ಬಾಗಲಕೋಟೆ: ನಿರುದ್ಯೋಗಿ ಪದವೀಧರ ಯುವಕ, ಯುವತಿಯರು ನೌಕರಿಗಾಗಿ ಕಾಲಹರಣ ಮಾಡದೆ ಸ್ವಯಂ ಉದ್ಯೋಗ ತರಬೇತಿಗಳನ್ನು ಪಡೆದು ಸ್ವಂತ ಉದ್ಯೋಗ ಮಾಡಿ ಬದುಕು ರೂಪಿಸಿಕೊಳ್ಳುವುದರ ಜೊತೆಗೆ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಮನ್ನಿಕೇರಿ ದಿಗಂಬರೇಶ್ವರ ಮಠದ ನಿರ್ವಾಣ ಸ್ವಾಮೀಜಿ ಹೇಳಿದರು.
ಬೀಳಗಿ ತಾಲೂಕಿನ ಅರಕೇರಿ ಗ್ರಾಮದಲ್ಲಿ ಆಯೋಜಿಸಿದ ಪ್ರಜಾಗುರಿ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಪರಿಸರ ಜಾಗೃತಿ, ನೀರಿನ ಮಹತ್ವ, ಮಾರಕ ರೋಗಗಳ ಕುರಿತು ಜಾಗೃತಿ ಮೂಡಿಸಲಿ ಎಂದರು.
ಗಿಡ ಮರಗಳನ್ನು ಕಡಿದ ಪರಿಣಾಮ ಮಳೆ ಬೀಳದೆ ಬರಗಾಲ ಆವರಿಸುವಂತಾಗಿದೆ. ಆದ್ದರಿಂದ ರೈತರು ಜಮೀನುಗಳ ಬದುಗಳಲ್ಲಿ ಸಸಿ ನೆಟ್ಟು ಬೆಳೆಸಬೇಕು. ಭೂಮಿ ಇಲ್ಲದವರು ಮನೆಯ ಅಂಗಳದಲ್ಲಿಯಾದರೂ ಗಿಡ ನೆಟ್ಟು ಸಂರಕ್ಷಣೆ ಮಾಡಿ ಪರಿಸರ ಕಾಪಾಡಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಚ್‌ಪಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಬಿ. ಎಸ್. ಭೂಷಣ್ಣವರ, ಅತಿಥಿಯಾಗಿ ಆಗಮಿಸಿದ್ದ ಮುಖ್ಯಶಿಕ್ಷಕ ಐ.ಎಚ್. ಬಳಿಗಾರ, ಪ್ರಜಾಗುರಿ ಗ್ರಾಮೀಣಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಅಧ್ಯಕ್ಷ ಡಿ. ಎಂ. ಸಾಹುಕಾರ ಮಾತನಾಡಿದರು.
ಬಾಗಲಕೋಟೆಯ ದಿವ್ಯದರ್ಶನ ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಡಾ| ಪ್ರಹ್ಲಾದ ಭೋಯಿ, ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ. ಕೆ. ಕಂಬಾರ, ಆಶುಕವಿ
ಸದಾಶಿವ ಆಗೋಜಿ, ಸಂಸ್ಥೆಯ ಕಾರ್ಯದರ್ಶಿ ಜಿ.ಜಿ. ಮೇಟಿ, ಈರಪ್ಪ ತೆಗ್ಗೆನ್ನವರ ಮತ್ತಿತರಿದ್ದರು. ಎಸ್.ಬಿ. ಆಗೋಜಿ ಪ್ರಾರ್ಥಿಸಿದರು. ಮೌನೇಶ ಕಂಬಾರ ಸ್ವಾಗತಿಸಿದರು. ಸದ್ದಾಂ ವಾಲೀಕಾರ ನಿರೂಪಿಸಿದರು. ಮಂಜು ಬಡಿಗೇರ ವಂದಿಸಿದರು.