Advertisement

ಸಾಕ್ಷಿ ನುಡಿದ ಮಕ್ಕಳು: ಆಕಸ್ಮಿಕ ಸಾವು ಎಂದುಕೊಂಡಿದ್ದ ಪ್ರಕರಣಕ್ಕೆ ಮಹತ್ವದ ತಿರುವು

06:52 PM Jun 14, 2020 | keerthan |

ಚಾಮರಾಜನಗರ: ಆಕಸ್ಮಿಕ ಸಾವು ಎಂದು ಬಿಂಬಿಸಲಾಗಿದ್ದ ಪ್ರಕರಣದ ತನಿಖೆ ನಡೆಸಿದಾಗ ಅದು ಕೊಲೆ ಎಂಬುದು ಬೆಳಕಿಗೆ ಬಂದ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಕೊಲೆಗೀಡಾದ ಮಹಿಳೆಯ ಮಕ್ಕಳು ನೀಡಿದ ಮಾಹಿತಿಯಿಂದ ಕೊಲೆ ಬಯಲಾಗಿದ್ದು, ಮೃತಳ ಪತಿಯೇ ಆರೋಪಿಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಶಾಮೀಲಾದ ಇನ್ನೂ ಎಂಟು ಮಂದಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ.

ತಾಲೂಕಿನ ನಾಗವಳ್ಳಿ ಗ್ರಾಮದ ಅಬ್ದುಲ್ ಹಬೀಬ್ ಬಂಧಿತ ಆರೋಪಿ. ಈತನ ಪತ್ನಿ ಅಜ್ರಾ ಬಾನು (34) ಕಳೆದ ಏ. 20 ರಂದು ಬಾವಿಗೆ ಬಿದ್ದು ಮೃತಪಟ್ಟಿದ್ದರು. ಆಕೆ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು  ತಿಳಿಸಿ ಪೊಲೀಸರಿಗೂ ಮಾಹಿತಿ ನೀಡದೇ ಅಂದೇ ಆಕೆಯ ಅಂತ್ಯಕ್ರಿಯೆ ನಡೆಸಿದ್ದರು.

ನಂತರ ಮೃತಳ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಾಯಿಯ ತಂದೆಯ ಮನೆಗೆ ಬಂದು ತಾತನ ಬಳಿ, ಅಪ್ಪ ಮತ್ತು ಆತನ ಮನೆಯವರು ಸೇರಿ ಅಮ್ಮನನ್ನು ಕೊಲೆ ಮಾಡಿ, ಶವವನ್ನು ಬಾವಿಗೆ ಎಸೆದರು ಎಂದು ತಿಳಿಸಿದ್ದರು. ಇದನ್ನು ತಿಳಿದ ಮೃತಳ ತಂದೆ ನಸ್ರುಲ್ಲಾ ಖಾನ್ ಜೂನ್ 2 ರಂದು ಪೂರ್ವ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಪತ್ನಿ ಅಜ್ರಾ ಬಾನು ಜೊತೆ ಗಂಡ ಹಬೀಬ್ ಪದೇ ಪದೇ ಜಗಳವಾಡುತ್ತಿದ್ದ ಮತ್ತು ಗಂಡನ ಮನೆಯವರು ಸಹ ಕಿರುಕುಳ ನೀಡುತ್ತಿದ್ದರು ಎಂಬುದು ತಿಳಿದುಬಂದಿತು. ಮಕ್ಕಳ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಿ, ಕೊಲೆ ಪ್ರಕರಣದ ಆರೋಪಿ ಪತಿ ಅಬ್ದುಲ್ ಹಬೀಬ್ ಅವರನ್ನು ಶುಕ್ರವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅಲ್ಲದೇ ಉಳಿದ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ತಿಳಿಸಿದರು.

Advertisement

ಹೂಳಲಾಗಿದ್ದ ಅಜ್ರಾ ಬಾನು ಅವರ ಶವವನ್ನು ತೆಗೆಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬರಬೇಕಾಗಿದೆ ಎಂದು ಅವರು ಹೇಳಿದರು.

ಘಟನೆ ನಡೆದಿದ್ದು ಹೇಗೆ?

ಮೃತ ಅಜ್ರಾ ಬಾನು ತಮ್ಮ ಮನೆಯವರಿಗೆ ಮಾಟ ಮಾಡಿಸಿದ್ದಾಳೆ ಎಂದು ಗಂಡ ಹಬೀಬ್ ಹಾಗೂ ಆತನ ಅಣ್ಣ, ತಂಗಿ, ಅಕ್ಕ ಭಾವಿಸಿದ್ದರು. ಹೀಗಾಗಿ ಈಕೆಯನ್ನು ಮುಗಿಸಬೇಕೆಂದು ಅವರು ಮಾತನಾಡಿಕೊಂಡಿದ್ದರು.

ಕೊಲೆ ನಡೆದ ದಿನ ಏ. 20ರಂದು ಗಂಡ ಹಬೀಬ್ ಅಜ್ರಾಳನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ಹಬೀಬ್‌ನ ಅಣ್ಣ, ತಮ್ಮಂದಿರು ಬಂದಿದ್ದರು. ಆಕೆಯನ್ನು ದಿಂಬಿನಲ್ಲಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನಂತರ ಶವವನ್ನು ತೋಟದಲ್ಲಿದ್ದ ಬಾವಿಗೆ ಎಸೆದಿದ್ದಾರೆ. ಅಂದೇ ಅಂತ್ಯಕ್ರಿಯೆ ನಡೆಸಿದ್ದಾರೆ.

ಅಜ್ರಾಳ 3 ಮತ್ತು 5 ವರ್ಷದ ಮಕ್ಕಳು ಘಟನೆಯನ್ನು ನೋಡಿ, ನಂತರ ತಮ್ಮ ತಾತನಿಗೆ ತಿಳಿಸಿವೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಮೊಬೈಲ್ ಕರೆಗಳ ವಿವರವನ್ನು ಸಂಗ್ರಹಿಸಿದಾಗ ಹಬೀಬ್‌ನ ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರು ಈಕೆಯನ್ನು ಕೊಲೆ ಮಾಡಬೇಕೆಂದು ಮಾತನಾಡಿಕೊಂಡಿದ್ದು ದಾಖಲಾಗಿದೆ. ನಂತರ ಆರೋಪಿಯನ್ನು ಬಂಧಿಸಿದ್ದಾರೆ.

ಗ್ರಾಮಾಂತರ ಠಾಣೆಯ ಈ ಹಿಂದಿನ ಸರ್ಕಲ್ ಇನ್‌ಸ್ಪೆಕ್ಟರ್ ಮಂಜು, ಪೂರ್ವ ಠಾಣೆಯ ಹಿಂದಿನ ಎಸ್‌ಐ ಸುನೀಲ್ ಪ್ರಕರಣದ ತನಿಖೆ ನಡೆಸಿದ್ದರು. ಪ್ರಸ್ತುತ ಈಗಿನ ಸರ್ಕಲ್ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ, ಎಸ್‌ಐ ತಾಜುದ್ದೀನ್ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next