Advertisement

ಬದುಕಿನ ಇರುಳಿಗೆ ಹಚ್ಚಿಟ್ಟ ಹಣತೆಯಾಗು

10:22 AM Jan 02, 2018 | |

ನೀನು ನನ್ನ ಕತ್ತಲ ಹಾದಿಯ ಕಂದೀಲು. ದಿಕ್ಕು ತಪ್ಪಿಹೋಗಿದ್ದ ಬದುಕಿಗೆ ದಕ್ಕಿದ ಹೊಸ ಬಾಳು. ನೀನು ಮುಂಜಾನೆಯ ಮುದ್ದಾದ ಮೊದಲ ಕಿರಣ. ಬರೀ ಕಹಿಯನ್ನೇ ಉಂಡವನಿಗೆ ಸಿಕ್ಕ ಸಿಹಿ ಸಿಹಿ ಹೂರಣ. ನೀನು ನನ್ನ ಮನದ ಮನೆಯ ಬಾಗಿಲ ಹಸಿರು ತೋರಣ. 

Advertisement

ಒಲವಿನ ಹುಡುಗಿ, 
ನಿನ್ನ ನೆನಪಾದರೆ ಮನಸು ಕಿಡಿ ತಾಕಿದ ಕರ್ಪೂರ. ಕೆನೆ ಮೊಸರಲ್ಲಿ ಅನ್ನ ಕಲಸಿ ತಿನ್ನುವಾಗ, ಅದು ನೆತ್ತಿಗೆ ಹತ್ತಿದಾಗ ಪಕ್ಕದಲ್ಲೇ ಕುಂತ ಅಮ್ಮ, ತನ್ನ ಅಂಗೈಯಿಂದ ಮೆಲ್ಲಗೆ ನೆತ್ತಿ ಬಡಿಯುತ್ತಾ, “ಯಾರೋ ನಿನ್ನನ್ನು ತುಂಬಾ ನೆನಪು ಮಾಡ್ಕೊತಾ ಯಿದ್ದಾರಲ್ಲೋ’ ಅನ್ನುತ್ತಾ ನೀರು ಕುಡಿಸುತ್ತಾಳೆ. ತಿಂದ ಅನ್ನ ನೆತ್ತಿ ತಾಕುವಷ್ಟು ನೆನಪು ಮಾಡಿಕೊಳ್ಳಲು ನಿನ್ನಿಂದಲ್ಲದೆ ಬೇರೆ ಯಾರಿಂದ ಸಾಧ್ಯ ಅಂದುಕೊಂಡು ಅಮ್ಮನ ಮುಖ ನೋಡಿದರೆ. ಲೇ … ಕಳ್ಳ ! ಅನ್ನುವಂತೆ ನನ್ನತ್ತ ನೋಡುತ್ತಾಳೆ. ಕರುಳು ಬಳ್ಳಿ  ಕತ್ತರಿಸಿರಬಹುದು; ಆದರೆ ಅವಳಿಗೆ ನನ್ನೊಳಗಿನ ಕನಸುಗಳು ತಿಳಿಯುತ್ತವೆ. ಅಂತರಾಳದಲ್ಲಿ ಅಡಗಿಸಿಟ್ಟುಕೊಂಡ ಮೌನವನ್ನು ಅರಿಯುತ್ತಾಳೆ. ಯಾವುದೋ ದುಃಖಕ್ಕೀಡಾಗಿದ್ದರೆ ಸುಮ್ಮನೆ ಹತ್ತಿರ ಬಂದು ತಲೆ ನೇವರಿಸಿ, ಕೈ ತುತ್ತು ತಿನ್ನಿಸಿ, ಹಾಸಿಗೆ ಹಾಸಿ ಮಲಗಿಸಿ, ಎದೆಯ ಚಕ್ಕುತಟ್ಟಿ ನಿದ್ದೆ ಮಾಡಿಸಿ ಹಣೆಗೊಂದು ಮುತ್ತು ಕೊಟ್ಟು ಹೋಗುತ್ತಾಳೆ. ಅಂಥವಳೆದುರು ನನ್ನ ನಿನ್ನ ಪ್ರೀತಿ ಮುಚ್ಚಿಟ್ಟುಕೊಂಡಷ್ಟೂ ಅಮ್ಮನಿಗೆ ತಿಳಿದುಹೋಗುತ್ತದೆ. ಅಲ್ಲೆಲ್ಲೋ ಘಟ್ಟದಲ್ಲಿ ಮಳೆಯಾದರೆ, ಬಯಲಿಗೆ ದಾಂಗುಡಿಯಿಡುವ ಪ್ರವಾಹದ ಮಹಾಪೂರದಂತೆ. ಬಚ್ಚಿಟ್ಟಷ್ಟೂ ಬಯಲಾಗಿ ಬಿಡುತ್ತೇನೆ. 

