ಯಾದಗಿರಿ: ಅಧಿಕಾರಿಗಳು ನಗರದ ಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಿ, ಘನತ್ಯಾಜ್ಯ ವಿಂಗಡನೆಯ ನಿರ್ವಹಣೆಗೆ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ನಗರದಲ್ಲಿ ಸ್ವತ್ಛತೆಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಪ್ರಥಮ ಆದ್ಯತೆ ವಹಿಸಬೇಕು. ಮನೆ-ಮನೆ ಕಸ ಸಂಗ್ರಹಣೆ ಮತ್ತು ಮೂಲದಲ್ಲಿಯೇ ತ್ಯಾಜ್ಯ ವಿಂಗಡನೆ ಎಲ್ಲ ವಾರ್ಡ್ ಗಳಲ್ಲಿ ಜಾರಿಗೆ ತರಬೇಕು ಎಂದು ಡಿಸಿ ಡಾ| ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಲಸಿಕಾಕರಣದಿಂದ ಮಾತ್ರ ಮೂರನೇ ಅಲೆ ತಪ್ಪಿಸಲು ಸಾಧ್ಯ. ಹೀಗಾಗಿ ಸಾರ್ವಜನಿಕರಿಗೆ ಕೋವಿಡ್ ಲಸಿಕಾ ಕುರಿತು ನಗರದ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನವನ್ನು ಆಯೋಜಿಸಬೇಕು. ಲಸಿಕೆ ನಿರಾಕರಣೆ ಮತ್ತು ವಲಸೆ (ಗುಳೆ) ಹೋದವರ ಬಗ್ಗೆ ಅಧಿಕಾರಿಗಳು ಖುದ್ದು ಮನೆಗೆ ಭೇಟಿ ಮಾಹಿತಿ ಪಡೆಯಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ನೀಡಿದ ಗುರಿಗೆ ಅನುಗುಣವಾಗಿ ಗುರಿ ಸಾಧಿಸಲು ಹೆಚ್ಚು ಒತ್ತು ನೀಡಬೇಕು ಎಂದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಕಲಬುರ್ಗಿ ಕ್ಯಾಬಿನೆಟ್, ನಗರೋತ್ಥಾನ ಹಂತ-2, ನಗರೋತ್ಥಾನ ಹಂತ-3 ಹಾಗೂ 14, 15ನೇ ಹಣಕಾಸು ಮತ್ತು ಎಸ್.ಎಫ್.ಸಿ ಯೋಜನೆಯಡಿ ಅನುಮೋದನೆಯಾದ ಕಾಮಗಾರಿಗಳ ಪ್ರಗತಿಯ ಮಾಹಿತಿ ಕೇಳಿದರು.
ನಗರೋತ್ಥಾನ ಹಂತ-3 (ಮೂರರ) ರಡಿಯಲ್ಲಿ ಮಂಜೂರಾದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿಯಲ್ಲಿ ಅನುಮೋದನೆಯಾದ ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಯಾದಗಿರಿ ನಗರಸಭೆಯಲ್ಲಿ ಒಂದು (1) ಕಾಮಗಾರಿ ಬಾಕಿಯಿದೆ ಮತ್ತು 2 ಕಾಮಗಾರಿಗಳ ಕಾಮಗಾರಿ ಬದಲಾವಣೆಗೆ ಡಿಎಂಎಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಎಲ್ಲ ಕಾಮಗಾರಿಗಳನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಶಾ ಆಲಂ ಹುಸೇನ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಕ್ಕಪ್ಪ ಇದ್ದರು.