Advertisement

ಅರೆ ನೀರಾವರಿ ಬೆಳೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ

11:32 AM Aug 15, 2017 | Team Udayavani |

ಮೈಸೂರು: ಸತತವಾಗಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗುತ್ತಿರುವುದರಿಂದ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಕಡಿಮೆ ನೀರು ಬಳಕೆ ಮಾಡಿಕೊಂಡು ಬೆಳೆಯಬಹುದಾದ ಅರೆ ನೀರಾವರಿ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಿ. ರಂದೀಪ್‌ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, 2000ನೇ ಇಸವಿಯಿಂದ 2017ನೇ ಇಸವಿಯವರಿನ ಅಂಕಿಅಂಶಗಳನ್ನು ನೋಡಿದರೆ, ಈ 17 ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಂದೆರಡು ವರ್ಷಗಳನ್ನು ಬಿಟ್ಟರೆ, ಉಳಿದ 15 ವರ್ಷಗಳ ಕಾಲ ಮಳೆಯ ಕೊರತೆ ಎದುರಾಗಿದೆ ಎಂದರು.

ವಾರ್ಷಿಕ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬೀಳುತ್ತಿರುವುದರಿಂದ ಕಾವೇರಿ ಕಣಿವೆಯ ಜಲಾಶಯಗಳು ಭರ್ತಿಯಾಗುತ್ತಿಲ್ಲ. ಹೀಗಾಗಿ ರೈತರಿಗೆ ಪರ್ಯಾಯ ಬೆಳೆ ಪದ್ಧತಿ ಬಗ್ಗೆ ಅರಿವು ಮೂಡಿಸುವ ಮೂಲಕ ಹಂತ ಹಂತವಾಗಿ ಹೆಚ್ಚು ನೀರು ಅವಶ್ಯವಿರುವ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿಸಿ ಎಂದು ಹೇಳಿದರು.

ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ 2 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು, 35 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ, 40 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ, 25 ಸಾವಿರ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, 2 ಸಾವಿರ ಎಕರೆ ಪ್ರದೇಶದಲ್ಲಿ ನೆಲಗಡಲೆ ಹಾಗೂ ಬಾಳೆ ಬೆಳೆಯಲು ರೈತರಿಗೆ ಅರಿವು ಮೂಡಿಸಿ, ಅವರ ಜತೆ ಕೈಜೋಡಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

51,200 ಎಕರೆ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತಿದ್ದು, ಈ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಿಸಿ, ಅಂತರ್ಜಲ ಹೆಚ್ಚಳದ ಮೂಲಕ ಮಣ್ಣಿನ ಸವಕಳಿ ತಪ್ಪಿಸಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಹೇಳಿದರು.

Advertisement

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌, ಜಿಲ್ಲೆಯಲ್ಲಿ ಅವೈಜಾnನಿಕವಾಗಿ ತೆಂಗು ಬೆಳೆದಿರುವುದರಿಂದ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ತೆಂಗು ಬೆಳೆಗೆ ಸೂಕ್ತವಾದ ಪ್ರದೇಶಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ ಎಂದರು. ಆ.16ರಂದು ನೀರಾವರಿ ಇಲಾಖೆ ಅಧಿಕಾರಿಗಳೂ ಸೇರಿದಂತೆ ಕೃಷಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, 20ರೊಳಗೆ ಜಿಲ್ಲೆಯ ಮಳೆ-ಬೆಳೆ ಪರಿಸ್ಥಿತಿಯ ವರದಿ  ಸರ್ಕಾರಕ್ಕೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು, ಹುಣಸೂರು ಉಪ ವಿಭಾಗಾಧಿಕಾರಿ ಡಾ.ಸೌಜನ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌, ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ.ಪ್ರಸಾದ್‌ ಮೂರ್ತಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next