Advertisement

ಸಮರ್ಪಕ ನಿರ್ಧಾರ ಕೈಗೊಳ್ಳಿ: ಮತದಾನ ಮಾಡಿ 

06:00 AM May 12, 2018 | |

ಪ್ರಜಾತಂತ್ರದಲ್ಲಿ ನಮ್ಮ ಯೋಗ್ಯತೆಗೆ ತಕ್ಕ ಸರಕಾರ ನಮಗೆ ಸಿಗುತ್ತದೆ ಮತ್ತು ನಮ್ಮ ಯೋಗ್ಯತೆ ಸರಕಾರದ ಮೂಲಕ ಅಭಿವ್ಯಕ್ತಿಗೊಳ್ಳುತ್ತದೆ ಎಂಬ ಮಾತಿದೆ. ನಾವು ಪ್ರಜಾತಂತ್ರವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅರ್ಥಗರ್ಭಿತವಾಗಿ ಹೇಳುವ ಮಾತಿದು. ಮತದಾನದ ದಿನದಂದು ನಾವು ಮತ್ತೆ ಮತ್ತೆ ನೆನಪಿಟ್ಟುಕೊಳ್ಳಬೇಕಾದ ಮಾತಿದು. ನಮ್ಮದು ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ, ಚುನಾವಣೆ ಎನ್ನುವುದು ಪ್ರಜಾತಂತ್ರದ ಹಬ್ಬವಿದ್ದಂತೆ ಎಂದೆಲ್ಲ ನಮ್ಮ ವ್ಯವಸ್ಥೆಯನ್ನು ನಾವು ವೈಭವೀಕರಿಸಿಕೊಂಡಿದ್ದೇವೆ.ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವುದು ಪ್ರಜಾತಂತ್ರದ ಹಬ್ಬದಲ್ಲಿ ನಾವು ಸಕ್ರಿಯವಾಗಿ ಸಹಭಾಗಿಗಳಾಗಲು ಇರುವ ಅವಕಾಶ.ಈ ಮೂಲಕ ಪ್ರಜಾತಂತ್ರದ ಹಬ್ಬದಲ್ಲಿ ನಾವು ಸಡಗರದಿಂದ ಪಾಲ್ಗೊಳ್ಳಬೇಕಿತ್ತು. ಆದರೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕ ಕಳೆದರೂ ಪ್ರತಿಯೊಬ್ಬ ಅರ್ಹ ಪ್ರಜೆ ಮತದಾನದಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ನಾವು ಸಂಪೂರ್ಣ ಯಶಸ್ವಿಯಾಗಿಲ್ಲ. 

