ಹೆಮ್ಮಾಡಿ: ಇಲ್ಲಿನ ಹೆಮ್ಮಾಡಿ ಗ್ರಾಮದಲ್ಲಿ ಬೇಸಗೆ ಬಂದರೆ ಸಾಕು, ಬಹುತೇಕ ಇಡೀ ಗ್ರಾಮಕ್ಕೆ ಗ್ರಾಮವೇ ನೀರಿನ ಸಮಸ್ಯೆಗೆ ತುತ್ತಾಗುತ್ತದೆ. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಬಾವಿಯಿದ್ದರೂ, ಮಾರ್ಚ್ ಅನಂತರ ಬತ್ತುತ್ತದೆ. ಉಪ್ಪು ನೀರಾಗುವುದರಿಂದ ಈ ಸಮಸ್ಯೆ. ಗ್ರಾಮದ ಅನೇಕ ಕಡೆಗಳಲ್ಲಿ ನದಿದಂಡೆಯೊಂದಿಗೆ ರಿಂಗ್ ರೋಡ್ ನಿರ್ಮಾಣವಾದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು.
ಹೆಮ್ಮಾಡಿ ಗ್ರಾಮದ ಬಹುಭಾಗ ನದಿ ಆವರಿಸಿ ದ್ದರೂ, ಅಲ್ಲಲ್ಲಿ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟಿರುವುದರಿಂದ, ಇಳಿತ- ಭರತದ ಸಮಯದಲ್ಲಿ ಸಮುದ್ರಕ್ಕೆ ಸೇರುವ ಸಿಹಿ ನೀರು ಕಡಿಮೆಯಾಗಿ, ಆ ಕಡೆಯಿಂದ ಉಪ್ಪು ನೀರು ನುಗ್ಗುವುದು ಜಾಸ್ತಿ ಯಾಗುತ್ತದೆ. ಇದರಿಂದ ಕೃಷಿ ಭೂಮಿ, ಬಾವಿ ನೀರಿಗೆಲ್ಲ ಸಮಸ್ಯೆಯಾಗುತ್ತಿದೆ.
ಎಲ್ಲೆಲ್ಲ ಸಮಸ್ಯೆ?
ಸಂತೋಷ್‌ನಗರ, ಮೂವತ್ತುಮುಡಿ, ಚಾತ್ರಬೆಟ್ಟು, ಪಡುಮನೆ, ಮುಡಾಡಿ, ಭಟ್ರಬೆಟ್ಟು, ಹೊಸ್ಕಳಿ, ಬುಗ್ರಿಕಡು, ಕಟ್ಟು ಹಾಗೂ ಕನ್ನಡಕುದ್ರು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ದೇವಸ್ಥಾನ ಭಾಗದ ವಾರ್ಡ್‌ಗಳಲ್ಲಿ ಮಾತ್ರ ಅಷ್ಟೊಂದು ಈ ಸಮಸ್ಯೆ ಇಲ್ಲ. ಗ್ರಾ.ಪಂ. ವ್ಯಾಪ್ತಿಯ 900 ಮನೆಗಳ ಪೈಕಿ 500 ಕ್ಕೂ ಮಿಕ್ಕಿ ಮನೆಗಳಿಗೆ ಅಂದರೆ ಅರ್ಧಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ನೀರಿನ ಸಮಸ್ಯೆ ಇದೆ. ಪಂಚಾಯತ್ ಅಧೀನದ 2 ಕೊಳವೆ ಬಾವಿ, 2 ಬಾವಿ ಯಿದ್ದು, ಅವುಗಳಲ್ಲೂ ನೀರಿನ ಮಟ್ಟ ಇಳಿಕೆಯಾಗಿದೆ. ಕೆಲವು ಸಂಪೂರ್ಣ ಎಂಬಂತೆ ಬರಿದಾಗಿದೆ.
ಎಲ್ಲೆಲ್ಲ ನದಿ ದಂಡೆ?
