Advertisement

FDI ನೀತಿಯಲ್ಲಿ ಮಹತ್ವದ ಸುಧಾರಣೆ; ವಿದೇಶಿ ಹೂಡಿಕೆಗೆ ಅನುಮತಿ

06:00 AM Jan 11, 2018 | Harsha Rao |

ಹೊಸದಿಲ್ಲಿ: ಬಜೆಟ್‌ ಮಂಡನೆಗೂ ಮುನ್ನವೇ ಕೇಂದ್ರ ಸರಕಾರವು ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ಡಿಐ)ಯಲ್ಲಿ ಮಹತ್ವದ ಸುಧಾರಣಾ ಕ್ರಮಗಳನ್ನು ಘೋಷಿಸಿದೆ. ಆಟೋಮ್ಯಾಟಿಕ್‌ ರೂಟ್‌ನಡಿ ಬರುವ ಸಿಂಗಲ್‌ ಬ್ರ್ಯಾಂಡ್‌ ಚಿಲ್ಲರೆ ವಹಿವಾಟಿನಲ್ಲಿ ಶೇ.100 ರಷ್ಟು ಎಫ್ಡಿಐಗೆ ಅವಕಾಶ ಸೇರಿದಂತೆ ನಿರ್ಮಾಣ, ವೈದ್ಯಕೀಯ ಉಪಕರಣಗಳು ಮತ್ತು ವಿದ್ಯುತ್‌ ವಿನಿಮಯ ಕ್ಷೇತ್ರದಲ್ಲಿ ಹೂಡಿಕೆ ನಿಯಮಗಳನ್ನು ಸರಳಗೊಳಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿದೆ. 

Advertisement

ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ಇಂಡಿಯಾದಲ್ಲಿ ಶೇ.49ರಷ್ಟು ಹೂಡಿಕೆ ಮಾಡಲು ವಿದೇಶಿ ವೈಮಾನಿಕ ಕಂಪೆನಿಗಳಿಗೆ ಅವಕಾಶ ಕಲ್ಪಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. 2016ರ ಬಳಿಕ ಎನ್‌ಡಿಎ ಸರಕಾರ ಕೈಗೊಂಡ ಎರಡನೇ ಅತಿದೊಡ್ಡ ಉದಾರೀಕರಣ ನೀತಿ ಇದು ಎಂದು ಬಣ್ಣಿಸಲಾಗಿದೆ. ದೇಶದಲ್ಲಿ ಉದ್ದಿಮೆ ಕೈಗೊಳ್ಳಲು ಸುಲಭವಾಗುವಂತೆ ಮಾಡುವುದು ಹಾಗೂ ಆ ಮೂಲಕ ಹೂಡಿಕೆಗೆ ಉತ್ತೇಜನ, ಆದಾಯ ಮತ್ತು ಉದ್ಯೋಗ ಸೃಷ್ಟಿಯೇ ಇದರ ಉದ್ದೇಶ ಎಂದು ಸರಕಾರ ಹೇಳಿದೆ.

ಶೇ.100 ಎಫ್ಡಿಐ: ಕೇಂದ್ರ ಸಂಪುಟ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಚಿಲ್ಲರೆ ವಹಿವಾಟಿನಲ್ಲಿ ಶೇ.100 ಎಫ್ಡಿಐ ಪ್ರಮುಖವಾದದ್ದು. ಇಲ್ಲಿ ಒಂದೇ ಬ್ರ್ಯಾಂಡ್‌ ಹೊಂದಿರುವ ಉತ್ಪನ್ನಗಳ ಚಿಲ್ಲರೆ ವ್ಯಾಪಾರಕ್ಕೆ ಆಟೋಮ್ಯಾಟಿಕ್‌ ರೂಟ್‌ನಡಿ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆಯೂ ಈ ಕ್ಷೇತ್ರದಲ್ಲಿ ಶೇ.100 ಎಫ್ಡಿಐಗೆ ಅವಕಾಶವಿತ್ತಾದರೂ, ಅದಕ್ಕೆ ಕಂಪೆನಿಗಳು ಸರಕಾರದ ಪೂರ್ವಾನುಮತಿ ಪಡೆಯಬೇಕಾಗಿತ್ತು. ಆದರೆ, ಈಗ ಅಟೋಮ್ಯಾಟಿಕ್‌ ರೂಟ್‌ ಮೂಲಕ ಅವಕಾಶ ನೀಡಿರುವ ಕಾರಣ ಸರಕಾರದ ಅನುಮತಿ ಪಡೆಯದೇ ಇಲ್ಲಿ ಹೂಡಿಕೆ ಮಾಡಬಹುದಾಗಿದೆ.

