Advertisement
ಜೀಪುಗಳ ಹಾವಳಿಹಲವಾರು ಚಾರಣವನ್ನು ಕೈಗೊಂಡ ನನಗೆ ಇಲ್ಲಿಯೂ ಅದಕ್ಕೆ ಅವಕಾಶವಿತ್ತು. ಆದರೆ ನಮ್ಮ ತಂಡದ ಉದ್ದೇಶ ಅದಾಗಿಲ್ಲದ ಕಾರಣ ನಾನೂ ಸುಮ್ಮನಾದೆ. ಹಾಗಾಗಿ, ಹದಿನೇಳು ಕಿಲೋಮೀಟರ್ ಎತ್ತರದಲ್ಲಿರುವ ಈ ಬೆಟ್ಟದ ಪ್ರದೇಶದ ಒಂದು ಹಂತದವರೆಗೆ ಸ್ವಂತ ವಾಹನವನ್ನೇ ಏರಿ ಬಂದೆವು. ಆದರೆ ಅನಂತರದಲ್ಲಿ ಆ ದಾರಿಗೆ ಸಮಾನವಾಗಿ ನಮ್ಮ ವಾಹನ ಅಸಹಾಯಕವಾಗಿದ್ದರಿಂದ ಗಾಡಿ ಬದಿಗಿರಿಸಿ ಜೀಪಿಗೆ ಏರುವ ಪ್ರಸಂಗ ಮುಂದಾಯಿತು. ಆ ದಾರಿಯೂ ಅಂಥದ್ದೇ ಕಲ್ಲು ಮಣ್ಣುಗಳ ಹೊಂಡ ಗುಂಡಿಯಲ್ಲಿ ಜೀಪಿಗೆ ಬೇರಾವ ವಾಹನಗಳು ಸ್ಪರ್ಧೆ ನೀಡುವಂತಿರಲಿಲ್ಲ. ಆದರೂ ತಾವೇನೂ ಕಮ್ಮಿ ಇಲ್ಲವೆಂಬ ತುಡಿತದೊಂದಿಗೆ, ತಾವೂ ಏರೂವುದರ ಜೊತೆಗೆ ತಮ್ಮ ಬೈಕ್‌ಗಳನ್ನೂ ಏರಿಸಿ, ಅವಕ್ಕೂ ಮಂದಾಲಪಟ್ಟಿಯ ಸೊಬಗಿನ ದರ್ಶನ ಮಾಡಿಸುವ ಸನ್ನಿವೇಶ ಎದುರಾದೀತು ಎಂಬುದೂ ಅತ್ತಿಂದಿತ್ತ ಸುಳಿದಾಡುವ ಪ್ರವಾಸಿಗರ ಮನದ ಪ್ರಶ್ನೆಯೂ ಹೌದು. ಆದ್ದರಿಂದ ಇಲ್ಲಿ ಜೀಪ್ ಗಳದ್ದೇ ದರ್ಬಾರು. ರಾಜ್ಯಕ್ಕೆ ರಾಜನೇ ಮುಖ್ಯವೆಂಬಂತೇ ಈ ಮಂದಾಲ ಪಟ್ಟಿಗೆ ಜೀಪ್ (ಡ್ರೈವರ್) ಗೆ ಪ್ರಧಾನಸ್ಥಾನ ಒದಗಿಬಂದಿದೆ.
