ನವದೆಹಲಿ: ಭಾರತದ ಭೂ ಭಾಗದೊಳಕ್ಕೆ ನುಗ್ಗುವ ಚೀನಾ ಪಡೆಗಳ ಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿ ಹಲವಾರು ಎತ್ತರದ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಘಟನೆ ನಂತರ ಪೂರ್ವ ಲಡಾಖ್ ನ ದಕ್ಷಿಣ ಪ್ಯಾಂಗಾಂಗ್ ಪ್ರದೇಶದಲ್ಲಿ ಚೀನಾದ ಯುದ್ಧ ಟ್ಯಾಂಕ್ ಗಳು ಮತ್ತು ಪದಾದಿ ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಮೂಲಕ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ 20 ಕಿಲೋ ಮೀಟರ್ ದೂರದಲ್ಲಿ ಚೀನಾ ಸೇನಾಪಡೆ ಗನ್ಸ್, ಆರ್ಟಿಲ್ಲರಿಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರುವುದಾಗಿ ಹೇಳಿದೆ. ದಕ್ಷಿಣ ಪ್ಯಾಂಗಾಂಗ್ ಪ್ರದೇಶದಲ್ಲಿ ಚೀನಾ ಪಡೆ ಯುದ್ಧ ಟ್ಯಾಂಕ್ ಗಳನ್ನು ನಿಯೋಜಿಸಿರುವುದಾಗಿ ಮೂಲಗಳು ಹೇಳಿವೆ. ಭಾರತೀಯ ಪಡೆ ಸಂಪೂರ್ಣ ಸಜ್ಜಾಗಿರುವುದನ್ನು ಗಮನಿಸಿದ ಚೀನಾ ಪಡೆ ಕೂಡಾ ಸಮರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದೆ.
ಭಾರತೀಯ ಸೇನಾಪಡೆ ಕೂಡಾ ಆಯಕಟ್ಟಿನ ಸ್ಥಳದಲ್ಲಿ ಚೀನಾ ಯುದ್ಧ ಟ್ಯಾಂಕ್ ಮತ್ತು ಚೀನಾ ಪಡೆಯನ್ನು ಎದುರಿಸುವ ನಿಟ್ಟಿನಲ್ಲಿ ಮಿಸೈಲ್ಸ್, ರಾಕೆಟ್ಸ್ ಮತ್ತು ಇತರ ಶಸ್ತ್ರಾಸ್ತ್ರವನ್ನು ಸಜ್ಜುಗೊಳಿಸಿದೆ. ಅಷ್ಟೇ ಅಲ್ಲ ಮಿಸೈಲ್ ಶಸ್ತ್ರಸಜ್ಜಿತ ಟಿ-90 ಯುದ್ಧ ಟ್ಯಾಂಕ್ ಹಾಗೂ ಪೂರ್ವ ಲಡಾಖ್ ನ ಅತೀ ಎತ್ತರದ ಪ್ರದೇಶದಲ್ಲಿ ಟಿ-72ಎಂ1 ಟ್ಯಾಂಕ್ ಅನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಬ್ಲ್ಯಾಕ್ ಟಾಪ್ ಮತ್ತು ಹೆಲ್ಮೆಟ್ ಸೇರಿದಂತೆ ಎರಡು ಪ್ರದೇಶಗಳಲ್ಲಿ ಚೀನಾ ಸೇನೆ ತನ್ನ ನಿಯಂತ್ರಣ ಸಾಧಿಸಿದೆ. ಹಲವು ಮೂಲಗಳ ಪ್ರಕಾರ ಉಭಯ ಪ್ರದೇಶಗಳಿಗೂ ದಾಳಿ ನಡೆಸಲು ಅನುಕೂಲವಾಗುವ ನಿಟ್ಟನಲ್ಲಿ ಭಾರತೀಯ ಸೈನಿಕರು ಎತ್ತರದ ಪ್ರದೇಶಗಳಲ್ಲಿ ಸಜ್ಜಾಗಿ ನಿಂತಿರುವುದಾಗಿ ವರದಿ ತಿಳಿಸಿದೆ. ಭಾರೀ ಪ್ರಮಾಣದಲ್ಲಿ ವೈಮಾನಿಕ ಚಟುವಟಿಕೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ. ಟಿಬೆಟ್ ನಲ್ಲಿರುವ ವಾಯು ನೆಲೆಯಲ್ಲಿ ಚೀನಾ ವೈಮಾನಿಕ ಚಟುವಟಿಕೆ ಚುರುಕುಗೊಂಡಿರುವುದಾಗಿ ವರದಿ ತಿಳಿಸಿದೆ. ಭಾರತೀಯ ವಾಯುಪಡೆ ಕೂಡಾ ಸುಖೋಯ್ 30 ಯುದ್ಧ ವಿಮಾನವನ್ನು ಗಡಿಪ್ರದೇಶಕ್ಕೆ ರವಾನಿಸಿರುವುದಾಗಿ ಮೂಲಗಳು ತಿಳಿಸಿವೆ.
ಎಲ್ ಎಸಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಆರ್ಮಿ ಚೀಫ್ ಜನರಲ್ ಮನೋಜ್ ಮುಕುಂದ್ ನರವಾಣೆ ಶುಕ್ರವಾರ (ಸೆಪ್ಟೆಂಬರ್ 04, 2020) ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು. ನಮ್ಮ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ನಾವು ಕೆಲವೊಂದು ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು.
ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನೆ: ಜನರಲ್ ಬಿಪಿನ ರಾವತ್
ಎಲ್ ಎಸಿಯಲ್ಲಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನ ಪರಿಸ್ಥಿತಿಯ ಲಾಭ ಪಡೆಯಲು ಮುಂದಾದರೆ ಭಾರೀ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಚೀಫ್ ಡಿಫೆನ್ಸ್ ಸ್ಟಾಪ್ ಜನರಲ್ ಬಿಪಿನ್ ರಾವತ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಂತಹ ಪರಿಸ್ಥಿತಿ ಉದ್ಭವಿಸಿದರೆ ಏನು ಮಾಡಬೇಕೆಂಬ ಬಗ್ಗೆ ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.