ಹೊಸ್ಕಳಿಯಿಂದ ಬುಗುರಿಕಡು ವರೆಗೆ ಸುಮಾರು 4 ಕಿ.ಮೀ. ನದಿ ದಂಡೆ, ಕಟ್ಟು ಭಾಗದ ಅಲ್ಲಲ್ಲಿ ನದಿ ದಂಡೆ, ಕನ್ನಡಕುದ್ರುವಿನಲ್ಲಿ ಸುಮಾರು 5 ಕಿ.ಮೀ. ಹಾಗೂ ಮೂವತ್ತುಮುಡಿ ಯಲ್ಲಿ 4 ಕಿ.ಮೀ. ಸೇರಿ, ಒಟ್ಟಾರೆ ಅಂದಾಜು 15 ಕಿ.ಮೀ. ನದಿ ದಂಡೆಯೊಂದಿಗೆ ರಿಂಗ್ ರೋಡ್ ನಿರ್ಮಿಸಬೇಕು. ಆಗ ಇಲ್ಲಿನ ಕೃಷಿ, ಬಾವಿಗೆ ಉಪ್ಪು ನೀರಿನ ಸಮಸ್ಯೆಯೂ ನೀಗಲಿದೆ, ವಾಹನ ಸಂಚಾರಕ್ಕೆ ರಸ್ತೆ ಸೌಕರ್ಯವೂ ಆಗಲಿದೆ. ಹೊಸ್ಕಳಿ, ಜಾಲಾಡಿಯಲ್ಲಿ 2-3 ವರ್ಷದಿಂದ ಹೊಸ ಕಿಂಡಿ ಅಣೆಕಟ್ಟಿಗೆ ಬೇಡಿಕೆಯಿದೆ.
ರಿಂಗ್ ರೋಡ್ ಆಗದಿದ್ದರೂ, ಕನಿಷ್ಠ ಗದ್ದೆ, ತೋಡುಗಳಿಗೆ ಉಪ್ಪು ನೀರು ಬರದಂತೆ ಮಣ್ಣು ಹಾಕಿ, ದಂಡೆ ನಿರ್ಮಿಸಿದರೂ, ಒಂದಷ್ಟು ಪ್ರಯೋಜನ ವಾಗಲಿದೆ ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ.
ಸೇವಂತಿಗೆಯ ಊರು
ಬಸ್ರೂರಿನ ಬಸುವರಸನ ಸಾಮಂತನಾದ ಹೇಮಂತ ಎಂಬ ರಾಜನಾಳಿದ ಊರಾದ ಈ ಗ್ರಾಮವು ಹೇಮಾಪುರ ಎಂದು ಹೆಸರಿದ್ದು, ಕಾಲಕ್ರಮೇಣ ಹೆಮ್ಮಾಡಿ ಎಂದು ಬದಲಾಯಿತು. ಹೇಮಾಪುರ ಮಠವಿದೆ. ಹೇಮಂತ ರಾಜ ಸಂತಾನ ಪ್ರಾಪ್ತಿಗಾಗಿ ಪುರಾತನ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ನಿರ್ಮಿಸಿದ್ದ. ಹಾಗಾಗಿ ಈ ದೇವಸ್ಥಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಗ್ರಾಮವು ಒಟ್ಟು 623.23 ಹೆಕ್ಟೇರ್ ಪ್ರದೇಶ ವಿಸ್ತೀರ್ಣ ಹೊಂದಿದ್ದು, ಒಟ್ಟು 11 ಮಂದಿ ಸದಸ್ಯರಿದ್ದಾರೆ. ಅವರಲ್ಲಿ 6 ಮಂದಿ ಮಹಿಳಾ ಸದಸ್ಯರು ಹಾಗೂ ಐವರು ಪುರುಷ ಸದಸ್ಯರಿದ್ದಾರೆ. 2011ರ ಜನಗಣತಿ ಪ್ರಕಾರ 4,293 ಜನಸಂಖ್ಯೆಯಿದ್ದು, ಈಗಿನ ಅಂದಾಜಿನ ಪ್ರಕಾರ 4,900ಕ್ಕೂ ಮಿಕ್ಕಿ ಜನರಿದ್ದಾರೆ. 3 ಸಾವಿರ ಮಂದಿ ಮತದಾರರಿದ್ದಾರೆ. ಹೆಮ್ಮಾಡಿ ಸೇವಂತಿಗೆಯೂ ಜಿಲ್ಲೆಯಲ್ಲಿಯೇ ವಿಶಿಷ್ಟವಾದುದು. ಗ್ರಾಮದ ಬಹುಭಾಗದಲ್ಲಿ ಇದನ್ನು ಬೆಳೆಯುತ್ತಾರೆ. ಭತ್ತದ ಕೃಷಿ ಇಲ್ಲಿ ಪ್ರಮುಖವಾದುದು.
