Advertisement

ನೇಕಾರರ ಬದುಕು ಹಸನು ಮಾಡಿ

05:26 PM Aug 12, 2018 | |

ಗದಗ: ಜಗದ ಹೊಟ್ಟೆಗೆ ಹಿಟ್ಟು ನೀಡಿದವ ರೈತನಾದರೆ, ಮಾನವನ ಮಾನ ರಕ್ಷಣೆಗೆ ಬಟ್ಟೆ ನೀಡಿದವ ನೇಕಾರ. ಅನಾದಿಕಾಲದಿಂದಲೂ ನೇಕಾರಿಕೆ ವೃತ್ತಿಯಲ್ಲಿಯೇ ಜೀವನ ಕಂಡುಕೊಂಡಿರುವ ನೇಕಾರರ ಬದುಕು ಹಸನವಾಗಿಸಲು ಆಳುವ ಸರಕಾರಗಳು ನೆರವಾಗಬೇಕು ಎಂದು ರಾಜ್ಯ ಬಿಜೆಪಿ ನೇಕಾರ ಪ್ರಕೋಷ್ಠ ಸಹ ಸಂಚಾಲಕ ಶ್ರೀನಿವಾಸ ಹುಬ್ಬಳ್ಳಿ ಹೇಳಿದರು.

Advertisement

ಬೆಟಗೇರಿಯ ಕೆಎಚ್‌ಡಿಸಿ ಕಟ್ಟಡದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ರಾಜ್ಯ ಬಿಜೆಪಿ ನೇಕಾರರ ಪ್ರಕೋಷ್ಠ ಏರ್ಪಡಿಸಿದ್ದ ಬೆಟಗೇರಿಯ ನೇಕಾರ ಕಾರ್ಯಾಗಾರದಲ್ಲಿ ಹಿರಿಯ ನೇಕಾರರನ್ನು ಸನ್ಮಾನಿಸಿ ಅವರು ಮಾತನಾಡಿದರು. ನೇಕಾರರ ಮಕ್ಕಳಿಗೆ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು, ವಾಸಕ್ಕೆ ಸೂರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2015 ಆ. 7ರಂದು ಈ ದಿನವನ್ನು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಎಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದರು. ಅದರಂತೆ ಪ್ರತೀವರ್ಷ ನೇಕಾರರ ದಿನ ಆಚರಿಸಲಾಗುತ್ತಿದೆ. ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಕೇತವಾದ ಕೈಮಗ್ಗಗಳು ನೇಕಾರನ ಬದುಕಿಗೆ ಆಸರೆ ಆಗಬೇಕು. ಎಲ್ಲರೂ ಕೈಮಗ್ಗದಿಂದ ತಯಾರಾದ ಬಟ್ಟೆಗಳನ್ನು ಉಪಯೋಗಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ನೇಕಾರನ ಬದುಕಿಗೆ ಯೋಜನೆಗಳನ್ನು ರೂಪಿಸಬೇಕು. ನೇಕಾರಿಕೆ ವೃತ್ತಿಯನ್ನು ಉಳಿಸಿ ಬೆಳೆಸಲು ಅಗತ್ಯ ಪ್ರೋತ್ಸಾಹ ನೀಡುವ ಜೊತೆಗೆ ಯುವ ಸಮೂಹವನ್ನು ನೇಕಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಸರಕರದ ಮೇಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ ಮಾತನಾಡಿ, ನೇಕಾರ ಹಾಗೂ ಆತನ ಕುಟುಂಬಗಳಿಗೆ ಆರ್ಥಿಕ, ಶೈಕ್ಷಣಿಕ ಸೌಲಭ್ಯಗಳನ್ನು ನೀಡಬೇಕು. ನೇಕಾರಿಕೆ ಸಂಪ್ರದಾಯ, ಕುಲಕಸುಬು ಉಳಿಯಬೇಕಾದರೆ ಯುವಕರ ಅವಶ್ಯಕತೆ ಹೆಚ್ಚಾಗಿದೆ. ಹಿರಿಯ ನೇಕಾರ ಜೀವಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ಸರಕಾರ ನೀಡುವುದು ಅವಶ್ಯವಾಗಿದೆ ಎಂದು ಹೇಳಿದರು.

Advertisement

ನೇಕಾರಿಕೆಯಲ್ಲಿಯೇ ಜೀವನ ನಡೆಸುತ್ತಿರುವ ಹಲವಾರು ಹಿರಿಯರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ನೇಕಾರರನ್ನು ಸಾಂಕೇತಿಕವಾಗಿ ಗುರುತಿಸಿ ಸನ್ಮಾನ ಮಾಡುತ್ತಿರುವುದು ತಮಗೆ ಸಂತೋಷವಾಗಿದೆ ಎಂದು ಶಹರ ನೇಕಾರ ಪ್ರಕೋಷ್ಠ ಸಂಚಾಲಕ ದೇವೇಂದ್ರಪ್ಪ ಗೋಟೂರು ಹೇಳಿದರು. 

ಜಿಲ್ಲಾ ಸಂಚಾಲಕ ರವಿ ಗಂಜಿ, ಬಿಜೆಪಿ ಶಹರ ಅಧ್ಯಕ್ಷ ಜಗನ್ನಾಥಸಾ ಬಾಂಡಗೆ, ಹುಚ್ಚಪ್ಪ ಬಾರಾಟಕ್ಕೆ, ತಿಪ್ಪಣ್ಣ ಗಣಪಾ, ಜಿ.ಟಿ. ಬಂಡಾ, ಬಸಪ್ಪ ಗಣಪಾ, ಮಂಜುನಾಥ ಬೇಲೇರಿ ಅವರನ್ನು ಸನ್ಮಾನಿಸಿದರು. ಕೆಎಚ್‌ ಡಿಸಿಯ ನಾಗರಾಜ ಸಜ್ಜಿ, ಹಾಗೂ ಸುರೇಶ ತೋಟಗಂಟಿ, ಮಂಜುನಾಥ ಹದ್ದಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next