ಶಿವಮೊಗ್ಗ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಅನುಮಾನಾಸ್ಪದ ಬಾಕ್ಸ್ ಪತ್ತೆಯಾದ ವಿಚಾರಕ್ಕೆ ಮೇಜರ್ ಟ್ವಿಸ್ಟ್ ದೊರೆತಿದ್ದು, ಇಬ್ಬರು ಖದೀಮರು ವ್ಯಕ್ತಿಯೊಬ್ಬರಿಗೆ ಹಣ ಕೊಡಿಸುತ್ತೇವೆಂದು ನಂಬಿಸಿ ಮಾಡಿದ ಕೃತ್ಯ ಇದೆಂದು ತಿಳಿದು ಬಂದಿದೆ.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊನ್ನೆ ದಿನ ರೈಲ್ವೆ ನಿಲ್ದಾಣದಲ್ಲಿ ಎರಡು ಬಾಕ್ಸ್ ಸಿಕ್ಕಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ಆಗಿದೆ. ಘಟನೆಗೆ ಸಂಬಂಧಿಸಿ ಜಬಿವುಲ್ಲ ಹಾಗೂ ಬಾಬಾ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರು ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುತ್ತೇವೆಂದು ನಂಬಿಸುತ್ತಿದ್ದರು ಎಂದರು.
ಜಬಿವುಲ್ಲಾ ಮತ್ತು ಬಾಬಾ ಗೋವಾದ ರಾಜೇಶ್ ಜಾಧವ್ ಮತ್ತು ತಿಪಟೂರಿನ ಗಿರೀಶ್ ಎಂಬವರಿಗೆ ದುಡ್ಡು ಕೊಡಿಸುವುದಾಗಿ ನಂಬಿಸಿದ್ದರು. ವಂಚಿತರಿಂದ ಬ್ಲಾಕ್ ಚೆಕ್ ಗಳನ್ನು ಸಹ ಪಡೆದುಕೊಂಡಿದ್ದ ಆರೋಪಿಗಳು ಒಂದೊಂದು ಪೆಟ್ಟಿಗೆಯಲ್ಲಿ ಒಂದೊಂದು ಕೋಟಿ ಹಣ ಇರಿಸಿದ್ದಾಗಿ ನಂಬಿಸಿದ್ದರು. ಗೋವಾಕ್ಕೆ ನಾವು ಬರಲು ಕಷ್ಟವಾಗುತ್ತದೆ, ನೀವೇ ಶಿವಮೊಗ್ಗಕ್ಕೆ ಬನ್ನಿ ಎಂದು ರಾಜೇಶ್ ಜಾದವ್ ನನ್ನು ಕರೆಸಿದ್ದಾರೆ. ಗೀರಿಶ್ ಹಾಗೂ ರಾಜೇಶ್ ಜಾದವ್ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬರುವುದು ತಡವಾಗಿದಕ್ಕೆ ಬಾಕ್ಸ್ ಇಟ್ಟು ಹೋಗಿದ್ದಾರೆ.
ಸ್ಟೀಲ್ ಬಾಕ್ಸ್ ನಲ್ಲಿ ಉಪ್ಪು ಹಾಕಿಟ್ಟು ಎರಡು ಕೋಟಿ ಹಣ ಇದೆ ಎಂದು ನಂಬಿಸಿದ್ದರು. ಗೋಣಿ ಚೀಲವನ್ನು ಮುಳುಬಾಗಿಲಿನಲ್ಲಿ ತೆಗೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಾಬಾ ಎ1 ಆರೋಪಿ ಆಗಿದ್ದಾನೆ. 2021ರಲ್ಲಿ ತಿಪಟೂರಿನಲ್ಲಿ ಡಾಕ್ಟರ್ ಒಬ್ಬರಿಗೆ ಇದೆ ರೀತಿ ಮೋಸ ಮಾಡಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದರು.