ಬೀದರ: ಮಾನಸಿಕ ರೋಗಿಗಳಿಗೂ ಸಹ ಗೌರವಾನ್ವಿತ ಬದುಕನ್ನು ಕಲ್ಪಿಸಿಕೊಡಬೇಕಾಗಿದೆ. ಇದು ಕೇವಲ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರ ಅಲ್ಲ. ಜಿಲ್ಲೆಯ ಪ್ರತಿ ಇಲಾಖೆಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಅಧ್ಯಕ್ಷ ಕಾಡಲೂರ ಸತ್ಯನಾರಾಯಣಾಚಾರ್ಯ ಹೇಳಿದರು.
ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ-2017 ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡ ಸನ್ನಿವೇಶ ಹಾಗೂ ಜೀವನದ ಶೈಲಿಯಿಂದಾಗಿ ಖನ್ನತೆ, ಮಾನಸಿಕ ಒತ್ತಡದಂತಹ ಹಲವಾರು ಮಾನಸಿಕ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ. ಮನುಷ್ಯನ ದೇಹಕ್ಕೆ ಯಾವ ರೀತಿ ಕಾಯಿಲೆಗಳು ಬರುತ್ತಿವೆಯೋ ಅದೇ ರೀತಿ ಮನಸ್ಸಿಗೂ ಕೂಡ ಕಾಯಿಲೆ ಬರುವುದು ನೈಸರ್ಗಿಕವಾಗಿದ್ದು, ಪ್ರತಿಯೊಬ್ಬರು ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಚಿಕಿತ್ಸೆ ನೀಡಿ ಗುಣಪಡಿಸುವ ಹೊಣೆಗಾರಿಕೆ ಇದೇ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ್ ಟಿ.ಪಿ. ಮಾತನಾಡಿ, ಸಂವಿಧಾನವು ಎಲ್ಲರಿಗೂ ಜೀವಿಸುವ ಹಕ್ಕು ನೀಡಿದೆ. ಆ ಹಕ್ಕನ್ನು ಮಾನಸಿಕ ರೋಗಿಗಳಿಗೂ
ಕಲ್ಪಿಸಿಕೊಡುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಬಹಳ ಪರಿಣಾಮಕಾರಿ ಆಗಿದ್ದು, ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅನುಷ್ಠಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕಾನೂನಿನ ವ್ಯಾಖ್ಯಾನ, ವ್ಯಾಪ್ತಿ ಮತ್ತು ಅನುಷ್ಠಾನ ಅರಿತು ಜಿಲ್ಲೆಯ ಹಲವಾರು ಇಲಾಖೆಗಳ ಮುಖ್ಯಸ್ಥರು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಡಿಸಿ ರಾಮಚಂದ್ರನ್ ಆರ್. ಅಧ್ಯಕ್ಷತೆ ವಹಿಸಿ, ಜಿಲ್ಲಾಡಳಿತ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅನುಷ್ಠಾನ, ಮಾನಸಿಕ ರೋಗಿಗಳಿಗೆ ಸಿಗಬೇಕಾದ ಸೇವಾ ಸೌಲಭ್ಯಗಳನ್ನು ಒದಗಿಸಲು ಸದಾ ಸನ್ನದ್ದವಾಗಿದೆ ಎಂದರು. ಮಾನಸಿಕ ಆರೋಗ್ಯ ತಜ್ಞರಾದ ಡಾ| ಅಭಿಜಿತ ಪಾಟೀಲ, ಡಾ| ಶ್ವೇತಾ ಕೋಣಕೇರಿ ಅವರು ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಕುರಿತು ಪಿ.ಪಿ.ಟಿ. ಮೂಲಕ ವಿಶ್ಲೇಷಣೆ ಮಾಡಿದರು.
ಸಭೆಯಲ್ಲಿ ಎಸ್‌ಪಿ ನಾಗೇಶ ಡಿ.ಎಲ್., ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ, ಕಾರ್ಯದರ್ಶಿ ಧನರಾಜ ಬಿರಾದರ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಅ ಧಿಕಾರಿಗಳಾದ ಡಾ| ಮಹೇಶ ಬಿರಾದರ, ತಿಪ್ಪಣ್ಣ ಶಿರಸಗಿ, ಸಂಗಪ್ಪ ಕಾಂಬಳೆ, ಶ್ರಾವಣ ಜಾಧವ ಇನ್ನಿತರರು ಇದ್ದರು.