ಅಂತೂ ಜೀಪ್ ಏರಿ ಪ್ರವೇಶ ದ್ವಾರದ ಬಳಿ ಬಂದಿಳಿದು ಪ್ರವೇಶ ಶುಲ್ಕ ನೀಡಿ ಕನಸಿನ ಮಂದಾಲ ಪಟ್ಟಿ ಬೆಟ್ಟಕ್ಕೆ ಪ್ರಥಮ ಹೆಜ್ಜೆ ಇಟ್ಟೆವು. ಹರ್ಷೋದ್ಗಾರಗಳೊಂದಿಗೆ ತಂಡೋಪತಂಡವಾಗಿ ಹೆಜ್ಜೆಗಳನ್ನು ಇರಿಸಿದ ನಾವೆಲ್ಲರೂ ಪ್ರಧಾನ ವೇದಿಕೆಯಾದ ಬೆಟ್ಟದ ತುದಿಯ ಹಂತಕ್ಕೆ ಬರುವಷ್ಟರಲ್ಲಿ ಸನಿಹದಲ್ಲಿದ್ದವರೆಲ್ಲರೂ ಕಣ್‌ದೃಷ್ಟಿಯಿಂದ ದೂರ ಸರಿದಿರುವಂತೆ ಭಾಸವಾಗುತ್ತಿತ್ತು. ಕೇವಲ ಶ್ರವಣದ ನಾದ ಕ್ಕನುಗುಣವಾಗಿ ಕಣ್ಣಿನ ಬಲೆಗಳಲ್ಲಿ ಅವರು ಹಾಕಿದ ವಸ್ತ್ರದಿಂದ ಮಾತ್ರ ಗುರುತಿಸಲು ಇಲ್ಲಿ ಅವಕಾಶ ಸಾಧ್ಯವಾಗಿತ್ತು. ಅಷ್ಟೊಂದು ಹಿಮವೇ ಅಲ್ಲಿ ನೆಲೆಯೂರಿತ್ತು. ಕ್ಷಣಹೊತ್ತು ನೆಲದಿಂದ ಮೇಲೆ ಜಿಗಿದೆ ಎಂದಾದರೆ ಬಾನಿನ ಮೋಡ- ಅಂತೆಯೇ ಕವಿದ ಮಂಜಿನ ಸಾಮರಸ್ಯಕ್ಕೆ ನಾವೆಲ್ಲರೂ ಹಾರಾಡುವ ಹಕ್ಕಿಗಳಂತೆ ತೇಲಾಡುವೆವು ಎಂಬ ಭಾವನೆಗಳು ಮನದಾಳದಲ್ಲಿ ಚಿಮ್ಮುತಿತ್ತು. ನೆಲದ ಹಸಿರು ಹುಲ್ಲಿನ ಬಣ್ಣವನ್ನ ಕಡೆಗಣಿಸಿದರೆ ಇಡೀ ಲೋಕವೇ ಶಾಂತಿ ಸಂಕೇತವಾದ ಹಿಮದ ಬಿಳಿ ಬಣ್ಣಕ್ಕೆ ತಿರುಗಿ ನಿಂತಿರುವುದನ್ನು ನೋಡಲು ಕಣ್ಣಗೆ, ಹಸಿದು ಬಡಿಸಿದ ಬಾಡೂಟದಂತಿತ್ತು. ಲೋಕವೆಲ್ಲ ಹಿಮಮಯವಾದಂತೆ ಆ ಗಳಿಗೆಯಲ್ಲಿ ಕಣ್ಣೆದುರು ಸರಿದಾಡುವ ಆ ಮಂಜಿನ ನೀಳವಾದ ಅಲೆಗಳನ್ನು ತನ್ನ ಕೈಮುಷ್ಠಿಯೊಳಗೆ ಕೂಡಿಹಾಕುವಲ್ಲಿ ಪ್ರತಿಯೋರ್ವನೂ ಹರಸಾಹಸ ಪಡುತ್ತಿದ್ದ ದೃಶ್ಯವೇ ಮನೋಹರವಾದದ್ದು. ಈ ನಯನ ರಮಣೀಯ ತುಣುಕುಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಭವಿಷ್ಯತ್ತಿನಲ್ಲಿ ನೋಡುವ ಬಯಕೆಗೆ ಈ ಪ್ರದೇಶವು ತಣ್ಣೀರೆರಚಿತ್ತು. ತೆಗೆದ ಫೋಟೋಗಳಲ್ಲೂ ಮಂಜಿನದ್ದೇ ಕಾರುಬಾರು. ಅಷ್ಟೊಂದು ಪ್ರಭಾವ ಈ ಹಿಮದ್ದು. ಒಂದೆಡೆ ಹತ್ತಾರು ಮೆಟ್ಟಿಲುಗಳೊಂದಿಗೆ ನಿರ್ಮಿತವಾಗಿದ್ದ ಒಂದು ದ್ವೀಪದಂತೆ ಸ್ವಲ್ಪ ಎತ್ತರದಲ್ಲಿಯೂ ಇದ್ದೂ, ಅದರ ಮೇಲೆ ತೆರಳಿ ಪ್ರಕೃತಿ ಸೌಂದರ್ಯವನ್ನ ಮನಸಾರೆ ಒಪ್ಪಿಕೊಂಡೆವು. ಇನ್ನೊಂದೆಡೆ ಅದಕ್ಕೆ ವಿರುದ್ಧªವಾಗಿ ಒಂದು ಮರವೂ ಇದ್ದೂ, ಬಂಡೆಗಾತ್ರದ ಸಮ ಪ್ರಮಾಣದ ಕಲ್ಲುಗಳು ವಿಶ್ರಾಂತಿ ತಾಣಕ್ಕೆ ಹೇಳಿಮಾಡಿಸಿದಂತಿತ್ತು. ಬೆಳಕು ಮೂಡುತ್ತಿದಂತೆ ಮಂಜು ಕರಗಿ ಮಾಯವಾಗುವಷ್ಟರಲ್ಲಿ, ರವಿರಾಯನು ಮೋಡದ ಗುಂಪನ್ನ ಚದುರಿಸಿ ದಿನದ ಮುಂದುವರಿಕೆಗೆ ಪ್ರಭುತ್ವ ಸಾಧಿಸಿದಂತಿತ್ತು. ಇನ್ನೊಂದು ಹೆಜ್ಜೆ ಮೇಲಿರಿಸಿದೆ ಎಂದಾದರೆ ಆ ಬೀರುವ ಬೆಳಕಿನ ಒಡೆಯನಾದ ಸೂರ್ಯನ ಸನಿಹ ನನಗೂ ಒಂದು ಸ್ಥಳ ನಿಶ್ಚಿತವಾಗುತ್ತಿತ್ತೋ ಏನೋ ಎಂದು ಮನದಲ್ಲಿಯೇ ಮೂಡುತ್ತಿರಲು, ಆಕಾಶ ಇನ್ನೇನೋ ಹತ್ತಿರಕ್ಕಿದೆ-ಏಣಿ ಇಡೋಣವೇ ಎಂಬುದೂ ತಂಡದ ಸದಸ್ಯನೊಬ್ಬನ ಹಾಸ್ಯ ಸಂದೇಶವಾಗಿತ್ತು.
Related Articles
ಕಬ್ಬಿಣಕ್ಕೆ ಜಿಡ್ಡುಹಿಡಿದಂತೆ ಅಶಕ್ತತೆಯಿಂದ ಮೂಲೆಗುಂಪಾಗಿದ್ದ ಈ ಮಂದಾಲಪಟ್ಟಿ ತಾಣಕ್ಕೆ ಚಿನ್ನದಂತಹ ಸ್ಪರ್ಶವ ನೀಡಿ ಆ ಪ್ರದೇಶದ ಹೊಳಪು, ಸೌಂದರ್ಯ, ಘನತೆಯನ್ನ ಇನ್ನಷ್ಟು ಹೆಚ್ಚಿಸಿದ ಕೀರ್ತಿ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಎಂಬ ಕನ್ನಡ ಚಲನಚಿತ್ರಕ್ಕೆ ಸಲ್ಲುತ್ತದೆ ಎಂದರೂ ತಪ್ಪಾಗಲಾರದು. ಚಿತ್ರದ ಸನ್ನಿವೇಶದಲ್ಲಿ ಈ ಹಿಮಪಾತವಾದ ಪ್ರದೇಶವೂ ಇದ್ದೂ, ಗಾಳಿಪಟವೂ ಅಲ್ಲಿರುವ ಮರಕ್ಕೆ ತಗುಲಿಕ್ಕೊಳ್ಳುವ ತುಣುಕು ಚಿತ್ರದಲ್ಲಿದೆ. ಆ ಮರವೂ ಇಂದಿಗೂ ಜನಜನಿತವಾಗಿದ್ದು ಅಲ್ಲಿ ನೆರಳಲ್ಲಿ ಕೂರಲು ಸೂಕ್ತವಾದ ಸ್ಥಳ ಬೇರೊಂದಿಲ್ಲ.
Advertisement
ಗಣೇಶ್ ಕುಮಾರ್, ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು