ಆಳಂದ: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಹತ್ವದ್ದುಳ್ಳದ್ದಾಗಿದ್ದು, ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು. ಪಟ್ಟಣದ ವಿವೇಕ ವರ್ಧಿನಿ ಪಬ್ಲಿಕ್ ಶಾಲೆ ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಯ್ದ ಗ್ರಾಪಂ ಸದಸ್ಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚೆಕ್ ಮೇಲೆ ಸಹಿ ಮಾಡುವ ಅಧಿಕಾರ ದೇಶದ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗಳಿಗೂ ಇಲ್ಲ. ಆ ಅಧಿಕಾರವನ್ನು ಗ್ರಾಪಂ ಅಧ್ಯಕ್ಷರಿಗೆ ನೀಡಲಾಗಿದೆ. ಇದನ್ನು ಅರಿಯಬೇಕು ಎಂದರು.
ದಿನ ಬೆಳಗಾದರೆ ಗ್ರಾಪಂ ಅಧ್ಯಕ್ಷರು ಪಿಡಿಒ ಮನೆ ಬಾಗಿಲಿಗೆ ಹೋಗಿ ನಿಲ್ಲುವುದನ್ನು ಬಿಡಬೇಕು. ಅಧಿಕಾರ ಬಳಸಿಕೊಂಡು ಗ್ರಾಮ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಹೇಳಿದರು. ಗ್ರಾಮಾಭಿವೃದ್ಧಿಗೆ ಗ್ರಾಪಂಗಳೇ ನಿಜವಾದ ಶಕ್ತಿಸೌಧ, ಅಧಿಕಾರ ವಿಕೇಂದ್ರಿಕರಣ ಮಾಡಿ ಚುನಾಯಿತ ಸದಸ್ಯರಿಗೆ ಅವರ ವ್ಯಾಪ್ತಿಗೆ ತಕ್ಕಂತೆ ಅಧಿಕಾರ ನೀಡಲಾಗಿದೆ.
ಗ್ರಾಪಂ, ತಾಪಂ, ಜಿಪಂ ಕ್ಷೇತ್ರಗಳ ಕಾರ್ಯ ನಿರಂತರವಾಗಿ ನಡೆಯುತ್ತದೆ. ಮಾಜಿ ಮುಖ್ಯಮಂತ್ರಿ ದಿ| ರಾಮಕೃಷ್ಣ ಹೆಗಡೆ ಮತ್ತು ಗ್ರಾಮಿಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರಸಾಬ್ ದೂರದೃಷ್ಟಿ ಇಟ್ಟುಕೊಂಡು ಗ್ರಾಪಂಗಳಿಗೆ ಹೆಚ್ಚಿನ ಅನುದಾನ, ಅಧಿಕಾರ ನೀಡುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ನೀಡಿದರು ಎಂದರು.
ಚುನಾಯಿತ ಗ್ರಾಪಂ ಸದಸ್ಯರು ಕುಡಿಯುವ ನೀರು, ಬೀದಿ ದೀಪ, ಚರಂಡಿ ಶುಚಿತ್ವ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು. ನರೇಗಾದಲ್ಲಿ ಸಸಿಗಳನ್ನು ನೆಡುವದು, ಹೊಲಗಳಿಗೆ ಹೋಗುವ ದಾರಿ, ನಾಲಾ, ಚೆಕ್ ಡ್ಯಾಂ, ಬಾವಿಗಳ ಹೂಳೆತ್ತುವ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪಂಚಾಯಿತಿ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಸತೀಶ ಉಪನ್ಯಾಸ ನೀಡಿ, ಗ್ರಾಪಂ ಅಧ್ಯಕ್ಷರು, ಸದಸ್ಯರು ಶಾಸಕರು, ಸಂಸದರ ಕಡೆ ಮುಖ ಮಾಡದೇ ಗ್ರಾಪಂ ಅನುದಾನವನ್ನೇ ಬಳಸಿ ದಕ್ಷ ಹಾಗೂ ಪ್ರಮಾಣಿಕತೆಯಿಂದ ಸೇವೆ ಮಾಡಿದರೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಮುಖಂಡರಾದ ಶರಣಗೌಡ ಪಾಟೀಲ, ಸತೀಶ ಪನಶಟ್ಟಿ, ಗಣೇಶ ಪಾಟೀಲ, ಮಲ್ಲಿನಾಥ ಪಾಟೀಲ, ರಾಮಚಂದ್ರ ಸುತಾರ, ಶಿವಪುತ್ರಪ್ಪ ಕೊಟ್ಟರಕಿ ಇದ್ದರು. ನಂತರ ಗ್ರಾಪಂಗೆ ಒಂದರಂತೆ ಪಂಚಾಯತ್ ರಾಜ್ ಕಾಯ್ದೆ, ಸದಸ್ಯರ ಹಕ್ಕು, ಕರ್ತವ್ಯ, ಪಿಡಿಒ ಕೆಲಸ ಕುರಿತ ಪುಸ್ತಕ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.