Advertisement

ಶಂಕೆ ಒಳಗೊಂದು ಸಂಸಾರ ಮಾಡಿ…

06:00 AM Sep 19, 2018 | |

ಪತಿ, ಪತ್ನಿಯ ನಡತೆಯನ್ನು ಅನುಮಾನಿಸುವ (ಗೀಳು- ಚಟ) ಮನೋರೋಗಕ್ಕೆ ಮಾತ್ರೆ ಮತ್ತು ಚಿಕಿತ್ಸಾ- ಮನೋವಿಜ್ಞಾನ (ಸೈಕೋಥೆರಪಿ) ಎರಡೂ ಬೇಕಾಗುತ್ತದೆ. ಪತ್ನಿ ಕೂಡಾ ಗಂಡನ ನಡತೆಯನ್ನು ಶಂಕಿಸಬಹುದು. “ನಡತೆಗೆಟ್ಟವರು ಅವರಾದರೆ, ನಾನ್ಯಾಕೆ ಮಾತ್ರೆ ತೆಗೆದುಕೊಳ್ಳಬೇಕು?’ ಎಂಬ ಭಾವನೆಯಲ್ಲಿ ಮನೋವೈದ್ಯರು ಕೊಡುವ ಮಾತ್ರೆ ತೆಗೆದುಕೊಳ್ಳಲು ಅನುಮಾನಿಸುವವರು ಹಿಂಜರಿಯುತ್ತಾರೆ.

Advertisement

 ಪತಿ ಯು ಪತ್ನಿಯನ್ನು ಅನುಮಾನಿಸುವ ಸಂದರ್ಭಗಳು ಹೀಗಿವೆ. ಬಾಲ್ಕನಿಯಲ್ಲಿ ಬಟ್ಟೆ ಹರವಲು ಬಿಡದೆ ಪತಿಯೇ ಹರವುದು; ತರಕಾರಿ ತರಲು ಬಿಡದಿರುವುದು; ಹಾಲು/ ಹೂ ಹುಡುಗರೊಂದಿಗೆ ಮಾತಾಡಿದಾಗ ಕೋಪಗೊಳ್ಳುವುದು; ಹೆಜ್ಜೆ ಹೆಜ್ಜೆಗೂ ಪತ್ನಿ ಇಂಥ ಕಡೆ ಸುರಕ್ಷಿತವಾಗಿದ್ದೀನಿ ಎಂದು ಮೆಸೇಜು ಕಳಿಸಲು ಆದೇಶಿಸುವುದು; ಅಳಿಯನೊಂದಿಗೆ ಮಾತಾಡಲು ಅಸಭ್ಯವೆನ್ನುವುದು, ಅಕಸ್ಮಾತ್‌ ಮಾತನಾಡಿದರೆ, ಪತ್ನಿಯನ್ನು ಬಾಯಿಗೆ ಬಂದಂತೆ ಬಯ್ಯುವುದು. ಬೇಜಾರಾಯಿತೆಂದು ಮಹಿಳಾ ಸಮಾಜವನ್ನು ಸೇರುವಂತಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರಾದರೆ, ಸಮಯಕ್ಕೆ ಸರಿಯಾಗಿ ಮನೆಗೆ ವಾಪಸಾಗದಿದ್ದರೆ ತುಂಬಾ ಪ್ರಶ್ನೆ ಮಾಡುವುದು. ಪತ್ನಿ ಕೆಲಸಕ್ಕೆ ಹೋಗಿ ಮನೆಗೆ ಸಂಬಳವನ್ನೂ ಕೊಡಬೇಕು ಮತ್ತು ಆಫೀಸಿನಲ್ಲಿ ಯಾರೊಂದಿಗೂ ಮಾತಾಡಬಾರದು/ ಪಿಕ್ನಿಕ್‌ ಹೋಗಬಾರದು. ಕೆಲವೊಮ್ಮೆ ಇವರು ಹೇಳುವ ಬಟ್ಟೆಯನ್ನೇ ಹಾಕಿಕೊಳ್ಳಲು ಆದೇಶಿಸುತ್ತಾರೆ. ಇದರಿಂದ ಮಹಿಳೆಯರಿಗೆ ಮಾನಸಿಕ ಹಿಂಸೆಯಾಗುತ್ತದೆ.

