Advertisement
ಜಿಲ್ಲಾ ಮಟ್ಟದಲ್ಲಿ ಮೊದಲ ಹಂತ ಹಾಗೂ ತಾಲೂಕು ಮಟ್ಟದಲ್ಲಿ ಎರಡನೇ ಹಂತದಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಅರವತ್ತು ವರ್ಷ ದಾಟಿದವರು ಕರೆ ಮಾಡಿದ 72 ಗಂಟೆಗಳಲ್ಲಿ ಪಿಂಚಣಿ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಮನೆ ಬಾಗಿಲಿಗೆ ಪಿಂಚಣಿ ಮಂಜೂರು ಪತ್ರ ಕಾರ್ಯಕ್ರಮ ಅನುಷ್ಠಾನದಲ್ಲೂ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರ ಮಟ್ಟದಲ್ಲಿ ಕೆಲವೊಂದು ದೂರುಗಳು ಬಂದ ಹಿನ್ನಲೆಯಲ್ಲಿ ಈಗ ಸುಧಾರಿತ ಯೋಜನೆ ಜಾರಿಗೆ ಇಲಾಖೆ ಮುಂದಾಗಿದೆ.
60 ವರ್ಷ ತುಂಬಿದವರು ಸಹಾಯವಾಣಿಗೆ ಕರೆ ಮಾಡಿದ ತತ್‌ಕ್ಷಣ ಅಧಿಕೃತವಾಗಿ ಮನವಿ ದಾಖಲಾಗುತ್ತದೆ. ಅನಂತರ ಅವರ ಆಧಾರ್ ಹಾಗೂ ಬಿಪಿಎಲ್ ಕಾರ್ಡ್ ಮತ್ತು ಚುನಾವಣ ಗುರುತಿನ ಚೀಟಿಯ ಮಾಹಿತಿ ಪಡೆದು ಅದನ್ನು ಸಂಬಂಧಪಟ್ಟ ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರಿಗೆ ಕಳುಹಿಸಲಾಗುವುದು. ಈ ತಿಂಗಳಾಂತ್ಯಕ್ಕೆ ಸಿದ್ಧ
ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಸಂಬಂಧಪಟ್ಟವರ ಮನೆಗೆ ಹೋಗಿ ದಾಖಲಾತಿ ಹಾಗೂ ಮಾಹಿತಿ ಪರಿಶೀಲಿಸಿ 48 ಗಂಟೆಗಳಲ್ಲಿ ವರದಿ ಸಲ್ಲಿಸಬೇಕು. ಅನಂತರ ತಹಸೀಲ್ದಾರ್ ಹಂತದಲ್ಲಿ ಪಿಂಚಣಿ ಮಂಜೂರಾತಿ ಆದೇಶ ಹೊರಡಿಸಿ 72 ಗಂಟೆಗಳಲ್ಲಿ ಅವರ ಖಾತೆಗೆ ಪಿಂಚಣಿ ಜಮೆ ಮಾಡಲಾಗುವುದು. ಎಪ್ರಿಲ್ ತಿಂಗಳಾಂತ್ಯಕ್ಕೆ ಆ್ಯಪ್ ಹಾಗೂ ಸಹಾಯವಾಣಿ ಸಿದ್ಧಗೊಳ್ಳಲಿದ್ದು, ಆದಷ್ಟು ಶೀಘ್ರ ಯೋಜನೆ ಜಾರಿಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಹಾಯವಾಣಿ ಮುಂದಿನ ದಿನಗಳಲ್ಲಿ ವಿಧವಾ, ವಿಕಲಚೇತನ ಸೇರಿದಂತೆ ಎಲ್ಲ ಮಾಸಾಶನ ಯೋಜನೆಗಳಿಗೂ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದೆ.
Related Articles
ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ, ವಿಧವಾ, ವಿಕಲಚೇತನ ಸೇರಿದಂತೆ 68 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮನೆ ಬಾಗಿಲಿಗೆ ಪಿಂಚಣಿ ಯೋಜನೆ ಜಾರಿಯಾದ ಅನಂತರ 3.52 ಲಕ್ಷ ಜನರನ್ನು ಹೊಸದಾಗಿ ಪಿಂಚಣಿ ವ್ಯವಸ್ಥೆಗೆ ಸೇರ್ಪಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲೂ ಹೆಚ್ಚು ಪಿಂಚಣಿ ಹಾಗೂ ಮಾಸಾಶನಕ್ಕಾಗಿ ಅರ್ಜಿ ಸಲ್ಲಿಕೆಯಾಗುತ್ತಿರುವುದು ಹಾಗೂ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಮಂದಿ ಈ ಯೋಜನೆಗಳಿಗೆ ಅರ್ಹತೆ ಪಡೆಯುತ್ತಿರುವುದನ್ನು ಗಮನಿಸಿ ಮನೆ ಬಾಗಿಲಿಗೆ ಪಿಂಚಣಿ ಹಾಗೂ 72 ಗಂಟೆಗಳಲ್ಲಿ ಪಿಂಚಣಿ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
Advertisement
ಈ ಮಧ್ಯೆ ಕುಂದು ಕೊರತೆ ಸ್ವೀಕಾರಕ್ಕೂ ಸಹಾಯವಾಣಿ ಕೇಂದ್ರದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಹಾಲಿ ಪಿಂಚಣಿ ಮತ್ತು ಮಾಸಾಶನ ಪಡೆಯುತ್ತಿರುವವರ ಸಂಪೂರ್ಣ ವಿವರ ಸಹಾಯವಾಣಿ ಕೇಂದ್ರದಲ್ಲಿ ಲಭ್ಯವಿರುವಂತೆ ಸೂಚಿಸಲಾಗಿದೆ.
ಮನೆ ಬಾಗಿಲಿಗೆ ಪಿಂಚಣಿ ಅನಂತರ ಇದೀಗ 72 ಗಂಟೆಗಳಲ್ಲಿ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಇದು ಸದ್ಯದಲ್ಲೇ ಜಾರಿಯಾಗಲಿದೆ. ಇಂತಹ ಸುಧಾರಿತ ವ್ಯವಸ್ಥೆ ದೇಶದಲ್ಲಿ ಇದೇ ಮೊದಲು.– ಆರ್. ಅಶೋಕ್, ಕಂದಾಯ ಸಚಿವ – ಎಸ್. ಲಕ್ಷ್ಮೀನಾರಾಯಣ