ದಾವಣಗೆರೆ: ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಿ, 3, 8, 10 ಅಲ್ಲ 15 ಜನರನ್ನು ಉಪ ಮುಖ್ಯಮಂತ್ರಿ ಮಾಡಿ, ಅಥವಾ ಜಾತಿಗೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡಿದರೂ ನಮ್ಮ ವಿರೋಧವಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಹಿರಿಯರು ಬೇಡಿಕೆಯಿಡುತ್ತಿದ್ದಾರೆ. ಹೈಕಮಾಂಡ್ ಹೇಳಿದರೂ ಹಿರಿಯರು ಡಿಸಿಎಂ ವಿಚಾರ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಹಾಗಾಗಿ ನಾವೂ ಹಿರಿಯರನ್ನು ಅನುಸರಿಸಬೇಕಾಗುತ್ತದೆ. ಎಷ್ಟು ಬೇಕಾದರೂ ಡಿಸಿಎಂ ಹುದ್ದೆ ಸೃಷ್ಟಿಸಲಿ. ಆದರೆ, ಅದಕ್ಕಿಂತ ಮೊದಲು ಡಿ.ಕೆ. ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಲಿ ಎಂದು ಒತ್ತಾಯಿಸಿದರು.
ಲೋಕಸಭೆ, ವಿಧಾನಸಭೆ ಚುನಾವಣೆ ಮುಗಿದಿವೆ. ಈಗ ಉಪ ಮುಖ್ಯಮಂತ್ರಿಗಳ ಹುದ್ದೆ ವಿಚಾರ ಪ್ರಸ್ತಾಪವೂ ಸರಿ ಅಲ್ಲ. ಕೆಲ ಹಿರಿಯ ನಾಯಕರು ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿದ್ದಾರೆ. ಮೂರಲ್ಲ, ಬೇಕಿದ್ದರೆ 5 ಉಪ ಮುಖ್ಯಮಂತ್ರಿಗಳನ್ನು ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಂತೂ ಇಲ್ಲ.ಎಲ್ಲಕ್ಕಿಂತಲೂ ಮೊದಲು ಡಿ.ಕೆ. ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಿದ ಮೇಲೆ ಐದು ಡಿಸಿಎಂ ಹುದ್ದೆ ಸೃಷ್ಟಿಸಲಿ, ಸಂಪುಟ ಪುನಾರಚನೆ ಮಾಡಲಿ ಎಂದು ಪುನರುಚ್ಚರಿಸಿದರು.
ಮೂರಲ್ಲ, ಐದು ಡಿಸಿಎಂ ಹುದ್ದೆಗಳನ್ನೇ ಮಾಡಲಿ. ಮೊದಲು ಡಿ.ಕೆ.ಶಿವಕುಮಾರ್ ಸಾಹೇಬರನ್ನು ಮುಖ್ಯಮಂತ್ರಿ ಮಾಡಲಿ. ಅವರ ಪಕ್ಷ ಸಂಘಟನೆಯನ್ನು ಗುರುತಿಸಿ, ಉಪ ಮುಖ್ಯಮಂತ್ರಿಯಾಗಿ ಮಾಡಿದೆಯೇ ಹೊರತು, ಜಾತಿಯ ಆಧಾರದಲ್ಲಿ ಮಾಡಿಲ್ಲ ಎಂದು ತಿಳಿಸಿದರು.
ಜಾತಿ ಆಧಾರದಲ್ಲೇ ಡಿಸಿಎಂ ಮಾಡುವುದಾದರೆ ಡಿ.ಕೆ. ಸಾಹೇಬರಿಗಷ್ಟೇ ಅಲ್ಲ, ಎಲ್ಲಾ ಸಮುದಾಯಗಳೂ ಕಾಂಗ್ರೆಸ್ಸಿಗೆ ಮತ ನೀಡಿವೆ. ಸಣ್ಣ ಜಾತಿಗಳು ಮತ ಹಾಕಿವೆ. ಅಂತಹ ಎಲ್ಲಾ ಜಾತಿಗೂ ಡಿಸಿಎಂ ಮಾಡಿ, ನ್ಯಾಯ ಕೊಡಲಿ ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ಮೊದಲು ಮುಖ್ಯಮಂತ್ರಿ ಮಾಡಬೇಕು. ಅದರ ಮೇಲೆ ಎಷ್ಟಾದರೂ ಡಿಸಿಎಂ ಮಾಡಲಿ. ಈ ಎಲ್ಲ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾವೂ ಸಹ ಬದ್ಧರಿದ್ದೇವೆ ಎಂದು ತಿಳಿಸಿದರು.