Advertisement

ಕ್ರೆಡಿಟ್‌ಗೆ ಉಗ್ರರ ಫೈಟ್‌

11:17 PM Sep 15, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದ ಗದ್ದುಗೆ ಏರಿರುವ ಉಗ್ರ ತಾಲಿಬಾನಿಗಳ ನಡುವೆಯೇ ಈಗ ಕಚ್ಚಾಟ ಉಲ್ಬಣಿಸಿದೆ.

Advertisement

ಹೌದು! ಅಮೆರಿಕವನ್ನು ಹೊರಗಟ್ಟಿದ್ದು, ಕಾಬೂಲನ್ನು ಕೈವಶ ಮಾಡಿಕೊಂಡಿರುವ ಕ್ರೆಡಿಟ್‌ ಯಾರಿಗೆ ಸಲ್ಲಬೇಕು ಎನ್ನುವ ವಿಚಾರ ನೂತನ ಆಡಳಿತದ ಎರಡು ಬಣಗಳ ನಡುವೆ ವಾಗ್ಯುದ್ಧಕ್ಕೆ ಎಡೆಮಾಡಿಕೊಟ್ಟಿದೆ.

ಎರಡೂ ಬಣಗಳ ಬೆಂಬಲಿಗರು ಕಾಬೂಲ್‌ನ ಪ್ರಸಿಡೆನ್ಷಿಯಲ್‌ ಪ್ಯಾಲೇಸ್‌ನಲ್ಲಿ ಬಹಿರಂಗವಾಗಿ ಜಗಳವಾಡಿರುವ ಬಗ್ಗೆ ಬಿಬಿಸಿ ವರದಿ ಬಿತ್ತರಿಸಿದೆ. ಆದರೆ ತಾಲಿಬಾನ್‌ ಮಾತ್ರ “ಇದೆಲ್ಲ ಪಾಶ್ಚಿಮಾತ್ಯ ಮಾಧ್ಯಮಗಳ ಕಟ್ಟುಕತೆ. ನಾವು ಒಗ್ಗಟ್ಟಾಗಿದ್ದೇವೆ’ ಎಂದು ತೇಪೆಹಚ್ಚಿದೆ.

ಉಗ್ರರ ನಡುವೆ ಬಿರುಕು: ಅಫ್ಘಾನ್‌ ನೆಲವನ್ನು “ಇಸ್ಲಾಮಿಕ್‌ ಎಮಿರೇಟ್‌’ ಎಂದು ಘೋಷಿಸಿದ ಒಂದೇ ವಾರದಲ್ಲಿ ತಾಲಿಬಾನಿಗಳು ಈ ರಂಪಾಟ ಸೃಷ್ಟಿಸಿದ್ದು, ಸರಕಾರದ ಸ್ಥಿರತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಉಪ ಪ್ರಧಾನಿ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ಮತ್ತು ನಿರಾಶ್ರಿತರ ಸಚಿವ ಖಲೀಲ್‌ ಉರ್‌- ರಹ್ಮಾನ್‌ ಹಕ್ಕಾನಿ ಬೆಂಬಲಿಗರು ಕಟುಶಬ್ದಗಳಲ್ಲಿ ಬಯ್ದಾಡಿಕೊಂಡಿದ್ದು, ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಜಗಳದಲ್ಲಿ ನೇರವಾಗಿ ಪಾಲ್ಗೊಂಡಿದ್ದ,

Advertisement

ಕತಾರ್‌ನ ಹಿರಿಯ ತಾಲಿಬಾನ್‌ ಮುಖಂಡ ಮತ್ತು ಇನ್ನೋರ್ವ ಸಚಿವ “ಇಂಥ ಬೆಳವಣಿಗೆ ನಡೆದಿದ್ದು ನಿಜ’ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದೂ ವರದಿ  ದೃಢೀಕರಿಸಿದೆ.

ಬರಾದರ್‌ ಬುಸ್‌ ಬುಸ್‌: ಅಮೆರಿಕ ಸೇನೆಯನ್ನು ಓಡಿಸಿ, ಕಾಬೂಲ್‌ ಕುರ್ಚಿ ಏರುವ ಕನಸು ಕಂಡಿದ್ದ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ತನಗೆ  ಸಿಕ್ಕಿರುವ ಉಪ ಪ್ರಧಾನಿ ಪಟ್ಟದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

“ಅಮೆರಿಕ ಸೇನೆ ವಾಪಸಾತಿ ಕುರಿತ ದೋಹಾ ಒಪ್ಪಂದಕ್ಕೆ ತಾಲಿಬಾನ್‌ ಪರವಾಗಿ ಸಹಿ ಹಾಕಿದ್ದು, 2020ರಲ್ಲಿ ಟ್ರಂಪ್‌ ಜತೆ ಮೊದಲ ಮಾತುಕತೆ ನಡೆಸಿದ್ದು ಬರಾದರ್‌. ಹೀಗಿದ್ದರೂ, ಅವರಿಗೆ ತೃಪ್ತಿದಾಯಕ ಸ್ಥಾನ ಸಿಗಲಿಲ್ಲ’ ಎನ್ನುವುದು ಬರಾದರ್‌ ಬೆಂಬಲಿಗರ ಆಕ್ರೋಶ. ಇದು ಹಂಗಾಮಿ ಪ್ರಧಾನಿ ಆಗಿರುವ ಹಸನ್‌ ಅಖುಂದ್‌ನನ್ನೂ ಪರೋಕ್ಷವಾಗಿ ಕೆರಳಿಸಿದೆ ಎಂದು ವರದಿ ಹೇಳಿದೆ.

