ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುತ್ತಿದ್ದ ಅವಿವಾಹಿತರಿಗೆಲ್ಲ ಎದುರಾಗುತ್ತಿದ್ದ ಒಂದೇ ಒಂದು ಸವಾಲ್ ಎಂದರೆ ಬಾಡಿಗೆ ಮನೆ ಹುಡುಕುವದು. ಸಂಪ್ರದಾಯಸ್ಥರೇ ತುಂಬಿದ್ದ ಚಾಮರಾಜಪೇಟೆ, ಎನ್.ಆರ್. ಕಾಲೊನಿ, ಹನುಮಂತನಗರ, ಗಾಂಧಿ ಬಜಾರ್, ಬಸವನಗುಡಿ ಮುಂತಾದ ಬಡಾವಣೆಗಳಲ್ಲಿ ಅವಿವಾಹಿತರಿಗೆ, ಮಾಂಸಾಹಾರಿಗಳಿಗೆ ಬಾಡಿಗೆ ಮನೆಯಲ್ಲಿ ಉಳಿಯುವದಿರಲಿ, ಅದನ್ನು ಹುಡುಕುವ ಅರ್ಹತೆಯೇ ಇರಲಿಲ್ಲ. ಒಂದು ವೇಳೆ ಅವಿವಾಹಿತರು ತಮ್ಮ ತಾಯಿ, ತಂಗಿಯರೊಂದಿಗಿದ್ದಲ್ಲಿ ಸ್ವಲ್ಪ ರಿಯಾಯಿತಿ ಸಿಗುವ ಸಾಧ್ಯತೆಯಿತ್ತು. ಒಂದು ಸಲ ಬೆಂಗಳೂರಿನಲ್ಲಿರುವ ನನ್ನ ಸಂಬಂಧಿಕರೊಬ್ಬರ ತಾಯಿಯನ್ನು ನನ್ನ ತಾಯಿಯೆಂದು ಜತೆಯಲ್ಲಿ, ಪಕ್ಕದ ಬಡಾವಣೆಯಲ್ಲಿ ಮನೆ ಹುಡುಕಲು ಕರೆದುಕೊಂಡು ಹೋದಾಗ, “”ಇವರನ್ನು ಎಲ್ಲೋ ನೋಡಿದ ಹಾಗಿದೆಯಲ್ಲ” ಎಂದು ಮನೆ ಮಾಲೀಕರಿಂದ ಹೇಳಿಸಿಕೊಂಡಾಗ ತಲೆಮರೆಸಿ ಅಲ್ಲಿಂದ ಕಾಲು ಕಿತ್ತಿದ್ದು ಇನ್ನೂ ನೆನಪಿದೆ. ನನಗೆ ಪ್ರಿಯವಾದ ಸೆಕಂಡ್ ಶೋ ಸಿನೆಮಾಕ್ಕೆ ತಿಲಾಂಜಲಿಯಿಟ್ಟು ರಾತ್ರಿ 9 ಗಂಟೆಯ ಒಳಗೆ ಗೇಟು ಬಂದಾಗುವ ಮುನ್ನವೇ ಮನೆಯೊಳಗಿರುವುದರಿಂದ ಹಿಡಿದು, ಮನೆ ಮಾಲೀಕರ ಎಲ್ಲ ನಿಬಂಧನೆಗಳಿಗೂ ಬದ್ಧರಾಗುವ, ಗುಲಾಮಗಿರಿಗೆ ಒಪ್ಪಿದರೆ ಮನೆಯನ್ನು ನೋಡಲು ಅವಕಾಶ !