ನಾಳೆ ಒಂದು ದಿನ ಆಫೀಸಿಗೆ ರಜೆ ಹಾಕು. ನಿನ್ನನ್ನು ನನ್ನಮ್ಮನೆದುರು ಪ್ರತಿಷ್ಠಾಪಿಸಬೇಕು. ಅವಳೂ ನಿನ್ನದೇ ನಿರೀಕ್ಷೆಯಲ್ಲಿದ್ದಾಳೆ. ಒಂದು ಮನೆಯಲ್ಲಿ ಇಬ್ಬರು ಹೆಂಗಸರು ಹೊಂದಿಕೊಂಡು ಹೋದರೆ ಅದಕ್ಕಿಂತ ಸ್ವರ್ಗ ಮತ್ತೆಲ್ಲಿದೆ? ತುತ್ತಾ- ಮುತ್ತಾ ಅಂತ ಗಡಿಯೆಳೆದು, ಮನೆಯಲ್ಲಿ ಎರಡು ಪಕ್ಷವಾಗಿ ಅತ್ತ ಇತ್ತ ಅಂತ ಆಗಾಗ ಪಕ್ಷಾಂತರದ ಕಸರತ್ತು ನಡೆಯಬಾರದಲ್ಲವಾ? ಅದಕ್ಕೇ ನಿಮ್ಮಿಬ್ಬರ ಭೇಟಿ ಮಾಡಿಸಿ ನಾನು ನಿರಾಳವಾಗಿದ್ದು ಬಿಡುತ್ತೇನೆ. ನಂಗೆ ಗೊತ್ತಿದೆ; ನನ್ನಮ್ಮನಿಗೆ ನೀನು ಇಷ್ಟವಾಗುತ್ತೀಯ. ಅದಕ್ಕಿಂತ ಹೆಚ್ಚಾಗಿ ನನ್ನಮ್ಮ ನಿಂಗೆ ತುಂಬಾ ಆತ್ಮೀಯಳಾಗುತ್ತಾಳೆ. ಅವಳ ವ್ಯಕ್ತಿತ್ವದಲ್ಲೇ ಒಂದು ಸೌಜನ್ಯ ತುಂಬಿದೆ. ಯಾರನ್ನೂ ಆತುರಕ್ಕೆ ಬಿದ್ದು ನಿರ್ಧರಿಸಿ ಬಿಡೋದಿಲ್ಲ. ನಿನ್ನ ಪ್ರಾಮಾಣಿಕತೆ ಮತ್ತು ಕಾಳಜಿ ನಿನ್ನ ಕಂಗಳ ಹೊಳಪಲ್ಲೇ ಕಾಣುತ್ತವೆ. ಅಮ್ಮನಿಗದು ಬೇಗ ತಿಳಿದೂ ಬಿಡುತ್ತದೆಂಬುದು ನಂಗೆ ಗೊತ್ತಿದೆ.  