ಇನ್ನೊಂದೇ ವರ್ಷದಲ್ಲಿ ಅಮೆರಿಕದ ಮೇಲೆ ದಾಳಿ! :

ಅಲ್‌-ಕಾಯಿದಾ ಉಗ್ರ ಸಂಘಟನೆ ಇನ್ನೊಂದು ವರ್ಷದೊಳಗೆ ಅಮೆರಿಕ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಯುಎಸ್‌ ಗುಪ್ತಚರ ಸಂಸ್ಥೆ ಎಚ್ಚರಿಸಿರುವ ಬಗ್ಗೆ “ಬ್ಲೂಮ್‌ಬರ್ಗ್‌’ ವರದಿ ಮಾಡಿದೆ. ಅಲ್‌-ಕಾಯಿದಾ  ಮುಖಂಡ ಅಯಾ¾ನ್‌ ಅಲ್‌- ಝವಾಹಿರಿ ಹತ್ಯೆಯ ವದಂತಿಯನ್ನು ಪುಷ್ಟೀಕರಿಸುವ ಉಗ್ರರ ವೀಡಿಯೋ ಅಮೆರಿಕ ಮೂಲದ “ಸೈಟ್‌’ ಗುಪ್ತಚರ ಸಂಸ್ಥೆಯ ಕೈಸೇರಿದೆ.

ವೀಡಿಯೊಧೀದಲ್ಲೇನಿದೆ?: ಅಫ್ಘಾನ್‌ ವಶ ಹೊರತು­ಪಡಿಸಿ, ಝವಾಹಿರಿ ಹಲವು ವಿಚಾರಗಳ ಬಗ್ಗೆ ಸುದೀರ್ಘ‌ ಮಾತನಾಡಿದ್ದು, ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಯೋಜನೆಯನ್ನೂ ಬಹಿರಂಗಪಡಿಸಿದ್ದಾನೆ. ಅಮೆರಿಕವಲ್ಲದೆ, ರಷ್ಯಾದ ಮಿಲಿಟರಿ ನೆಲೆಗಳ ಮೇಲೂ ದಾಳಿ ನಡೆಸುವುದಾಗಿ ಹೇಳಿರುವುದು ಬಹಿರಂಗವಾಗಿದೆ. ಅಲ್‌-ಝವಾಹಿರಿ ಸೇರಿದಂತೆ ಬಹುತೇಕ ಅಲ್‌-ಕಾಯಿದಾ ಮುಖಂಡರು ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದ ಗಡಿವಲಯದೊಳಗೆ ಅಡಗಿರುವ ಬಗ್ಗೆ ವಿಶ್ವಸಂಸ್ಥೆ ಆರೋಪಿಸುತ್ತಲೇ ಬಂದಿತ್ತು. ಆದರೆ ಅಮೆರಿಕ ಮಾತ್ರ ಝವಾಹಿರಿ ಹತ್ಯೆಯಾಗಿರಬಹುದು ಎಂದು ನಂಬಿ ಕುಳಿತಿತ್ತು.

ಭಾರತೀಯನ ಅಪಹರಣ :

ಭಾರತೀಯ ಮೂಲದ, 50 ವರ್ಷದ ಅಫ್ಘಾನ್‌ ಪ್ರಜೆಯೊಬ್ಬರನ್ನು ಐವರು ತಾಲಿಬಾನ್‌ ಉಗ್ರರು ಅಪಹರಿಸಿದ್ದು, ಇವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತೆ ಅಕಾಲಿದಳ ಮುಖಂಡ ಮಂಜಿಂದರ್‌ ಸಿರ್ಸಾ, ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. “50 ವರ್ಷದ ಹಿಂದೂ ವ್ಯಕ್ತಿ ಬಾನ್ಸುರಿ ಲಾಲ್‌ ಉಗ್ರಾಣಕ್ಕೆ ತೆರಳುತ್ತಿದ್ದ ವೇಳೆ ಉಗ್ರರು ಅಪಹರಿಸಿದ್ದಾರೆ. ಇವರ ಕುಟುಂಬ ಸಂಕಷ್ಟದಲ್ಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಕೇಂದ್ರ ಸರಕಾರ ಕೂಡ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next