Advertisement

ಅಣಬೆ ಕೃಷಿ, ಅಡಕೆ ತಟ್ಟೆ ತಯಾರಿಸಿ ಲಾಭಗಳಿಸಿ

09:30 PM Mar 09, 2020 | Lakshmi GovindaRaj |

ಹುಣಸೂರು: ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸೋಮವಾರ ಭೇಟಿ ನೀಡಿ ಕೇಂದ್ರದ ಆದಿವಾಸಿಗಳ ಅಹವಾಲು ಆಲಿಸಿದರು. ಇದೇ ವೇಳೆ ಅವರು, ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಅಣಬೆಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಗಿರಿಜನರು ಅಣಬೆ ಕೃಷಿ ಹಾಗೂ ಅಡಕೆ ತಟ್ಟೆ ತಯಾರಿಸಿ, ಆರ್ಥಿಕವಾಗಿ ಸಬಲರಾಗಬೇಕು. ಇದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

Advertisement

ತಾಲೂಕಿನ ಹನಗೋಡು ಹೋಬಳಿ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿಗಳು ಕಳೆದ 3-4 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಭೇಟಿ ನೀಡಿ, ತಮ್ಮ ಪುನರ್ವಸತಿ ಕೇಂದ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಕೇಂದ್ರ ಸರ್ಕಾರದ ಪುನರ್ವಸತಿ ಯೋಜನೆಯ 10 ಲಕ್ಷ ರೂ. ಪ್ಯಾಕೇಜ್‌ನಲ್ಲಿ ಬಾಕಿ ಉಳಿತಾಯದ ಹಣದಲ್ಲಿ ಜಮೀನಿನ ಸುತ್ತ ತಂತಿಬೇಲಿ ನಿಮಾಣ ಹಾಗೂ ಕೇಂದ್ರದಲ್ಲಿ ವಾಸವಿರುವ 33 ಮಂದಿ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂಬ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಅವರು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್‌, ತಹಶೀಲ್ದಾರ್‌ ಬಸವರಾಜ್‌ ಜೊತೆ ಭೇಟಿ ನೀಡಿ ಕೇಂದ್ರದ ಆದಿವಾಸಿಗಳೊಂದಿಗೆ ಸುದೀರ್ಘ‌ ಚರ್ಚೆ ನಡೆಸಿದರು.

ಕೇಂದ್ರ ಸರ್ಕಾರಕ್ಕೆ ಪತ್ರ: ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, 33 ಮಂದಿಗೆ ಪ್ಯಾಕೇಜ್‌ ಹಣವನ್ನು ನೇರವಾಗಿ ವಿತರಿಸಲು ಸಾಧ್ಯವಿಲ್ಲ. ಪುನರ್ವಸತಿ ಕಲ್ಪಿಸುವ ಸಂಬಂಧ ಕೇಂದ್ರದ ಪರಿಸರ ಮಂತ್ರಾಲಯದೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು. ಆನಂತರವಷ್ಟೇ ಇಲಾಖೆಯ ಸೂಚನೆಯಂತೆ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.

ಅಣಬೆ ಕೃಷಿ, ಅಡಕೆ ತಟ್ಟೆ ತಯಾರಿಸಿ: ಮೈಸೂರು ಮತ್ತು ಕೊಡಗು ಜಿಲ್ಲೆಗಳು ಪ್ರಸಿದ್ಧ ಪ್ರವಾಸಿ ತಾಣಗಳಾಗಿರುವುದರಿಂದ ಇಲ್ಲಿಗೆ ದೇಶ ವಿದೇಶದಿಂದ‌ ಪ್ರವಾಸಿಗರು ಭೇಟಿ ನೀಡುವರು. ಹೀಗಾಗಿ ಎರಡು ಜಿಲ್ಲೆಗಳಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ. ಹುಣಸೂರು ಕೊಡಗಿನ ಹೆಬ್ಬಾಗಿಲು ಇಲ್ಲಿ ಅಣಬೆ ಬೇಸಾಯ ಜೊತೆಗೆ ಅಡಕೆ ತಟ್ಟೆ ತಯಾರಿಕೆಗೂ ಮುಂದಾದರೆ ಸಂಬಂಧ‌ಪಟ್ಟ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಜಿಲ್ಲಾಧಿಕಾರಿಗಳು ತಿಳಿಸಿದರು.

33 ಮಂದಿಗೆ ಪುನರ್ವಸತಿ ಕಲ್ಪಿಸಿ: 2013-14 ರಲ್ಲಿ ನಾಗರಹೊಳೆ ಅರಣ್ಯದಿಂದ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಒಟ್ಟು 130 ಕುಟುಂಬಗಳು ಸ್ಥಳಾಂತರಗೊಂಡಿದ್ದ ವೇಳೆ ತಮ್ಮ ಕುಟುಂಬಗಳಲ್ಲಿರುವ 18 ವರ್ಷ ವಯಸ್ಸಿನ 39 ಮಂದಿಗೆ ಮುಂದಿನ ದಿನಗಳಲ್ಲಿ ಅವರಿಗೂ ಪುನರ್ವಸತಿ ಯೋಜನೆಗೆ ಸೇರ್ಪಡಿಸಲಾಗುವುದೆಂಬ ಭರವಸೆಯೊಂದಿಗೆ ನಾವುಗಳು ಸ್ಥಳಾತರ ಗೊಡಿದ್ದೇವೆ. ಆದರೆ, 2016-17ರಲ್ಲಿ 6 ಮಂದಿಯನ್ನು ಮಾತ್ರ ಯೋಜನೆಗೆ ಸೇರಿಸಲಾಗಿದೆ. ಇನ್ನೂ 33 ಮಂದಿ ಬಾಕಿ ಉಳಿದಿದ್ದು, ಇವರನ್ನು ಕೂಡಲೇ ಪುನರ್ವಸತಿ ಯೋಜನೆಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಮಹೇಶ್‌ಕುಮಾರ್‌, ಎಸಿಎಫ್‌ ಪ್ರಸನ್ನಕುಮಾರ್‌, ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಚಂದ್ರಶೇಖರ್‌, ವಿಸ್ತರರ್ಣಾಧಿಕಾರಿ ಶಂಕರ್‌, ಆರ್‌ ಐ. ರಾಜ್‌ ಕುಮಾರ್‌, ಲಿಫ್ಟ್ ಸಂಸ್ಥೆಯ ಲೋಕೇಶ್‌, ಪುನರ್ವಸತಿ ಕೇಂದ್ರದ ಅಧ್ಯಕ್ಷ ಚಂದ್ರು, ಮಾಜಿ ಆಧ್ಯಕ್ಷ ಜೆ.ಟಿ.ರಾಜಪ್ಪ, ಮುಖಂಡರಾದ ಪುಟ್ಟಸ್ವಾಮಿ, ಗವಿಮಾಧು, ಪಿಡಿಒ ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಭಾವಿಗಳಿಂದ ಜಮೀನು ಒತ್ತುವರಿ, ಬೆದರಿಕೆ: ಆದಿವಾಸಿಗಳ ಸಮಸ್ಯೆಯನ್ನು ತೆರೆದಿಟ್ಟ ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಮಾಜಿ ಆಧ್ಯಕ್ಷ, ಆದಿವಾಸಿ ಮುಖಂಡ ಜೆ.ಟಿ.ರಾಜಪ್ಪ , ಹೆಬ್ಬಾಳ ಹಾಗೂ ಶೆಟ್ಟಹಳ್ಳಿ-ಲಕ್ಕಪಟ್ಟಣ ಗಿರಿಜನರ ಪುನರ್ವಸತಿ ಕೇಂದ್ರದ ಜಮೀನುಗಳಿಗೆ ಸಾಗುವಳಿ ಪತ್ರ ಮತ್ತು ಆರ್‌ಟಿಸಿ ಮಾತ್ರ ನೀಡಲಾಗಿದೆ. ಆದರೆ, ಜಮೀನುಗಳು ಪಕ್ಕಾ-ಪೋಡು ಆಗಿಲ್ಲ. ಇದರಿಂದ ಸುತ್ತಮುತ್ತಲಿನ ಪ್ರಭಾವಿ ವ್ಯಕ್ತಿಗಳು ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ನೀರು ಹರಿಯುವ ಕೊಲ್ಲಿಯನ್ನೂಮುಚ್ಚಲಾರಂಭಿಸಿದ್ದಾರೆ.

ಇತರೆ ಸಮುದಾಯದ ರೈತರು ತಮ್ಮ ಜಾನುವಾರುಗಳನ್ನು ನಮ್ಮ ಜಮೀನಿಗೆ ಬಿಟ್ಟು ಮೇಯಿಸುತ್ತಾರೆ. ಇದನ್ನು ಪ್ರಶ್ನಿದರೆ ನಮಗೆ ಬೆದರಿಸುತ್ತಾರೆ. ಹೀಗಾಗಿ ಪುನರ್ವಸತಿ ಕೇಂದ್ರದ ಆದಿವಾಸಿಗಳ ಜಮೀನುಗಳನ್ನು ಪಕ್ಕಾ ಪೋಡು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಬಸವರಾಜು, ಈಗಾಗಲೇ ಕೇಂದ್ರದ ಎಲ್ಲಾ ಜಮೀನುಗಳನ್ನು (1ಟು5) ಒನ್‌ ಟು ಪೈವ್‌ ಮಾಡಿದ್ದು, ಮುಂಬರುವ ಜೂನ್‌ ಅಂತ್ಯದೊಳಗೆ ಪಕ್ಕಾ-ಪೋಡು ಮಾಡಿಕೊಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next