ನವದೆಹಲಿ : ದೇಶವನ್ನೇ ಕುತೂಹಲಗಳ ಸಾಗರಕ್ಕೆ ಕೊಂಡೊಯ್ದಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ನಿನ್ನೆ (ಭಾನುವಾರ ಮೇ 2) ಹೊರ ಬಿದ್ದಿದೆ. ಕೌತುಕದಿಂದ ಕಾದು ಕುಳಿತಿದ್ದ ರಾಜಕೀಯ ಧುರೀಣರ ಲೆಕ್ಕಾಚಾರವೇ ಉಲ್ಟಾ ಆಗುವಂತೆ ಫಲಿತಾಂಶ ಹೊರ ಬಿದ್ದಿದೆ. ಇನ್ನು ಕೆಲವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ತಾರೆ ಅಂದು ಕೊಂಡಿದ್ರು. ಆದ್ರೆ ಅವರಿಗೂ ನಿರಾಶೆಯಾಗಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೆರಿ ಮತ್ತು ಅಸ್ಸಾಂ ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆದಿದ್ದು, ನಿನ್ನೆ ಅದರ ಫಲಿತಾಂಶ ಬಂದಿದೆ. ಪ್ರಮುಖವಾಗಿ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆದ್ದೇ ಗೆಲ್ತಾರೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಅವರ ಪಕ್ಷ ಟಿಎಂಸಿ ಭರ್ಜರಿ ಗೆಲುವು ದಾಖಲಿಸಿತಾದ್ರೂ ಸ್ವತಃ ಮಮತಾ ಬ್ಯಾನರ್ಜಿ ಸೋತಿರುವುದು ಅಚ್ಚರಿ ಮೂಡಿಸಿದೆ.
ಮತ್ತೊಂದು ಕಡೆ ಕರ್ನಾಟಕ ಸಿಂಗಂ ಎಂದು ಖ್ಯಾತಿ ಗಳಿಸಿದ್ದ ಅಣ್ಣಾಮಲೈ ಬಿಜೆಪಿಯಿಂದ ಚುನಾವಣೆ ಎದುರಿಸಿದ್ರು. ಚುನಾವಣೆಯಲ್ಲಿ ಸೋಲಿನ ಶಾಕ್ ಗೆ ಒಳಗಾಗಿದ್ದಾರೆ.
ತಮಿಳುನಾಡಿನಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸದಿಂದ ಕಣಕ್ಕಿಳಿದಿದ್ದ ಹಿರಿಯ ನಟ ಕಮಲ್ ಹಾಸನ್ ಕೂಡ ತಮ್ಮ ಮೊದಲ ಪ್ರಯತ್ನದಲ್ಲಿ ಸೋತಿದ್ದಾರೆ. ಇಷ್ಟೇ ಅಲ್ಲದೆ ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಕೂಡ ಸೋತಿದ್ದಾರೆ.
ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಗಳಿಸಿದ್ದ ಕೇರಳದ ಶ್ರೀಧರನ್ ಕೂಡ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದ ನಟಿ ಖುಷ್ಬೂ ಕಮಲವನ್ನು ಅರಳಿಸುವಲ್ಲಿ ವಿಫಲರಾಗಿದ್ದಾರೆ.