Advertisement

ಗುಡ್ಡದ ಮೇಲೊಂದು ಸಿನಿಮಾ ಮಾಡಿ…

07:20 AM May 11, 2018 | |

ನಿರ್ಮಾಪಕ ಪ್ರಕಾಶ್‌ ಸಿನಿಮಾ ಮಾಡುತ್ತೀನಿ ಎಂದು ಹೊರಟಾಗ, ಅವರ ಹಿತೈಷಿಗಳು ತಡೆದರಂತೆ. “ಸುಮ್ಮನೆ ಭೂಮಿ ಮೇಲೆ ದುಡ್ಡು ಹಾಕಿದರೆ ಡಬ್ಬಲ್‌ ಆಗುತ್ತದೆ. ಅದು ಬಿಟ್ಟು ಸಿನಿಮಾ ಮೇಲೆ ಹಾಕಿ ಯಾಕೆ ರಿಸ್ಕಾ’ ಎಂದು ಕೇಳಿದರಂತೆ. ಆದರೆ, ಪ್ರಕಾಶ್‌ ಭೂಮಿಯ ಮೇಲೆ ದುಡ್ಡು ಹಾಕುವುದಕ್ಕಿಂತ “ಎಡಕಲ್ಲು ಗುಡ್ಡದ ಮೇಲೆ’ ದುಡ್ಡು ಹಾಕಿದ್ದಾರೆ. ಅವರು ಹಾಕಿದ ದುಡ್ಡು ಬರುತ್ತದೋ ಇಲ್ಲವೋ ಗೊತ್ತಿಲ್ಲ, ಪ್ರಶಸ್ತಿಯಂತೂ ಬಂದಿದೆ. ಚಿತ್ರವು ನಾಲ್ಕು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಗೆದ್ದಿದೆ. ಇದರಿಂದ ಖುಷಿಯಾಗಿ ಹೋಗಿದ್ದಾರೆ ಪ್ರಕಾಶ್‌. ಇಂದು ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಹೇಳಿದಂತೆಯೂ ಆಯಿತು, ಪ್ರಶಸ್ತಿ ಪತ್ರಗಳನ್ನು ತೋರಿಸಿದಂತೆಯೂ ಆಯಿತು ಎಂದು ಅವರು ಮಾಧ್ಯಮದವರೆದುರು ಬಂದಿದ್ದರು.

Advertisement

ಮೊದಲು ಮಾತನಾಡಿದ್ದು ಅವರೇ. “ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳಿಗೆ ಎಂಟ್ರಿ ಸಿಗುವುದೇ ಕಷ್ಟ. ಅಂಥದ್ದರಲ್ಲಿ ನಮ್ಮ ಚಿತ್ರ ಎಂಟ್ರಿ ಪಡೆಯುವುದರ ಜೊತೆಗೆ ಪ್ರಶಸ್ತಿ ಸಹ ಸಿಕ್ಕಿದೆ. ನಾನು ಚಿತ್ರ ಮಾಡುತ್ತೀನಿ ಎಂದಾಗ, ಎಲ್ಲರೂ ಚಿತ್ರ ಮಾಡುವ ಬದಲು ಲ್ಯಾಂಡ್‌ ಮೇಲೆ ಹಾಕಿ ಅಂತ ಹೇಳಿದ್ದರು. ನಾನು ಆದರೂ ಧೈರ್ಯ ಮಾಡಿ ಸಿನಿಮಾ ಮಾಡಿದೆ. ಈ ಪ್ರೋತ್ಸಾಹ ನೋಡಿ ಖುಷಿ ಸಿಗುತ್ತೆ. ಜನರಿಂದಲೂ ಈ ರೀತಿಯ ಪ್ರೋತ್ಸಾಹ ಸಿಕ್ಕರೆ, ಮುಂದೆಯೂ ಸಿನಿಮಾ ಮಾಡುತ್ತೀನಿ’ ಎಂದರು.

ಈ ಚಿತ್ರವನ್ನು ವಿವಿನ್‌ ಸೂರ್ಯ ನಿರ್ದೇಶಿಸಿದ್ದಾರೆ. ಅವರಿಗೆ ತಮ್ಮ ಮೊದಲ ಚಿತ್ರ ಪ್ರಶಸ್ತಿ ಸಿಗುವುದರ ಜೊತೆಗೆ ಸಮಾಜಕ್ಕೆ ಒಂದಿಷ್ಟು ಒಳಿತು ಮಾಡಬೇಕು ಎಂಬ ಆಸೆ ಇತ್ತಂತೆ. ಈಗ ಪ್ರಶಸ್ತಿ ಸಿಗುವ ಮೂಲಕ ಅರ್ಧ ಆಸೆ ಈಡೇರಿದೆ. “ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದೆ. ಈಗಿನ ಮಕ್ಕಳು ಹದಗೆಡುತ್ತಿರುವ ಬಗ್ಗೆ ಚಿತ್ರದಲ್ಲಿ ಹಲವು ವಿಷಯಗಳಿವೆ. ತಂದೆ-ತಾಯಿ ತಮ್ಮ ಮಕ್ಕಳನ್ನು ಹೇಗೆ ಬೆಳಸಬೇಕು, ಅವರು ತಮ್ಮ ಕರ್ತವ್ಯ ಮರೆತರೆ ಏನಾಗುತ್ತದೆ ಎಂಬ ವಿಷಯ ಈ ಚಿತ್ರದಲ್ಲಿದೆ. ಈ ಚಿತ್ರವನ್ನು ಎಲ್ಲರೂ ನೋಡಬೇಕು. ಇದೊಂದು ಶೈಕ್ಷಣಿಕ ಚಿತ್ರ. ಆದರೆ, ಕಮರ್ಷಿಯಲ್‌ ಆಗಿ ಮಾಡಿದ್ದೀವಿ’ ಎಂದು ಹೇಳಿದರು. ಚಿತ್ರದಲ್ಲಿ ದತ್ತಣ್ಣ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ಈ ಚಿತ್ರದಲ್ಲಿ ಏನೋ ಇದೆ. ಸುಮ್ಮನೆ ಪ್ರಶಸ್ತಿ ಸಿಗೋಕೆ ಸಾಧ್ಯವಿಲ್ಲ. ಪ್ರೇಕ್ಷಕರ ಸಹಕಾರ ಸಿಕ್ಕರೆ, ಚಿತ್ರ ಇನ್ನಷ್ಟು ಗೆದ್ದಂಗೆ’ ಎಂದರು. ಇನ್ನು ಚಿತ್ರದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮೇಂದ್ರಗೆ ಆರಂಭದಲ್ಲಿ ಚಿತ್ರದ ಬಗ್ಗೆ ಅಷ್ಟು ನಂಬಿಕೆ ಇರಲಿಲ್ಲವಂತೆ. ಆದರೆ, ಈಗ ಈ ಚಿತ್ರದಲ್ಲಿ ನಟಿಸಿರುವುದು ಹೆಮ್ಮೆ ಅನಿಸುತ್ತಿದೆ ಎಂದರು. ಚಿತ್ರದಲ್ಲಿ ನಾಯಕನಾಗಿರುವ ನಕುಲ್‌ ಶರ್ಮ, ನಾಯಕಿ ಸ್ವಾತಿ ಶರ್ಮ ಮತ್ತು ಚಿತ್ರವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕಳಿಸುತ್ತಿರುವ ಪರ್ಪಲ್‌ ಆ್ಯರೋ ಫಿಲ್ಮ್ಸ್ನ ಶ್ರೀನಿವಾಸ್‌ ತಮ್ಮ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next