Advertisement

ಕುರಾನ್ ಬಗ್ಗೆ ಡಾಕ್ಯುಮೆಂಟರಿ ಮಾಡಿ ಏನಾಗುತ್ತದೆ ನೋಡಿ..: ‘ಆದಿಪುರುಷ್’ ತಂಡಕ್ಕೆ ಕೋರ್ಟ್

02:10 PM Jun 29, 2023 | keerthan |

ಲಕ್ನೋ: ರಾಮಾಯಣದ ಪಾತ್ರಗಳನ್ನು ಚಿತ್ರಿಸಿರುವ ‘ಆದಿಪುರುಷ್’ ಚಿತ್ರದ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್ ಹೈಕೋರ್ಟ್, ‘ಕುರಾನ್ ಅನ್ನು ಇದೇ ರೀತಿ ಪರಿಗಣಿಸಿದರೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಕಲ್ಪಿಸಿಕೊಳ್ಳಿ’ ಎಂದು ಕೇಳಿದೆ.

Advertisement

ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಲಕ್ನೋ ಪೀಠವು, ರಾಮಾಯಣ, ಕುರಾನ್ ಅಥವಾ ಬೈಬಲ್‌ ಕಥಾಹಂದರದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಇಂತಹ ಸಿನಿಮಾಗಳನ್ನು ಏಕೆ ನಿರ್ಮಿಸಲಾಗುತ್ತದೆ ಎಂದು ಕೇಳಿದೆ.

“ಕುರಾನ್ ಮೇಲೆ ಇದೇ ರೀತಿ ಒಂದು ಸಣ್ಣ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ ಎಂದು ಭಾವಿಸೋಣ, ಆಗ ಯಾವ ರೀತಿಯ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ನೀವು ಯೋಚಿಸಬಹುದೇ? ಆದರೆ ಹಿಂದೂಗಳ ಸಹಿಷ್ಣುತೆಯಿಂದಾಗಿ, ಚಲನಚಿತ್ರ ನಿರ್ಮಾಪಕರ ಈ ಪ್ರಮಾದದ ಹೊರತಾಗಿಯೂ ವಿಷಯಗಳು ಹದಗೆಟ್ಟಿಲ್ಲ” ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಪ್ರಕಾಶ್ ಸಿಂಗ್ ಅವರ ರಜಾಕಾಲದ ಪೀಠ ಹೇಳಿದೆ.

ಚಿತ್ರವೊಂದರಲ್ಲಿ ಶಿವನು ತನ್ನ ತ್ರಿಶೂಲದೊಂದಿಗೆ ಓಡುತ್ತಿರುವಂತೆ ತೋರಿಸಲಾಗಿತ್ತು. ಈಗ ರಾಮಾಯಣದ ಭಗವಾನ್ ರಾಮ ಮತ್ತು ಇತರ ಪಾತ್ರಗಳನ್ನು ಬಹಳ ನಾಚಿಕೆಗೇಡಿನ ರೀತಿಯಲ್ಲಿ ತೋರಿಸಲಾಗಿದೆ. ಇದು ನಿಲ್ಲಬೇಕಲ್ಲವೇ?’’ ಎಂದು ಪೀಠ ಪ್ರಶ್ನಿಸಿತು.

ಇದನ್ನೂ ಓದಿ:World Cup 2023 ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ; ಭಾರತಕ್ಕೆ ಸಿಗಲಿದೆ ಎರಡು ಪಂದ್ಯಗಳು

Advertisement

ವಿಚಾರಣೆಯ ಸಂದರ್ಭದಲ್ಲಿ ಪೀಠವು “ಸಿನಿಮಾ ಮಾಡಿರುವ ತಮಾಷೆಯ ರೀತಿಯನ್ನು ಪರಿಗಣಿಸಿ ನ್ಯಾಯಾಲಯವು ಮೌನವಾಗಿರಬೇಕೇ” ಎಂದು ಖಾರವಾಗಿ ಪ್ರಶ್ನಿಸಿದೆ.

ಅಂತಹ ಚಲನಚಿತ್ರಗಳನ್ನು ನಿರ್ಮಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಮಾಡುವ ಅಗತ್ಯವಿದೆ ಎಂದ ಪೀಠವು, ಧಾರ್ಮಿಕ ವಿಷಯಗಳ ಮೇಲೆ ನಿರ್ಮಿಸಲಾದ ಚಲನಚಿತ್ರಗಳು “ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಬಾರದು” ಎಂದು ಒತ್ತಿ ಹೇಳಿದೆ.

ನ್ಯಾಯಾಲಯಕ್ಕೆ ಯಾವುದೇ ಧಾರ್ಮಿಕ ಒಲವಿಲ್ಲ. ಕುರಾನ್ ಅಥವಾ ಬೈಬಲ್‌ ಗೆ ಸಂಬಂಧಿಸಿದಂತೆ ತನ್ನ ಮುಂದೆ ಮನವಿ ಬಂದಿದ್ದರೆ, ಅದೇ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿತ್ತು ಎಂದು ಪೀಠ ಹೇಳಿದೆ.

ಓಂ ರಾವತ್ ನಿರ್ದೇಶನದ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸೈಫ್ ಆಲಿ ಖಾನ್, ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next