ಕಾರ್ಕಳ: ಮಕ್ಕಳನ್ನು ಹಡೆಯುವುದು,ಅವರಿಗೆ ಹೊತ್ತು ಹೊತ್ತಿಗೆ ಎದೆ ಹಾಲೂಡಿಸಿ, ಮೂರೂ ಹೊತ್ತು ಅನ್ನ ನೀಡಿ ಬೆಳೆಸುವುದು ಮಾತ್ರ ಹೆತ್ತವರ ಕರ್ತವ್ಯವಲ್ಲ. ಅದಕ್ಕಿಂತ ಹೆಚ್ಚಿನ ಹೊಣೆಗಾರಿಕೆ ಅವರಲ್ಲಿದೆ. ಮಕ್ಕಳು ಬರಿಯ ವ್ಯಕ್ತಿ ಮಾತ್ರವಾದರೆ ಸಾಲದು, ಅವರು ಪರಿಪೂರ್ಣ ಮನುಷ್ಯನಾಗಬೇಕು ಎಂಬ ಭಾವನೆಯನ್ನು ಹೊಂದಿ ಅವರನ್ನು ರೂಪಿಸುವ ಪ್ರಜ್ಞೆಯೂ ಹೆತ್ತವರಿಗಿರಬೇಕು ಎಂದು ಪುತ್ತೂರಿನ ಇ.ಎಸ್.ಐ ಆಸ್ಪತ್ರೆಯ ಹಿರಿಯ ವೈದ್ಯೆ ಡಾ| ಸುಲೇಖಾ ವರದರಾಜ ಹೇಳಿದ್ದಾರೆ.
ಅವರು ಜು. 29 ರಂದು ಹೊಟೇಲ್ ಪ್ರಕಾಶ್‌ನ ಸಭಾಂಗಣದಲ್ಲಿ ಕಾರ್ಕಳ ಸಾಹಿತ್ಯ ಸಂಘದ ವತಿಯಿಂದ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಯದೊಂದಿಗೆ ಮಕ್ಕಳಲ್ಲಿ ಆಗುವ ಬೌದ್ಧಿಕ ಪರಿವರ್ತನೆ, ಅವರ ಮೇಲಾಗುವ ವಿವಿಧ ಮಾಧ್ಯಮಗಳ ಪರಿಣಾಮವನ್ನು ಹೆತ್ತವರು ಗಮನಿಸುತ್ತಿರಬೇಕು. ಅವರ ಬೌದ್ಧಿಕ ವಿಕಸನ, ಸಾಮಾಜಿಕ ಪ್ರಜ್ಞೆ, ಕಲಾಸಕ್ತಿ , ಸೃಜನಶೀಲತೆ ಇವೆಲ್ಲವನ್ನೂ ಹೆತ್ತವರು ಗಮನಿಸಿ, ಅಂತಹ ಗುಣಾಂಶಗಳನ್ನು ಅವರಲ್ಲಿ ಬೆಳಸಿದರೆ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದವರು ಹೇಳಿದರು.
ಪಣಂಬೂರು ಎಂ.ಸಿ.ಎಫ್‌ನ ಉದ್ಯೋಗಿ ದೀಕ್ಷಾ ಶೆಟ್ಟಿ ಅವರು ಕಾವ್ಯ ಗಾಯನ ಮಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದಿಂದ ಇ.ಎಸ್.ಐ ಆಸ್ಪತ್ರೆಯ ವೈದ್ಯ ಸಮೂಹದಿ ವರ್ಷದ ವೈದ್ಯೆ ಪುರಸ್ಕೃತೆಯಾದ ಡಾ| ಸುಲೇಖಾ ಅವರನ್ನು ಇಂದುಮತಿ ಜಿ. ಪ್ರಭು ಅವರು ಸಮ್ಮಾನಿಸಿದರು.
ಸಾಹಿತ್ಯ ಸಂಘದ ಕಾರ್ಯದರ್ಶಿ ಸುಜಾತಾ ಅಡ್ಯಂತಾಯ ಸ್ವಾಗತಿಸಿದರು. ಜ್ಯೋತಿ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ರುಕ್ಮಿಣಿ ಎಸ್. ಭಟ್ ಕಾರ್ಯಕ್ರಮ ನಿರ್ವಹಿಸಿ, ವೃಂದಾ ಹರಿಪ್ರಕಾಶ್ ವಂದಿಸಿದರು.