Advertisement
ಇದು ಮೇ| ವಿಭೂತಿ ಶಂಕರ್ ದೌಂಡಿಯಾಲ್ ಅವರ ಪತ್ನಿ ನಿಕಿತಾ ಕೌಲ್ ಅವರ ಸಾಹಸಗಾಥೆ.
ದೇಶ ಸೇವೆಯ ಮೂಲಕವೇ ತಮ್ಮ ಪತಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯ ಎಂಬ ದೃಢ ನಿಶ್ಚಯದೊಂದಿಗೆ ಶಾರ್ಟ್ ಸರ್ವೀಸ್ ಕಮಿಷನ್ (ಎಸ್‌ಎಸ್‌ಸಿ) ಪರೀಕ್ಷೆಗಳಿಗೆ ತಯಾರಿ ನಡೆಸಿದ 28 ವರ್ಷದ ನಿಕಿತಾ, 2020ರಲ್ಲಿ ಸೇನಾ ನೇಮಕಾತಿಯ ಸಂದರ್ಶನವನ್ನು ಎದುರಿಸಿದ್ದರು. ಎರಡೂ ಹಂತಗಳನ್ನು ಪೂರೈಸಿದ ಅನಂತರ ಮೇ 26ರಂದು ಸೇನಾ ತರಬೇತಿಗೆ ದಾಖಲಾದರು. ಭಾರತೀಯ ಸೇನೆಯ ನಾದರ್ನ್ ಕಮಾಂಡರ್ ಲೆ|ಜ| ವೈ.ಕೆ. ಜೋಷಿಯವರು ಮೇ 29ರಂದು ನಿಕಿತಾ ಅವರನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.
Related Articles
ಪತಿಯ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಬೀಳ್ಕೊಡುವ ಮುನ್ನವೇ ನಿಕಿತಾ ಸೇನೆ ಸೇರುವ ಪ್ರತಿಜ್ಞೆ ಮಾಡಿದ್ದರು. ಪತಿ ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತ, “ನೀವು ಯಾವಾಗಲೂ ನನ್ನನ್ನು ತುಂಬಾ ಪ್ರೀತಿಸುವುದಾಗಿ ಹೇಳುತ್ತಿದ್ದಿರಿ. ನಿಜ ಹೇಳಬೇಕೆಂದರೆ, ನೀವು ನನಗಿಂತ ಹೆಚ್ಚು ದೇಶವನ್ನು ಪ್ರೀತಿಸಿದಿರಿ. ಇಂದು ದೇಶಕ್ಕಾಗಿ ನೀವು ಬಲಿದಾನಗೈದಿದ್ದೀರಿ. ನಿಮ್ಮಂಥ ಶೂರ ಯೋಧನನ್ನು ಪತಿಯಾಗಿ ಪಡೆದ ನಾನು ಧನ್ಯ. ನಿಮ್ಮ ದೇಶಸೇವೆಯನ್ನು ಪೂರ್ಣಗೊಳಿಸುವ ಸಲುವಾಗಿ ನಾನೂ ಸೇನೆ ಸೇರುತ್ತೇನೆ’ ಎಂದಿದ್ದರು. ಆ ಪ್ರತಿಜ್ಞೆ ಯನ್ನು ನಿಕಿತಾ ನೆರವೇರಿಸಿದ್ದಾರೆ, ತಮ್ಮ ಪ್ರೀತಿಯ ಪತಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Advertisement