ಮನೆಯಿಲ್ಲದೇ ಮಡದಿಯಿಲ್ಲ. ಮಡದಿಯಿಲ್ಲದೇ ಮನೆ ಮಾಲೀಕರು ಮನೆ ಕೊಡುವದಿಲ್ಲ! ಎಂತಹ ವಿಪರ್ಯಾಸ! ಮದುವೆಯಾಗಿ ಬರುವ ಮಡದಿಯನ್ನು ಸ್ವಾಗತಿಸಲು ಒಂದು ಮನೆಯಾದರೂ ಬೇಡವೆ? ಒಂದು ಕಾಲದಲ್ಲಿ ಅವಿವಾಹಿತರಾಗಿದ್ದ ಮನೆಯ ಮಾಲೀಕರಿಗೆ ಇಷ್ಟಾದರೂ ತಿಳಿಯಬಾರದೆ? ಅಥವಾ ಇಂತಿಷ್ಟು ಸಮಯದಲ್ಲಿ ಮದುವೆಯಾಗುತ್ತೇನೆಂಬ ಮುಚ್ಚಳಿಕೆ ಬರೆಸಿಕೊಂಡಾದರೂ ಮನೆಯನ್ನು ಕೊಡಬಾರದೆ? ಧನುರ್ಧಾರಿ ಅರ್ಜುನನ ದೃಷ್ಟಿ ಪಕ್ಷಿಯ ಕಣ್ಣಿನ ಮೇಲೆಯೇ ನೆಟ್ಟಂತೆ ನನ್ನ ಕಣ್ಣು ಯಾವಾಗಲೂ “ಮನೆ ಬಾಡಿಗೆಗೆ ಇದೆ’ ಎಂಬ ಬೋರ್ಡನ್ನು ಹುಡುಕಾಡುತ್ತಿತ್ತು. ಒಂದು ವೇಳೆ ಕಂಡರೂ ಮರುಕ್ಷಣವೇ ನಾನು ಅವಿವಾಹಿತವೆಂಬ ವರ್ಗಕ್ಕೆ ಸೇರಿದವನೆಂದು ನೆನಪಾಗಿ ಖನ್ನತೆಯುಂಟಾಗುತ್ತಿತ್ತು. ಅವಿವಾಹಿತರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿ ಬಾಡಿಗೆ ಮನೆಗಳಲ್ಲಿ ಮೀಸಲಾತಿಯನ್ನು ಸರಕಾರ ಪರಿಗಣಿಸಬಾರದೆಂದೇಕೆ ಎಂದು ಸಂಪಾದಕರಿಗೆ ಪತ್ರವನ್ನೂ ಬರೆದಿದ್ದಾಯಿತು. ಇನ್ನು ಈ ಪತ್ರಕ್ಕೆ ಓದುಗರೊಬ್ಬರು ಮದುವೆಯಾಗುವುದೇ ಸುಲಭದ ಪರಿಹಾರವೆಂದು ಪ್ರತಿಕ್ರಿಯಿಸಿದರೂ ಕೆಲಕಾಲ ಬೆಂಗಳೂರಿನಂತಹ ಮಾಯಾನಗರಿಯಲ್ಲಿಯ ಮೋಜು-ಮಸ್ತಿಯ ಜೀವನವನ್ನು ಸ್ವತ್ಛಂದವಾಗಿ ಸವಿಯುವ ಸ್ವಾತಂತ್ರ್ಯವನ್ನು ಬಲಿಗೊಡಲು ಯಾರು ತಾನೇ ಸಿದ್ಧವಿರುತ್ತಾರೆ?
ಕೆಲವೊಂದು ಬಾರಿ ಮನೆ ಹುಡುಕುವಾಗ TO LET ಬೋರ್ಡಿನ ಪಕ್ಕದಲ್ಲೇ ನಾಯಿಯಿದೆ ಎಂಬ ಎಚ್ಚರಿಕೆಯ ಸೂಚನೆ ನೋಡಿದಾಗ ಬೆಂಗಳೂರಿನಂತಹ ಮಹಾನಗರಿಯಲ್ಲಿ ಅಡ್ವಾನ್ಸ್ ಹಾಗೂ ಬಾಡಿಗೆಯಿಲ್ಲದೇ ತನ್ನ ನೆಲೆಯನ್ನು ಕಂಡುಕೊಂಡಂತಹ ನಾಯಿಯೇ ಎಷ್ಟು ಅದೃಷ್ಟವಂತ ಅಂತ ಎನಿಸಿದ್ದೂ ಉಂಟು. ಇನ್ನು ಕೆಲವೊಮ್ಮೆ ಕಿಡಿಗೇಡಿಗಳು TO LET ನ್ನು TOILET ಎಂದು ತಿದ್ದುಪಡಿ ಮಾಡಿದ್ದನ್ನು ನೋಡಿ “ನಮಗಿಲ್ಲದಾ ವಸ್ತು ಹೇಗಿದ್ದರೇನಂತೆ’ ಎಂಬ ದಾಸವಾಣಿ ನೆನಪಾಗದೇ ಇರುತ್ತಿರಲಿಲ್ಲ.
“ಮನೆಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ ಗಾದೆಯನ್ನು “ಮದುವೆಯಾಗದೇ ಬಾಡಿಗೆ ಮನೆ ಹಿಡಿದು ನೋಡು’ ಎಂದು ಬದಲಿಸುವ ಆಲೋಚನೆ ಮನದಲ್ಲಿ ಬಂದು ನನ್ನ ಹಾಸ್ಯಪ್ರಜ್ಞೆಗೆ ನಾನೇ ನಗುತ್ತಿ¨ªೆ ! ಆಫೀಸಿನಲ್ಲಿಯ ಮಹಿಳಾ ಸಹೋದ್ಯೋಗಿಯೊಬ್ಬಳನ್ನು ವಿನಂತಿಸಿ, ಜೊತೆಯಾಗಿ ಮನೆ ಹುಡುಕುವ ಆಲೋಚನೆಯಿಂದಲೇ ಮನಸ್ಸು ಕ್ಷಣಕಾಲ ಮುದಗೊಂಡು ಮನೆರಹಿತನಾಗಿರುವ ನಿರಾಸೆಯನ್ನೆಲ್ಲ ಮರೆಯಾಗಿಸುತ್ತಿತ್ತು. ಆದರೆ, ಅನುಭವಸ್ಥ ಮಾಲೀಕರ ಹದ್ದುಗಣ್ಣಿನ ಮುಂದೆ ನನ್ನ ಚಾಣಾಕ್ಷತನ ನಡೆಯಲಾರದೆಂದು ನನ್ನ ಈವರೆಗಿನ ಅನುಭವ ಹೇಳುತ್ತಿತ್ತು. ಪ್ರತೀ ಸೋಮವಾರ ಆಫೀಸಿನ ಸಹೋದ್ಯೋಗಿಗಳಿಂದ “ಮನೆ ಸಿಕ್ಕಿತೇನ್ರೀ’ ಎಂದು ಕೇಳಿಸಿಕೊಳ್ಳುವದೂ ಮತ್ತೆ ವಾರಾಂತ್ಯದಲ್ಲಿ “ಆಲ್ ದ ಬೆಸ್ಟ್’ ಎಂದು ಹೇಳಿಸಿಕೊಳ್ಳುವದೂ ಒಂದು ಪರಿಪಾಠವಾಯಿತು. ಬಾಡಿಗೆ ಮನೆ ಸಿಗುವವರೆಗೆ ಹತ್ತಿರದ, ದೂರದ ನೆಂಟರ ಅಥವಾ ಸ್ನೇಹಿತರ ಮನೆಯಲ್ಲಿರದೇ ಉಪಾಯವಿರಲಿಲ್ಲ. ಇನ್ನು ಮನೆ ಸಿಗದೇ ಹತಾಶನಾಗಿ ಬಂದಾಗ ನನ್ನನ್ನು ಹುರಿದುಂಬಿಸಲು ಆಡಿದ ಸಾಂತ್ವನದ ಮಾತುಗಳಿರಲಿ, ನನಗೆ ಬೇಗನೆ ಮನೆ ಸಿಗಲೆಂಬ ಅವರ ನಿಸ್ವಾರ್ಥವಾದ ಮನದಾಳದ ಪ್ರಾರ್ಥನೆ ಕೂಡ ಫಲಪ್ರದವಾಗುತ್ತಿರಲಿಲ್ಲ. ನಮ್ಮಂತಹ ಅವಿವಾಹಿತರ ಪರಿಸ್ಥಿತಿ ಅರ್ಥಮಾಡಿಕೊಂಡೋ ಏನೋ ಸರಕಾರದವರು ಜಾರಿಗೆ ತಂದ ರೆಂಟ್ ಕಂಟ್ರೋಲ್ ಕಾನೂನಿನ ಅಡಿಯಲ್ಲಿ ಅರ್ಜಿ ಹಾಕಿ ಅವರ ಆಫೀಸಿಗೆ ಅಲೆದಾಡಿ ಮನೆ ಸಿಗುವುದಂತೂ ಅಸಾಧ್ಯವಾದ ಮಾತಾಗಿತ್ತು.