  ಪತ್ನಿ, ಪತಿಯನ್ನು ಅನುಮಾನಿಸುವ ಸಂದರ್ಭಗಳು ಹೀಗಿವೆ. ಪತಿ, ಅವರ ತಾಯಿಯೊಡನೆ ಲೋಕಾರೂಢಿಯಾಗಿ, ನಗುತ್ತಾ ಮಾತಾಡಬಾರದು. ಪತ್ನಿಯನ್ನು ಬಿಟ್ಟು ತಂಗಿಗೇನಾದರೂ ಹಬ್ಬಕ್ಕೆ ಬಟ್ಟೆ ಕೊಡಿಸಿದರೆ ಮನೆಯಲ್ಲಿ ಜಗಳ ತೀರದು. ಪತಿ ತಮ್ಮ ಅತ್ತಿಗೆಯೊಂದಿಗೆ ಸಲುಗೆಯಿಂದ ಇರಬಾರದು. ಆದರೆ, ತವರಿನ ಸ್ತ್ರೀಯರ ಜೊತೆ ತಮಾಷೆಯಾಗಿ ಮಾತಾಡಬಹುದು. ನೆರೆಹೊರೆಯ ಸ್ತ್ರೀಯರೊಂದಿಗೆ “ಹಾಯ್‌ ಹಲೋ’ ಸಲ್ಲದು. ತಾವು ಅನುಮಾನ ಪಡುವ ಮಹಿಳೆಯರನ್ನು ಹಿಗ್ಗಾಮುಗ್ಗಾ ಬೈದುಹಾಕುತ್ತಾರೆ.

  ಅನುಮಾನ ಪಡುವವರು ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಳ್ಳುತ್ತಾರೆ. ಸಂಸಾರ ಮಾಡಲು ಬಹಳ ಕಷ್ಟ. ಅಪಾರ್ಥಗಳು ಜಾಸ್ತಿ. ಇದು ಅನುಮಾನ ಪಡುವ ಮನೋರೋಗ ಎಂದರೆ, ಇಬ್ಬರಿಗೂ ನಂಬಿಕೆ ಬರುವುದಿಲ್ಲ.

  ನಡತೆಯ ಬಗ್ಗೆ ಅನುಮಾನ ಪಡುವುದರಿಂದ ಇನ್ನೊಬ್ಬರಿಗೆ ಕಿರುಕುಳವಾಗುತ್ತದೆ. ಕೂತರೆ ನಿಂತರೆ ತಪ್ಪಾದರೆ, ಖನ್ನತೆಯುಂಟಾಗುತ್ತದೆ. ಹೀಗಾಗಿ ಇವರಿಗೂ ಮನೋವೈದ್ಯರು ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಅನುಮಾನಪಡುವ ಕಾಯಿಲೆ ಅವರಿಗಿದ್ದರೆ ನಾನ್ಯಾಕೆ ಮಾತ್ರೆ ನುಂಗಬೇಕು ಎಂಬ ಪ್ರಶ್ನೆ ಇವರನ್ನೂ ಕಾಡುತ್ತದೆ.

Advertisement

 ಸಮಾಧಾನ: ವ್ಯಕ್ತಿತ್ವದಲ್ಲಿ ಭಯ- ಉದ್ವಿಘ್ನತೆ ಇರುವವರು ಅನುಮಾನ ಪಡುವ ಸಂದರ್ಭ ಜಾಸ್ತಿ. ಸಂಘರ್ಷ ನಿವಾರಣೆಗೆ ಕುಟುಂಬದವರೆಲ್ಲರ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ಪತಿ- ಪತ್ನಿ ಇಬ್ಬರಿಗೂ ನಾವು ವಸ್ತು ಸ್ಥಿತಿಯನ್ನು ವಿವರಿಸುತ್ತೇವೆ. ಇಬ್ಬರೂ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಪತಿ- ಪತ್ನಿ ಕ್ರಮವಾಗಿ ತಮ್ಮ ಹೆಂಡತಿ- ಗಂಡನ ಮೇಲೆ ಅನುಮಾನ ಪಡುವುದನ್ನು ನಿಲ್ಲಿಸದಿದ್ದಲ್ಲಿ ಜಗಳಗಳು ಜಾಸ್ತಿಯಾಗಿ ಮಕ್ಕಳಿಗೆ ತೊಂದರೆಯಾಗುತ್ತದೆ. ಡೈವೋರ್ಸ್‌ ಮಾತೂ ಏಳುತ್ತದೆ. ಕೆಲವೊಮ್ಮೆ ಪೊಲೀಸರಿಗೆ ಕಂಪ್ಲೇಂಟ್‌ ಹೋಗಿದೆ. ವಿನಾಕಾರಣ ನಡವಳಿಕೆಯ ಅಪಖ್ಯಾತಿಗೆ ಗುರಿಯಾಗಲೂಬೇಕಾಗುತ್ತದೆ. ಸಕಾಲಕ್ಕೆ ಸಮೀಪದ ಮನೋವೈದ್ಯರ ನೆರವನ್ನು ಪಡೆದುಕೊಳ್ಳಿ. ಈ ಮಾನಸಿಕ ರೋಗವನ್ನು ಗುಣಪಡಿಸಬಹುದು.

– ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next