Advertisement

ಮತದಾನ ನಮಗೆ ಸಂವಿಧಾನದತ್ತವಾಗಿ ಸಿಕ್ಕಿರುವ ಹಕ್ಕು. 18 ವರ್ಷ ಮೇಲ್ಪಟ್ಟವರೆಲ್ಲ ಮತದಾನ ಮಾಡಬಹುದು. ಎಷ್ಟೋ ದೇಶಗಳಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ, ರಕ್ತಪಾತಗಳಾಗಿವೆ. ಆದರೆ ನಮಗೆ ಸಂವಿಧಾನದಲ್ಲಿ ಈ ಹಕ್ಕು ನಿರಾಯಾಸವಾಗಿ ಸಿಕ್ಕಿದೆ. ಹೀಗಾಗಿಯೇ ಮತದಾನದ ಕುರಿತು ನಮಗೊಂದು ರೀತಿಯ ಅಸಡ್ಡೆಯೂ ಇದೆ. ಮತದಾನ ಹಕ್ಕು ಹೌದಾದರೂ ಮತ ಚಲಾವಣೆಯನ್ನು ಕಡ್ಡಾಯ ಮಾಡದಿರುವುದರಿಂದ ಅನೇಕ ಮಂದಿ ಮತಗಟ್ಟೆಯತ್ತ ಹೋಗುವುದಿಲ್ಲ. ಯಾವುದೇ ಚುನಾವಣೆ ತೆಗೆದುಕೊಂಡರೂ ಸರಾಸರಿ ಮತದಾನ ಪ್ರಮಾಣ ಶೇ. 60ರಿಂದ ಶೇ.70ರ ಆಸುಪಾಸಿನಲ್ಲಿರುತ್ತದೆ. ಅಂದರೆ ಶೇ. 30ರಿಂದ ಶೇ.40ರಷ್ಟು ಮಂದಿ ಮತದಾನದ ಹಕ್ಕನ್ನು ಚಲಾಯಿಸುವುದಿಲ್ಲ. ನಾನೊಬ್ಬ ಮತ ಹಾಕದಿದ್ದರೆ ಏನೂ ವ್ಯತ್ಯಾಸವಾಗುವುದಿಲ್ಲ ಎಂಬ ಸಿನಿಕ ನಿರ್ಧಾರವನ್ನು ಅವರು ಕೈಗೊಂಡಿರುತ್ತಾರೆ. ಅದರಲ್ಲೂ ಶಿಕ್ಷಿತ ಮತದಾರರೇ ಮತದಾನದಿಂದ ದೂರವುಳಿಯುತ್ತಿದ್ದಾರೆ. ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾವಂತ ಜನರೇ ಮತದಾನ ಮಾಡಲು ಹೋಗುವುದಿಲ್ಲ. ಮತದಾನಕ್ಕೆ ಸರಕಾರ ನೀಡುವ ರಜೆ ಅವರ ಪಾಲಿಗೆ ವಿರಾಮದ ದಿನವಾಗಿರುತ್ತದೆ ಇಲ್ಲವೇ ಸಿನೆಮಾ, ಪಿಕ್‌ನಿಕ್‌, ಶಾಪಿಂಗ್‌ ಎಂದು ಕಾಲವ್ಯಯ ಮಾಡುವ ದಿನವಾಗುತ್ತದೆ. ದೇಶದ ಭವಿಷ್ಯ ನಿರ್ಧಾರವಾಗುವ ನಿರ್ಣಾಯಕ ದಿನದಂದು ಈ ರೀತಿ ಉದಾಸೀನ ಮಾಡಿದ ಜನರೇ ಅನಂತರ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ವ್ಯವಸ್ಥೆಯ ವಿರುದ್ಧ ಗೊಣಗುವುದು ಮತ್ತು ಸರಕಾರ ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಸಲಹೆ ನೀಡುವುದು ವಿಪರ್ಯಾಸದ ವಿಷಯ. ಸರಿಯಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಕೈಚೆಲ್ಲಿ, ಆ ಮೂಲಕ ಸ್ವತ್ಛವಾದ ಸರಕಾರ ಅಧಿಕಾರಕ್ಕೇರದಂತೆ ಮಾಡಿದ ನಮಗೆ ಟೀಕಿಸುವ ನೈತಿಕ ಹಕ್ಕು ಇರುವುದಿಲ್ಲ. ನಮ್ಮ ಒಂದೊಂದು ಮತವೂ ಬದಲಾವಣೆಯ ಹರಿಕಾರ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸರಕಾರದ ಅಥವಾ ನಮ್ಮ ಕ್ಷೇತ್ರದ ಪ್ರತಿನಿಧಿಯ ನಿರ್ವಹಣೆ ತೃಪ್ತಿಕರ ವಾಗಿಲ್ಲದಿದ್ದರೆ ಮುಲಾಜಿಲ್ಲದೆ ಅವರನ್ನು ತಿರಸ್ಕರಿಸುವ ಅಧಿಕಾರ ನಮ್ಮ ಕೈಯಲ್ಲೇ ಇದೆ. ಇಂತಹ ಅಪೂರ್ವ ಅವಕಾಶವನ್ನು ಕೈಚೆಲ್ಲಿ ಅನಂತರ ವ್ಯವಸ್ಥೆಯನ್ನು ದೂಷಿಸುವುದರಿಂದ ಫ‌ಲವಿಲ್ಲ. ಮತದಾನ ಮಾಡದೇ ಇರುವುದರಿಂದ ಅಯೋಗ್ಯರೇ ಮತ್ತೆ ಆರಿಸಿ ಬರುವ ಸಾಧ್ಯತೆಯಿರುತ್ತದೆ. ಮತ್ತೆ ಅದೇ ಕೆಟ್ಟ ಸರಕಾರ ಅಧಿಕಾರಕ್ಕೆ ಬರಬಹುದು. ಪದೇ ಪದೇ ದುರಾಡಳಿತ ಬರುತ್ತಿದೆ ಎಂದರೆ ಅದಕ್ಕೆ ಹೊಣೆ ನಾವೇ ಹೊರತು ರಾಜಕಾರಣಿಗಳಲ್ಲ. ಪ್ರತಿ ಸಲ ಮತ ಹಾಕಿದರೂ ವ್ಯವಸ್ಥೆಯಲ್ಲೇನೂ ಬದಲಾವಣೆ ಕಾಣಿಸುತ್ತಿಲ್ಲ. ಮತ್ತೆ ಅದೇ ಭ್ರಷ್ಟ ನಾಯಕರೇ ಅಧಿಕಾರಕ್ಕೆ ಬರುತ್ತಾರೆ, ಅದೇ ದುರಾಡಳಿತ ಮುಂದುವರಿಯುತ್ತಿದೆ ಎಂಬ ನಿರಾಶ ಮನೋಭಾವ ಬೇಡ. ಹೌದು ಕೆಲವೊಮ್ಮೆ ನಾವು ಮತ ಹಾಕಿದ್ದರೂ ಕೆಟ್ಟ ಸರಕಾರ ಅಧಿಕಾರಕ್ಕೆ ಬಂದಿರಬಹುದು. ಆದರೆ ಮತ ಹಾಕದಿದ್ದರೆ ಕೆಟ್ಟವರೇ ಮತ್ತೆ ಆಯ್ಕೆಯಾಗುವ ಸಾಧ್ಯತೆ ಇನ್ನೂ ಹೆಚ್ಚು ಇರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹೌದು, ಕರ್ತವ್ಯವೂ ಹೌದು. ಯೋಗ್ಯ ವ್ಯಕ್ತಿ ವಿಧಾನಸಭೆ ಅಥವಾ ಸಂಸತ್ತಿಗೆ ಆಯ್ಕೆಯಾಗಿ ಹೋಗುವಂತಹ ವಿವೇಚನಾಯುಕ್ತ ನಿರ್ಧಾರವನ್ನು ಕೈಗೊಳ್ಳುವುದು ನಮ್ಮ ಸಾಂವಿಧಾನಿಕದ ಹೊಣೆಗಾರಿಕೆ. ಈ ಹೊಣೆಯಿಂದ ತಪ್ಪಿಸಿಕೊಳ್ಳುವುದೆಂದರೆ ನಮ್ಮ ಭವಿಷ್ಯವನ್ನು ನಾವೇ ಹಾಳು ಮಾಡಿಕೊಂಡಂತೆ. ಹೀಗಾಗಿ ಏನೇ ತುರ್ತು ಕೆಲಸವಿದ್ದರೂ, ಯಾವುದೇ ಅಡ್ಡಿ ಅಡಚಣೆಯಿದ್ದರೂ ಮತಗಟ್ಟೆಗೆ ಹೋಗಿ ಮತ ಹಾಕಿ ಬನ್ನಿ. ಇಂದು ಈ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next