ನನ್ನ ಮನೆಯ ತುಂಬಾ ನಿನ್ನ ಕಾಲ್ಗೆಜ್ಜೆ ಸದ್ದು ತುಂಬಿಕೊಳ್ಳಲು, ಇನ್ನು ಕೆಲವೇ ದಿನಗಳಷ್ಟೇ ಇವೆ. ಎಂಟು ವರ್ಷಗಳಿಂದ ನನ್ನ ಮನಸಿನಾಳದಲ್ಲಿ ಗೂಡು ಕಟ್ಟಿ , ಕೈ ಹಿಡಿದು ನಡೆಸುತ್ತಾ ಬದುಕನ್ನೂ ಕಟ್ಟಿಕೊಟ್ಟೆ. ನೀನು ನನ್ನ ಕತ್ತಲ ಹಾದಿಯ ಕಂದೀಲು. ದಿಕ್ಕು ತಪ್ಪಿಹೋಗಿದ್ದ ಬದುಕಿಗೆ ದಕ್ಕಿದ ಹೊಸ ಬಾಳು. ನೀನು ಮುಂಜಾನೆಯ ಮುದ್ದಾದ ಮೊದಲ ಕಿರಣ. ಬರೀ ಕಹಿಯನ್ನೇ ಉಂಡವನಿಗೆ ಸಿಕ್ಕ ಸಿಹಿ ಸಿಹಿ ಹೂರಣ. ನೀನು ನನ್ನ ಮನದ ಮನೆಯ ಬಾಗಿಲ ಹಸಿರು ತೋರಣ. ಇನ್ನು ಮುಂದೆ ಹೀಗೆ ದೂರ ದೂರ ಉಳಿಯಲು ಉಳಿದಿಲ್ಲ ಒಂದೂ ಕಾರಣ. 

ಇನ್ನೊಮ್ಮೆ ಕೇಳು ಮನದ ನಿನಾದ
ಕಣ್ಣಲ್ಲೇ ನೂರು ಮಧುರ ಪ್ರಮಾದ
ಏಕಾಂತದಲ್ಲಿ ನೆನಪು ಅಪಾರ
ಏಕಾಂಗಿಗಂತೂ ಕನಸೇ ಬಿಡಾರ
ನೀ ಬಂದ ಮೇಲೇ ತಾನೆ ಬಾಕಿ ವಿಚಾರ
ಕಟ್ಟಿಕೊಂಡ ಬದುಕು ನಮ್ಮ ಕಣ್ಣ ಮುಂದಿದೆ. ಪಟ್ಟ ಶ್ರಮದ ಅನುಭವದ ಪಾಠ ನಮ್ಮ ಬೆನ್ನ ಹಿಂದಿದೆ. ಕಾಯುವ ಪ್ರೀತಿ ಕೈ ಹಿಡಿದು ನಮ್ಮ ಜತೆಗಿದೆ. ನನ್ನ ಬದುಕಿನ ಇರುಳಿಗೆ ಹಚ್ಚಿಟ್ಟ ಹಣತೆಯಾಗು. ಹಗಲಲ್ಲಿ ಹೆಜ್ಜೆಗೆ ಹೆಜ್ಜೆಯಿಟ್ಟು ನಡೆಯುತ್ತಾ  ಜತೆಯಾಗು. ನಿನ್ನ ಹಂಬಲಿಸಿ ಹೊಸ ಬಾಳಿನ ಹೊಸಿಲಲಿ ನಿಂತಿರುವೆ. ಬಾ ಗೆಳತಿ, ನನ್ನ ಎದೆಯಲ್ಲೊಂದು ನಿನ್ನ ಹಗೂರ ಹೆಜ್ಜೆ ಮೂಡಿಸು. ನನ್ನ ಬದುಕಿಗೊಂದು ಹೊಸ ಹಗಲು ತೆರೆದುಕೊಳ್ಳಲಿ.
ನಿನ್ನದೇ ನಿರೀಕ್ಷೆಯಲ್ಲಿ 

Advertisement

ಜೀವ ಮುಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next