ಭಾನುವಾರ ಬಂತೆಂದರೆ ಬ್ರೋಕರುಗಳ ಜತೆಯಲ್ಲಿ ಮನೆ ಹುಡುಕುವುದೊಂದೇ ಕೆಲಸ. ನಾಲ್ಕು ಗೋಡೆಗಳಿದ್ದು ಶೀಟಿನ ಸೂರಿರುವ ಮನೆಗಳಿಗೆಲ್ಲ ಹಾಲು, ರೂಮು, ಕಿಚನ್, ಕೊಳಾಯಿ, ಕಾವೇರಿ ನೀರು, ಕಕ್ಕಸ ಇದೆಯೆಂದು ವರ್ಣಿಸುವ ಬ್ರೋಕರಗಳ ಭರವಸೆಗೆ ಆಕರ್ಷಿತರಾಗಿ ಅವರ ಹಿಂದೆ ಅಲೆಯುವದು ನನ್ನ ಭಾನುವಾರದ ಕಾರ್ಯಕ್ರಮವಾಗಿತ್ತು. ಇಂತಹದೊಂದು ಭಾನುವಾರದ ಅನುಭವ ಬೆಂಗಳೂರಿನ ನನ್ನ ಬ್ಯಾಚುಲರ್ ದಿನಗಳ ಒಂದು ಅವಿಸ್ಮರಣೀಯ ನೆನಪಾಗಿ ಉಳಿದಿದೆ.
ಬ್ರೋಕರ್ ತೋರಿಸುವ ಐದು ಮನೆಗಳಿಗೆ ಹತ್ತು ರೂಪಾಯಿಯಂತೆ ಕರಾರು ಮಾಡಿಕೊಂಡೇ ನನ್ನ ಮನೆ ಬೇಟೆ ಪ್ರಾರಂಭವಾಗುತ್ತಿತ್ತು. ನೋಡಿದ ನಾಲ್ಕು ಮನೆಗಳೂ ನನಗಿಷ್ಟವಾಗದಿದ್ದಾಗ 10 ರೂಪಾಯಿ ಗಿಟ್ಟಿಸಲು ಅವನು ಆ ದಿನ ಐದನೇ ಮನೆಯನ್ನು ತೋರಿಸಲೇ ಬೇಕಾಗಿತ್ತು. ಕೊನೆಯಲ್ಲಿ ಆತ ನನ್ನನ್ನು ಚಾಮರಾಜಪೇಟೆಯಲ್ಲಿರುವ ಉಮಾ ಟಾಕೀಸಿನ ಪಕ್ಕದ ಸಣ್ಣ ಹೊಟೇಲಿಗೆ ಕರೆದೊಯ್ದ. ಆ ಹೊಟೇಲಿನ ಬಾಗಿಲು ಮುಚ್ಚಿತ್ತು. ಹೆಸರಿನ್ನೂ ನೆನಪಿದೆ- ಕೃಷ್ಣ ಭವನ ಎಂದು. ಸಾಧಾರಣವಾಗಿ ಹಳೆಯ ಕಾಲದ ಮನೆಯ ರೂಪದಲ್ಲೇ ಇದ್ದ ಹೊಟೇಲ್ ಅದು. “”ಏನಯ್ಯ, ಎಲ್ಲ ಬಿಟ್ಟು ಹೊಟೇಲಿಗೆ ಕರೆದುಕೊಂಡು ಬಂದ್ದಿದ್ದೀಯಾ?” ಎಂದು ಕೇಳಿದಾಗ, “”ಇಲ್ಲ ಸಾರ್, ಬಹಳ ದಿನದಿಂದ ಲಾಸ್‌ನಲ್ಲಿ ನಡೀತಾ ಇದೆಯೆಂದು ಹೊಟೇಲಿನ ಮಾಲೀಕ ಇದನ್ನು ಮುಚ್ಚಿ ಬಿಟ್ಟಿದ್ದಾನೆ ಸಾರ್. ಒಳಗಡೆ ಹಾಲು, ರೂಮು, ಕಿಚನ್, ಕೊಳಾಯಿ ಮತ್ತು ಕಕ್ಕಸ ಇದೆ ಸಾರ್. ಮಾಲೀಕರು ಬಾಡಿಗೆಗೆ ಅದರಲ್ಲೂ ಬ್ಯಾಚುಲರ್‌ಗೆ ಕೊಡಲು ತಯಾರಿದ್ದಾರೆ ಸಾರ್” ಎಂದಾಗ ನನಗೆ ಮನೆ ಸಿಕ್ಕಷ್ಟೇ ಸಂತೋಷವಾಯಿತು. “ಮಾಲೀಕರು ಎಲ್ಲಿಗೋ ಹೋದ ಹಾಗಿದೆ. ನಾಳೆ ಬನ್ನಿ, ಅವರ ಹತ್ತಿರ ಮಾತನಾಡಿಸುತ್ತೇನೆ’ ಎಂದು 10 ರೂಪಾಯಿ ತೆಗೆದುಕೊಂಡು ಮಾಯವಾಗಿಬಿಟ್ಟ !
ಸೋಮವಾರ ಸಂಜೆ ಗ್ರಾಹಕರಿಂದ ತುಂಬಿದ್ದ ಹೊಟೇಲಿನಲ್ಲಿ ತಿರುಪತಿ ತಿಮ್ಮಪ್ಪನ ಫೋಟೊದಡಿಯಲ್ಲಿ ವಿರಾಜಮಾನನಾಗಿರುವ ಹೊಟೇಲಿನ ಮಾಲೀಕನನ್ನು ನೋಡಿದಾಗ ಭಾನುವಾರ ಮುಚ್ಚಿದ್ದ ಹೊಟೇಲನ್ನು ಮನೆಯೆಂದು ತಿಳಿದು ಮೋಸ ಹೋಗಿದ್ದು ನನ್ನ ಬುದ್ಧಿಗೆ ಹೊಳೆಯದೆ ಹೋಯಿತಲ್ಲವೆಂದು ಬೇಸರವಾದರೂ, ಬ್ರೋಕರನ ಚಾಣಾಕ್ಷತೆಗೆ ತಲೆದೂಗಲೇ ಬೇಕಾಯಿತು. ಈಗಲೂ ಉಮಾ ಟಾಕೀಸಿನ ಹತ್ತಿರದಿಂದ ಹಾದು ಹೋದಾಗಲೆಲ್ಲ ಈ ಘಟನೆ ನೆನಪಾಗಿ ನಗು ಬರುತ್ತದೆ. ಆಗಿನ ಬೆಂಗಳೂರಿನ ನನ್ನ ಬ್ಯಾಚಲರ್ ದಿನಗಳ ಮೆಲುಕೇ ಸಮಸ್ಯೆಗಳ ಕೊಂಪೆಯಾಗಿರುವ ಈಗಿನ ಬೆಂಗಳೂರಿನ ನರಕ ಯಾತನೆಯನ್ನು ಮರೆಸಲು ಸಾಕು !
ಮಂಜುನಾಥ ಶೇಟ ಶಿರಸಿ