ದಕ್ಷಿಣಾಯಣ ಮುಗಿದು ಉತ್ತರಾಯಣ ಆರಂಭಕ್ಕೆ ನಾಂದಿ ಹಾಡುವ ಮಕರ ಸಂಕ್ರಮಣ ಮತ್ತೆ ಬಂದಿದೆ. ಈ ಸಮಯದಲ್ಲಿ ಅತೀ ಹೆಚ್ಚು ಜನರ ಕುತೂಹಲ ಕೆರಳಿಸುವುದು ಶಬರಿಮಲೆಯ ಮಕರ ಜ್ಯೋತಿ. ಸುಮಾರು 48 ದಿನಗಳ ಕಾಲ ಕಠಿಣ ವೃತ ಮಾಡಿದ ಅಯ್ಯಪ್ಪ ಮಾಲಾಧಾರಿಗಳು ಈ ಪುಣ್ಯ ಕ್ಷಣಕ್ಕಾಗಿ ಕಾಯುತ್ತಾರೆ.
ಪೊನ್ನಂಬಲಮೇಡು ಗಿರಿಯಲ್ಲಿ ಕ್ಷಣ ಮಾತ್ರ ಕಾಣಿಸಿಕೊಳ್ಳುವ ಈ ಮಕರ ಜ್ಯೋತಿಯ ಹಿನ್ನಲೆಯ ಬಗ್ಗೆ ಹಲವು ಮಾತುಗಳಿದೆ. ಸತ್ಯ- ಸುಳ್ಳಿನ ವಾದವಿದೆ. ಆದರೂ ವರ್ಷಕ್ಕೆ ಒಮ್ಮೆ, ಅದರಲ್ಲೂ ಕ್ಷಣ ಮಾತ್ರ ಕಾಣಿಸಿಕೊಳ್ಳುವ ಜ್ಯೋತಿಯನ್ನು ಕಾಣಲು ಭಕ್ತರು ದೂರದೂರುಗಳಿಂದ ಆಗಮಿಸುತ್ತಾರೆ. ಕೋಟ್ಯಾಂಚರ ಭಕ್ತರು ನೇರಪ್ರಸಾರದಲ್ಲಿ ಕಂಡು ಪುನೀತರಾಗುತ್ತಾರೆ.
ಪ್ರತಿ ವರ್ಷ ಮಕರ ಸಂಕ್ರಮಣದ ದಿನದಂದು ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ಅಯ್ಯಪ್ಪ ಸ್ವಾಮಿಯ ಮಹಾ ಮಂಗಳಾರತಿಯ ನಂತರ ಈ ದಿವ್ಯ ಜ್ಯೋತಿ ಕಾಣಿಸಿಕೊಳ್ಳುತ್ತದೆ. ಕೇವಲ ಕ್ಷಣಮಾತ್ರ ಕಾಣಿಸಿಕೊಳ್ಳುವ ಮಕರ ಜ್ಯೋತಿ ಒಟ್ಟು ಮೂರು ಬಾರಿ ಕಾಣಿಸಿಕೊಳ್ಳುತ್ತದೆ.
ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಗೆ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲೇಡು ಬೆಟ್ಟದಲ್ಲಿ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ. ಅಯ್ಯಪ್ಪ ಸ್ವಾಮಿಯ ಕಾರಣಿಕದಿಂದ ವರ್ಷಕ್ಕೆ ಒಮ್ಮೆ ಜ್ಯೋತಿಯ ರೂಪದಲ್ಲಿ ಕಾಣಿಸಿಕೊಂಡು ಭಕ್ತರನ್ನು ಅನುಗ್ರಹಿಸುತ್ತಾರೆ ಎಂದು ನಂಬಿರುವ ಭಕ್ತರು ಶತಮಾನಗಳಿಂದಲೂ ಸಹಸ್ರ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಆದರೆ ಈ ಮಕರ ಜ್ಯೋತಿಯು ದೇವ ವಿಸ್ಮಯ ಅಥವಾ ಪ್ರಕೃತಿ ವಿಸ್ಮಯ ಎಂದು ಒಪ್ಪದ ಪಂಗಡವೂ ಇದೆ. ಅವರ ಪ್ರಕಾರ ಪೊನ್ನಂಬಲಮೇಡು ಕಾಡಿನಲ್ಲಿ ಮಾನವ ಹಸ್ತಕ್ಷೇಪದಿಂದ ಈ ಜ್ಯೋತಿಯನ್ನು ಉರಿಸಲಾಗುತ್ತದೆ. ಈ ದಟ್ಟ ಕಾಡಿನಲ್ಲಿ ಈ ಹಿಂದೆ ಗಿರಿ ಜನರು ಮಕರ ಸಂಕ್ರಮಣದ ದಿನ ಸಂಜೆ ಪೂಜೆಯ ಸಮಯದಲ್ಲಿ ಕರ್ಪೂರ ಮತ್ತು ಕಟ್ಟಿಗೆಯಿಂದ ಬೆಂಕಿ ಮಾಡುತ್ತಿದ್ದರು. ಅದು ದೂರದಿಂದ ಕಾಣುವಾಗ ಜ್ಯೋತಿಯಂತೆ ಕಾಣುತ್ತದೆ ಎನ್ನುವುದು ಅವರ ವಾದ.
ಸದ್ಯ ಪೊನ್ನಂಬಲಮೇಡು ಅರಣ್ಯ ಪ್ರದೇಶ ಸರಕಾರದ ವಶದಲ್ಲಿದೆ. ಅರಣ್ಯ ಮತ್ತು ವಿದ್ಯುತ್ ಇಲಾಖೆಯ ಸುಪರ್ದಿಯಲ್ಲಿರುವ ಈ ಕಾಡಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸದ್ಯ ಗಿರಿಜನರ ಸಂತಾನ ಇಲ್ಲದ ಕಾರಣ ವಿದ್ಯುತ್ ಇಲಾಖೆಯೇ ಇಲ್ಲಿ ಕರ್ಪೂರವನ್ನು ಉರಿಸಲಾಗುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ಮಕರ ಜ್ಯೋತಿಯ ಬಗೆಗಿನ ವಾದ- ಪ್ರತಿವಾದಗಳು ಏನೇ ಇದ್ದರೂ, ಭಕ್ತರು ಮಾತ್ರ ಶಬರಿಗಿರಿವಾಸನ ಸನ್ನಿಧಿಗೆ ಹರಿದು ಬರುತ್ತಾರೆ. ಶತಮಾನಗಳಿಂದ ನಡೆದು ಬರುತ್ತಿರುವ ಸಂಪ್ರದಾಯ ಇಂದಿಗೂ ಸರಾಗವಾಗಿ ನಡೆಯುತ್ತಿದ್ದು, ನಂಬುವ ಜನರು ಮಾತ್ರ ಭಕ್ತಿಪಥದಲ್ಲಿ ನಡೆದು ಜ್ಯೋತಿ ದರ್ಶನ ಪಡೆಯುತ್ತಾರೆ.