Advertisement

ಪ್ರಮುಖ ಬ್ಯಾರೇಜ್‌ಗಳು ಖಾಲಿ-ಮಹಾದಲ್ಲಿ ಮಳೆ; ಉತ್ತರದ ಒಡಲಲ್ಲಿ ಖುಷಿ!

05:54 PM Jul 03, 2023 | Team Udayavani |

ಬಾಗಲಕೋಟೆ: ಕೃಷ್ಣೆಯ ಪಾತ್ರದ ಮಹಾರಾಷ್ಟ್ರದಲ್ಲಿ ಶನಿವಾರದಿಂದ ಮಳೆ ಸುರಿಯುತ್ತಿದ್ದು, ಇತ್ತ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ಜನರು ಕೊಂಚ ನಿರಾಳರಾಗಿದ್ದಾರೆ.

Advertisement

ಹೌದು, ಮುಂಗಾರು ಮಳೆ, ಕೇವಲ ಕರ್ನಾಟಕ ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲೂ ಕೈಕೊಟ್ಟಿದೆ. ಕೃಷ್ಣೆಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಮುಂಗಾರು ಮುಂಚೆಯೇ ಮಳೆ ಸುರಿಯುತ್ತಿತ್ತು. ಇದರಿಂದ ಉತ್ತರದ ಈ ಮೂರು ಜಿಲ್ಲೆಗಳಲ್ಲಿ ಮಳೆ ಬಾರದಿದ್ದರೂ ನದಿಗೆ ಸಾಕಷ್ಟು ನೀರು ಹರಿದು ಬರುತ್ತಿತ್ತು. ಇದು, ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ
ತಾಪತ್ರಯ ಕಡಿಮೆ ಮಾಡುತ್ತಿತ್ತು. ಆದರೆ, ಈ ಬಾರಿ, ಹನಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆಯಾಗಿದೆ.

ಪ್ರಮುಖ ಬ್ಯಾರೇಜ್‌ಗಳು ಖಾಲಿ: ಜಿಲ್ಲೆಯ ಸುಮಾರು ನಾಲ್ಕು ನಗರ ಸ್ಥಳೀಯ ಸಂಸ್ಥೆಗಳು, ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ, ಕೃಷ್ಣಾ ನದಿ ಪಾತ್ರದ ಹಿಪ್ಪರಗಿ, ಚಿಕ್ಕಪಡಸಲಗಿ ಹಾಗೂ ಗಲಗಲಿ ಬ್ಯಾರೇಜ್‌ ಸಂಪೂರ್ಣ ಖಾಲಿಯಾಗಿವೆ. ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳು, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬೀಳಗಿ ಪಟ್ಟಣಕ್ಕೆ ನೀರು ಪೂರೈಸುವ ಈ ಜಲಮೂಲ ಬತ್ತಿದ್ದರಿಂದ ಹನಿ ನೀರಿಗೂ ಪರದಾಡುವ ಪರಿಸ್ಥಿತಿ. ವಾರದಲ್ಲಿ ಮಳೆ ಬಾರದಿದ್ದರೆ, ನದಿಗೆ ನೀರು ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ವಾತಾವರಣವಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ, ಮಹಾರಾಷ್ಟ್ರದಲ್ಲಿ ಶನಿವಾರದಿಂದ ಮಳೆ ಆರಂಭಗೊಂಡಿರುವುದು, ಜಿಲ್ಲೆಯಲ್ಲಿ ಖುಷಿ ತಂದಿದೆ.

ಡ್ಯಾಂ ಕೂಡ ಬರಿದು: ಬರೋಬ್ಬರಿ 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯ ಕೂಡ, ಡೆಡ್‌ ಸ್ಟೋರೇಜ್‌ ಹಂತಕ್ಕೆ ಬಂದಿದೆ. 519.60 ಮೀಟರ್‌ ಎತ್ತರದ ಜಲಾಶಯದಲ್ಲಿ ಸದ್ಯ 19.408 (507.43 ಮೀಟರ್‌) ನೀರಿದ್ದು, ಇದರಲ್ಲಿ 17 ಟಿಎಂಸಿ ಡೆಡ್‌ ಸ್ಟೋರೇಜ್‌ ಇದೆ. ಕಳೆದ 2022ರ ಇದೇ ದಿನ ಜಲಾಶಯದಲ್ಲಿ ಬರೋಬ್ಬರಿ 48.484
ಟಿಎಂಸಿ ಅಡಿ (513.15 ಮೀಟರ್‌) ನೀರಿತ್ತು. ಈಗ 1.788 ಟಿಎಂಸಿ ಮಾತ್ರ ಬಳಕೆಗೆ ಇದೆ. ಆಲಮಟ್ಟಿ ಡ್ಯಾಂಗೆ ಒಳಹರಿವು ಸದ್ಯಕ್ಕಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ 590 ಕ್ಯೂಸೆಕ್‌ ನೀರು ಕಾಲುವೆ ಮೂಲಕ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ, 3691 ಕ್ಯೂಸೆಕ್‌ ಒಳ ಹರಿವು ಇತ್ತು.

ರಾಜಾಪುರದಿಂದ 4200 ಕ್ಯೂಸೆಕ್‌: ಕೊಯ್ನಾ ಡ್ಯಾಂನಿಂದ ಕರ್ನಾಟಕದ ಕೃಷ್ಣೆಗೆ ನೀರು ಬಿಡುವಂತೆ ಹಲವು ತಿಂಗಳಿಂದ ಒತ್ತಾಯಿಸಲಾಗುತ್ತಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಕೂಡ, ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದೂ ಆಗ್ರಹಿಸಿದ್ದರು. ಅಲ್ಲಿಯ ಡ್ಯಾಂಗಳಲ್ಲಿ ಗರಿಷ್ಠ ಪ್ರಮಾಣದ ನೀರಿಲ್ಲ ಎಂಬ ಕಾರಣ ನೀಡಿ, ನೀರು ಬಿಟ್ಟಿರಲಿಲ್ಲ.

Advertisement

ಸಧ್ಯ ಶನಿವಾರ ಮಹಾರಾಷ್ಟ್ರದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಪ್ರಮುಖ ಕೊಯ್ನಾ ಜಲಾಶಯ ವ್ಯಾಪ್ತಿಯ ಕೊಯ್ನಾ ಪ್ರದೇಶದಲ್ಲಿ 73 ಎಂಎಂ, ನವಜಾ ಭಾಗದಲ್ಲಿ 130 ಎಂಎಂ ಹಾಗೂ ಕೃಷ್ಣೆಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ 66 ಎಂಎಂ ಮಳೆ ಶನಿವಾರ ಸುರಿದ ದಾಖಲೆಯಾಗಿದೆ. ಹೀಗಾಗಿ ಗಡಿ ಭಾಗದ, ರಾಜಾಪುರ ಡ್ಯಾಂನಿಂದ ಶನಿವಾರ ಸಂಜೆಯಿಂದಲೇ 4200 ಕ್ಯೂಸೆಕ್‌ ನೀರು ಹೊಡ ಬಿಡಲಾಗಿದ್ದು, ಅದು ಎರಡು ದಿನಗಳ ಬಳಿಕ ಹಿಪ್ಪರಗಿ ಬ್ಯಾರೇಜ್‌ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

ನೀರು: ಕಾಯಿಸಿ ಕುಡೀರಿ
ಜಿಲ್ಲೆಯ ಬೀಳಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಗುಳಬಾಳ ಹತ್ತಿರ ಕೃಷ್ಣಾ ನದಿಯಲ್ಲಿ ನೀರು
ಖಾಲಿಯಾಗಿದ್ದು, ಪ್ರಸ್ತುತ ನದಿಯಲ್ಲಿ ತಗ್ಗು ಪ್ರದೇಶದಲ್ಲಿ ಶೇಖರಣೆಯಾದಂತಹ ನೀರನ್ನು ಸರಬರಾಜು ಮಾಡುತ್ತಿದ್ದು, ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಪಪಂ ನಿಂದ ಸರಬರಾಜು ಮಾಡುತ್ತಿರುವ ನಳದ ನೀರನ್ನು ಕುದಿಸಿ, ಆರಿಸಿ ಕುಡಿಯಬೇಕು ಹಾಗೂ ನದಿ ಪ್ರದೇಶದಲ್ಲಿ ಸಾಕಷ್ಟು ನೀರು ಶೇಖರಣೆ ಇಲ್ಲದೇ ಇರುವುದರಿಂದ ನೀರನ್ನು ಚರಂಡಿ ಪಾಲು ಮಾಡದೆ ಸಮರ್ಪಕವಾಗಿ ಉಪಯೋಗಿಸಬೇಕು ಎಂದು ಬೀಳಗಿ ಪಪಂ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next