವರು (ಗಾಂಧಿ ಕುಟುಂಬ) ಚಾಯ್‌ವಾಲಾ ಪ್ರಧಾನಿ ಹೇಗೆ ಆದ ಎಂದು ಅಳುತ್ತಿದ್ದಾರೆ. ಬಡ ಕುಟುಂಬದ ಮಹಿಳೆಯ ಮಗ ರಾಜ ಗದ್ದುಗೆಯನ್ನು ಅಲಂಕರಿಸಿದ ಎಂಬುದನ್ನು ತಿಳಿದುಕೊಳ್ಳಲು ವಿಫ‌ಲರಾಗಿದ್ದಾರೆ’ ಎಂದು ಮೋದಿ ಲಘುವಾಗಿಯೇ ತರಾಟೆಗೆ ತೆಗೆದು ಕೊಂಡಿದ್ದಾರೆ. ನೋಟು ಅಮಾನ್ಯವನ್ನು ಪ್ರಶ್ನಿಸು ವುದಕ್ಕೆ ಮತ್ತು ಟೀಕಿಸುವುದಕ್ಕೆ ಲೇವಡಿ ಮಾಡಿದ ಪ್ರಧಾನಿ, “ಅವರ ಬಳಿ ಹಾಸಿಗೆಯ ಕೆಳಗೆ ಮತ್ತು ಇತರೆಡೆ ಬಚ್ಚಿಟ್ಟಿರುವ ಅಕ್ರಮ ಹಣ ಇರಬಹುದು. ನಾಲ್ಕು ತಲೆಮಾರು ಗಳಿಂದ ನಿಮ್ಮ ಕುಟುಂಬ ದೇಶಕ್ಕೇನು ನೀಡಿದೆ ಎಂಬುದರ ವಿವರ ಕೊಡಿ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಪಟ್ಟಿ ಬಿಡುಗಡೆ: ಡಿ.7ರಂದು ನಡೆಯಲಿರುವ ರಾಜಸ್ಥಾನ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ 152 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ 25 ಮಂದಿಯ ಪೈಕಿ 20 ಮಂದಿ ಹಾಲಿ ಶಾಸಕರಿಗೆ ಸ್ಪರ್ಧೆಗೆ ಅನುವು ಮಾಡಿ ಕೊಟ್ಟಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ 19 ಮಹಿಳೆ ಯರಿಗೆ ಅವಕಾಶ ನೀಡಿದ್ದರೆ, ಒಬ್ಬನೇ ಒಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್‌ ನೀಡಿಲ್ಲ. ಕಾಂಗ್ರೆಸ್‌ನಲ್ಲಿ ನಾಯಕರ ಕುಟುಂಬ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲು ಅವಕಾಶ ಮಾಡಿಕೊಡಲಾಗಿದೆ. 

ನೋಟು ಅಮಾನ್ಯ ದೊಡ್ಡ ಹಗರಣ: ಮಧ್ಯ ಪ್ರದೇಶದ ಸಾಗರ್‌ ಮತ್ತು ಭೋಪಾಲ್‌ನಲ್ಲಿ ಮಾತ ನಾಡಿದ  ಕಾಂಗ್ರೆಸ್‌ ಅಧ್ಯಕ್ಷೆ ರಾಹುಲ್‌ ಗಾಂಧಿ ನೋಟು ಅಮಾನ್ಯ ಅತಿದೊಡ್ಡ ಹಗರಣ ಎಂದು ಟೀಕಿಸಿದ್ದಾರೆ. ಈಗಾಗಲೇ ಹಲವು ಉದ್ಯಮಿಗಳ ಸಾಲ ಮನ್ನಾ ಮಾಡಿದ ಪ್ರಧಾನಿ ಮೋದಿ ಇನ್ನೂ ಹಲವರ ಸಾಲ ಮನ್ನಾ ಮಾಡಲಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ, ನಕಲಿ ಪದವಿ ಪ್ರಮಾಣ ಪತ್ರ ಒದಗಿಸುವಂಥ ವ್ಯಕ್ತಿಗಳಿಗೆ ಬಿಜೆಪಿ ತ್ವರಿತ ಪ್ರವೇಶ ನೀಡುತ್ತದೆ ಎಂದು ಟ್ವೀಟ್‌ ಮೂಲಕವೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಬಿಜೆಪಿ ಜತೆ ಹೋಗಲ್ಲ: ಈ ನಡುವೆ, ಯಾವುದೇ ಸನ್ನಿವೇಶದಲ್ಲೂ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ನಾಯಕ ಕೆ.ಟಿ.ರಾಮ ರಾವ್‌ ಸ್ಪಷ್ಟ ಪಡಿಸಿದ್ದಾರೆ. ಏಕಾಂಗಿಯಾಗಿ ಸ್ಪರ್ಧಿಸಿರುವ ಟಿಆರ್‌ಎಸ್‌ ಚುನಾವಣೆ ನಂತರ ಬಿಜೆಪಿ ಜತೆ ಕೈಜೋಡಿ ಸಲಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಸಂಬಂಧಿಸಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಟಿಎಂಸಿ ಶುದ್ಧೀಕರಣ ರ್ಯಾಲಿ: ಡಿಸೆಂಬರ್‌ 5ರಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಡೆಸಲಿರುವ ರಥ ಯಾತ್ರೆಯನ್ನು ಸಿಎಂ ಮಮತಾ ಬ್ಯಾನರ್ಜಿ “ರಾವಣ ಯಾತ್ರೆ’ ಎಂದು ಕರೆದಿದ್ದಾರೆ. ಅಲ್ಲದೆ, ಬಿಜೆಪಿಯ ರಥಯಾತ್ರೆ ಸಾಗಿದ ದಾರಿಯುದ್ದಕ್ಕೂ ನಮ್ಮ ಕಾರ್ಯಕರ್ತರು ಶುದ್ಧೀಕರಣ ಪ್ರಕ್ರಿಯೆ ನಡೆಸಿ, ಬಳಿಕ ಅಲ್ಲಿ “ಏಕತಾ ಯಾತ್ರೆ’ ಕೈಗೊಳ್ಳಲಿದ್ದಾರೆ ಎಂದೂ ಮಮತಾ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿ ಸಿರುವ ಬಿಜೆಪಿ, ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಟಿಎಂಸಿಗೆ ಖಾತ್ರಿಯಾಗಿದೆ. ಅದಕ್ಕಾಗಿ, ಮಮತಾ ಭಯಭೀತರಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದೆ.

ಶಕುನಿ,  ಕಂಸನಂತೆ ಶಿವರಾಜ್‌ ಸಿಂಗ್‌ ಚೌಹಾಣ್‌
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮಹಾಭಾರತ ಶಕುನಿ, ಕಂಸನಂತೆ ಎಂದು ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಟೀಕಿಸಿದ್ದಾರೆ. ಚೌಹಾಣ್‌ರನ್ನು ಆತ್ಮೀಯ ವಲಯದಲ್ಲಿ “ಮಾಮ’ ಎಂದು ಕರೆಯಲಾಗುತ್ತಿದೆ. “ಶಿವರಾಜ್‌ ಸಿಂಗ್‌ ತಾವು ಮಾಮಾ ಎಂದು ಕರೆಯಿಸಿಕೊಳ್ಳುತ್ತಾರೆ. ಬಿಜೆಪಿಯೂ ಅದನ್ನು ಹೇಳುತ್ತಿದೆ. ಅವರೇ ಹಿಂದುತ್ವದ ರಕ್ಷಕ ಎಂದು ಹೇಳುತ್ತಿದೆ. ನಾವು ಅದನ್ನು ಒಪ್ಪಿಕೊಂಡರೂ, ಮಹಾಭಾರತದಲ್ಲಿ ಬರುವ ಮಾಮಂದಿಗಳಾದ ಕಂಸ, ಶಕುನಿ ಪಾತ್ರ ಏನನ್ನು ತಿಳಿಸುತ್ತದೆ’ ಎಂದು ಪ್ರಶ್ನಿಸಿದ್ದಾರೆ. ಕಂಸ ತನ್ನ ಸೋದರಳಿಯ ಕೃಷ್ಣನನ್ನು ಕೊಲ್ಲಲು ಮುಂದಾದ. ಶಕುನಿ ಹಸ್ತಿನಾಪುರದ ರಾಜವಂಶವನ್ನೇ ನಾಶ ಮಾಡಿದ. ಈಗ ಕಲಿಯುಗದಲ್ಲಿ ಮೂರನೇ ವ್ಯಕ್ತಿ ಭೋಪಾಲದ ವಿಧಾನಸೌಧದಲ್ಲಿ ಕುಳಿತಿದ್ದಾರೆ ಎಂದರು.

ನಿಮ್ಮ ಅಜ್ಜ-ಅಜ್ಜಿ ಏಕೆ ಕೆಲಸ ಮಾಡಲಿಲ್ಲ?
ಬಿಜೆಪಿಯನ್ನು ಉದ್ಯಮಪತಿಗಳ ಪಕ್ಷ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸುವುದಕ್ಕೆ ತಿರುಗೇಟು ನೀಡಿದ ಪ್ರಧಾನಿ “ನಿಮ್ಮ ಅಜ್ಜ ಅಜ್ಜಿ ಛತ್ತೀಸ್‌ಗಡ‌ದಲ್ಲಿ ನೀರು ಪೂರೈಸಲು ಪೈಪ್‌ಗ್ಳನ್ನು ಹಾಕಿದ್ದರೇ? ಅಥವಾ ನೀವು ಹಾಕಿದ್ದ ಪೈಪ್‌ಲೈನ್‌ ಅನ್ನು ರಮಣ್‌ ಸಿಂಗ್‌ ನಾಶಮಾಡಿದರೇ? ನಾಲ್ಕು ದಶಕಗಳ ಕಾಲ ದೇಶದಲ್ಲಿ ನಿಮ್ಮದೇ ಆಡಳಿತ ಇದ್ದರೂ ನೀವೇಕೆ ಅದನ್ನು ಮಾಡಲಿಲ್ಲ?  ಅದಕ್ಕೆ ಕಾರಣ ಕೊಟ್ಟ ಬಳಿಕ ನಾವೇಕೆ ಏನೂ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿ’ ಎಂದೂ ಕಾಂಗ್ರೆಸ್‌ ಅನ್ನು ಮೋದಿ ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next