ಅಟೋಮ್ಯಾಟಿಕ್‌ ರೂಟ್‌ ಅಂದ್ರೇನು?
ಆಟೋಮ್ಯಾಟಿಕ್‌ ವಿಧದಲ್ಲಿ ಹೆಚ್ಚಿನ ನಿಬಂಧನೆಗಳು ಇರುವುದಿಲ್ಲ. ಇದರಲ್ಲಿ, ವಿದೇಶಿ ಹೂಡಿಕೆದಾರರು ಅಥವಾ ಭಾರತದ ಕಂಪನಿ ಇಲ್ಲಿ ಹೂಡಿಕೆ ಮಾಡಲು ಆರ್‌ಬಿಐ ಅಥವಾ ಸರಕಾರದ ಅನುಮತಿ ಪಡೆಯಬೇಕಾಗಿಲ್ಲ. ಆದರೆ, ಸರಕಾರದ ಒಪ್ಪಿಗೆಯ ವಿಧದಲ್ಲಿ, ಇಲ್ಲಿ ಬಂಡವಾಳ ಹೂಡಬೇಕೆಂದರೆ, ವಿದೇಶಿ ಹೂಡಿಕೆದಾರರು ಸರಕಾರ ದಿಂದ ಪೂರ್ವಾನುಮತಿ ಪಡೆಯಬೇಕು.

ವ್ಯಾಪಾರಿಗಳು ಬೀದಿಗೆ ಬರುವುದು ಖಚಿತ: ಸಿಎಐಟಿ
ಸಿಂಗಲ್‌ ಬ್ರ್ಯಾಂಡ್‌ ಚಿಲ್ಲರೆ ವ್ಯಾಪಾರದಲ್ಲಿ ಶೇ.100 ಎಫ್ಡಿಐಗೆ ಅವಕಾಶ ಕಲ್ಪಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಖಂಡಿಸಿದೆ. ಈ ನಿರ್ಧಾರದಿಂದಾಗಿ ಬಹುರಾಷ್ಟ್ರೀಯ ಕಂಪನಿಗಳು ಸುಲಭವಾಗಿ ನಮ್ಮ ದೇಶಕ್ಕೆ ಬಂದು ಚಿಲ್ಲರೆ ವಹಿವಾಟು ಮಾಡಲು ಸಾಧ್ಯವಾಗುತ್ತದೆ. ಇದು ಸಣ್ಣ ವ್ಯಾಪಾರಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ವ್ಯಾಪಾರಿಗಳ ಕುಟುಂಬ ಬೀದಿಗೆ ಬರಬೇಕಾಗುತ್ತದೆ ಎಂದು ಒಕ್ಕೂಟ ಹೇಳಿದೆ. ಜತೆಗೆ, ಇದು ಬಿಜೆಪಿ ನೀಡಿದ್ದ ಚುನಾವಣಾ ಆಶ್ವಾಸನೆಯ ಉಲ್ಲಂಘನೆ ಎಂದೂ ಹೇಳಿದೆ.

Advertisement

ಸಿಂಗಲ್‌ ಬ್ರ್ಯಾಂಡ್‌ ಮತ್ತು ಮಲ್ಟಿ ಬ್ರ್ಯಾಂಡ್‌ ರಿಟೇಲ್‌?
ಒಂದೇ ಬ್ರ್ಯಾಂಡ್‌ನ‌ಲ್ಲಿ ಸರಕುಗಳನ್ನು ಗ್ರಾಹಕನಿಗಷ್ಟೇ ಮಾರಾಟ ಮಾಡುವಂಥದ್ದನ್ನು ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ ಎನ್ನುತ್ತಾರೆ. ಇಲ್ಲಿ ಸರಕುಗಳನ್ನು ಗ್ರಾಹಕನಿಗೆ ಮಾರಲಾಗುತ್ತದೆಯೇ ವಿನಾ ಇತರೆ ಉದ್ದಿಮೆಗಳು, ಕಂಪನಿಗಳಿಗಿಲ್ಲ. ಉದಾ- ನೈಕ್‌ ಕಂಪನಿಯು ಭಾರತದಲ್ಲಿ ಪ್ರತ್ಯೆಕ ಮಳಿಗೆ ತೆರೆದು ತನ್ನ ಉತ್ಪನ್ನಗಳನ್ನು ತನ್ನದೇ ಸಿಂಗಲ್‌ ಬ್ರ್ಯಾಂಡ್‌ ಮೂಲಕ ಮಾರುತ್ತದೆ.

ಮಲ್ಟಿ ಬ್ರ್ಯಾಂಡ್‌ ರಿಟೇಲ್‌ ಎಂದರೆ ಗ್ರಾಹಕರಿಗೆ ಬೇರೆ ಬೇರೆ ಬ್ರ್ಯಾಂಡ್‌ನ‌ ಉತ್ಪನ್ನಗಳನ್ನು ಮಾರಾಟ ಮಾಡುವುದು. ಉದಾ- ವಾಲ್‌ಮಾರ್ಟ್‌. ಈ ಸಂಸ್ಥೆಯು ವಿವಿಧ ಬ್ರ್ಯಾಂಡ್‌ಗಳ ಸರಕುಗಳನ್ನು ಸಂಗ್ರಹಿಸಿ, ಮಾರಾಟ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next