ಜಂಕ್ಷನ್ ಸಂಕಟ
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಹೆಮ್ಮಾಡಿಯಲ್ಲಿ ಪೂರ್ಣ ಪ್ರಮಾಣದ ಜಂಕ್ಷನ್ ಇನ್ನೂ ಆಗಿಲ್ಲ. ಆಗಾಗ ಅಪಘಾತಗಳು ನಡೆಯುತ್ತಿವೆ. ಜಾಲಾಡಿಯಿಂದ ಮೂವತ್ತುಮುಡಿಯವರೆಗೆ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ಇನ್ನೂ ಆಗಿಲ್ಲ. ಇದರಿಂದ ಸಂತೋಷ್‌ನಗರ, ಜಾಲಾಡಿ- ಹೊಸ್ಕಳಿ ಭಾಗದ ಜನರು ಸುತ್ತು ಬಳಸಿ ಸಂಚರಿಸುವಂತಾಗಿದೆ. ಜಾಲಾಡಿ ಬಳಿ ಡಿವೈಡರ್ ಕ್ರಾಸಿಂಗ್‌ಗೆ ಬೇಡಿಕೆಯಿದ್ದರೂ ಪ್ರಾಧಿಕಾರದಿಂದ ಮಾಡಿಕೊಟ್ಟಿಲ್ಲ. ಎರಡೂ ಕಡೆಯಲ್ಲೂ ಬಸ್ ನಿಲ್ದಾಣವಿಲ್ಲದೆ, ಜನ ಬಿಸಿಲಲ್ಲಿಯೇ ನಿಲ್ಲುವಂತಾಗಿದೆ. ಬಸ್ ಬೇ ಸಹ ಅರ್ಧಕ್ಕೆ ನಿಂತಿದ್ದು, ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲುತ್ತಿದೆ. ಈ ಸಮಸ್ಯೆಯೂ ಬಗೆಹರಿಯಬೇಕಿದೆ.
ಶಾಸಕರಿಗೆ ಮನವಿ: ಹೆಮ್ಮಾಡಿ ಗ್ರಾಮದ ಹೊಸ್ಕಳಿಯಿಂದ ಬುಗುರಿಕಡುವರೆಗೆ, ಕನ್ನಡಕುದ್ರು, ಮೂವತ್ತುಮುಡಿ ಭಾಗದಲ್ಲಿ ನದಿ ದಂಡೆ ಬೇಡಿಕೆ ಬಗ್ಗೆ ಈ ಹಿಂದೆಯೇ ಶಾಸಕರಿಗೆ ಮನವಿ ಸಲ್ಲಿಸಿದ್ದೇವು. ಈಗ ಮತ್ತೂಮ್ಮೆ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ರಿಂಗ್ ರೋಡ್ ಬೇಡಿಕೆಯ ಬಗ್ಗೆಯೂ ಗಮನಕ್ಕೆ ತರಲಾಗುವುದು. –
ಸುಧಾಕರ ದೇವಾಡಿಗ ಕಟ್ಟು, ಹೆಮ್ಮಾಡಿ ಗ್ರಾ.ಪಂ.ಅಧ್ಯಕ್ಷರು
-ಪ್ರಶಾಂತ್ ಪಾದೆ