ಉಡುಪಿ: ಇತ್ತೀಚಿನ ದಿನಗಳಲ್ಲಿ ಸರಕಾರಿ ವಿದ್ಯಾ ಸಂಸ್ಥೆಗಳು ಖಾಸಗಿ ಸಂಸ್ಥೆಗಳಿಗಿಂತಲೂ ಉತ್ತಮ ಸೌಕರ್ಯಗಳನ್ನು ಹೊಂದಿವೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿ,
ಶಾಲಾ ಮೂಲ ಸೌಕರ್ಯಗಳಿಗೆ ಸರಕಾರ ಹೆಚ್ಚಿನ ಅನುದಾನ ನೀಡಿ ಅವುಗಳ ಬಲವರ್ಧನೆಗೆ ಕ್ರಮಕೈಗೊಳ್ಳುತ್ತಿದೆ.
ಇದರಿಂದ ದಾಖಲಾತಿ, ಫಲಿತಾಂಶದಲ್ಲಿ ಸರಕಾರಿ ಸಂಸ್ಥೆಗಳು ಉತ್ತಮ ಸಾಧನೆ ಮಾಡುತ್ತಿವೆ ಎಂದರು.
ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಸ್ಥೆಯ 22 ಮಂದಿ ಬಾಲಕಿಯರನ್ನು ನಗದು ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.
ದ.ಕ. ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ, ಪ್ರಾಂಶುಪಾಲ ರುದ್ರೇಗೌಡ ಎಸ್., ನಿವೃತ್ತ ಪ್ರಾಂಶುಪಾಲೆ ತಾರಾದೇವಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿದರು. ಭಾಷಾ ಶಿಕ್ಷಕ ರಾಮಕೃಷ್ಣ ನಾಯಕ್ ಬಿ. ನಿರೂಪಿಸಿ, ಸಹಶಿಕ್ಷಕಿ ಮನೋರಮಾ ವಂದಿಸಿದರು.