Advertisement

ನನ್ನನ್ನು ವಿಧಾನಸೌಧದೊಳಗೆ ನೋಡುವಂತೆ ಮಾಡಿ: ಡಿಕೆಶಿ

11:50 PM Nov 27, 2022 | Team Udayavani |

ಬೆಂಗಳೂರು: ನನ್ನ ಕೈಗೆ ಪೆನ್ನು, ಹಾಳೆಯನ್ನು ನೀಡಿ ವಿಧಾನಸೌಧದೊಳಗೆ ನೋಡುವಂತೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ಸಮುದಾಯದವರಲ್ಲಿ ಮನವಿ ಮಾಡಿದರು. ಆ ಮೂಲಕ ತನ್ನನ್ನು ಮುಖ್ಯಮಂತ್ರಿ ಮಾಡಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

Advertisement

ರವಿವಾರ ರಾಜ್ಯ ಒಕ್ಕಲಿಗರ ಸಂಘ, ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೀಸಲಾತಿ ಹೆಚ್ಚಳ ಸಂಬಂಧದ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆಯೇ ಒಕ್ಕಲಿಗ ಸಂಘದ ಆವರಣದಲ್ಲಿ ನಡೆದ ಸಭೆ ಯಲ್ಲಿ ಈ ಬಗ್ಗೆ ಹೇಳಿದ್ದೆ. ಈಗ ಮತ್ತೆ ಮನವಿ ಮಾಡುತ್ತಿದ್ದೇನೆ. ನನ್ನ ಕೈಯನ್ನು ಬಲಪಡಿಸಿ ಹಾಗೂ ನನ್ನ ಕೈಗೆ ಪೆನ್ನು, ಹಾಳೆಯನ್ನು ನೀಡಿ ಎಂದು ಹೇಳಿದರು.

ಎಸ್‌.ಎಂ.ಕೃಷ್ಣ ಅವರ ಬಳಿಕ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಆಲಂಕರಿಸಿದ್ದೇನೆ. ನಾನು ಒಕ್ಕಲಿಗ ಸಮುದಾಯದವ ಆಗಿರುವ ಹಿನ್ನೆಲೆಯಲ್ಲಿ ಹಲವು ಅವಕಾಶಗಳು ಸಿಕ್ಕಿವೆ ಎಂದರು. ಈಗಾಗಲೇ ಆರ್‌.ಅಶೋಕ್‌ ಸಚಿವರಾಗಿದ್ದಾರೆ. ನಮ್ಮ ಸಮುದಾಯದವರೇ ಆಗಿರುವ ಸುಧಾಕರ್‌, ಗೋಪಾಲಯ್ಯ ಕೂಡ ಸಚಿವರಾಗಿದ್ದಾರೆ. ಅವರು ಒಕ್ಕಲಿಗ ಸಮುದಾಯದವರಾಗಿರುವ ಹಿನ್ನೆಲೆ ಯಲ್ಲಿಯೇ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ರಾಜಕೀಯವೇ ಬೇರೆ ಸಮುದಾಯವೇ ಬೇರೆ. ಆದರೆ ಸಮುದಾಯದ ವಿಚಾರಕ್ಕೆ ಬಂದಾಗ ಕೆಪಿಸಿಸಿ ಹುದ್ದೆಯನ್ನು ಪಕ್ಕಕ್ಕೆ ಇಟ್ಟು ಸಮುದಾಯದ ಒಳಿತಿನಲ್ಲಿ ಭಾಗವಹಿಸುತ್ತೇನೆ. ಈ ಹಿಂದೆ ನಾನು ಜೈಲಿಗೆ ಹೋದಾಗ ನಮ್ಮ ಸಮುದಾಯದರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ನಾನು ಋಣಿಯಾಗಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next