Advertisement

ಹಿರಿಯ ಯಕ್ಷಗಾನ ಕಲಾವಿದ ಮಜ್ಜಿಗೆಬೈಲು ಆನಂದ ಶೆಟ್ಟಿ ಇನ್ನಿಲ್ಲ

10:48 PM Jul 10, 2022 | Team Udayavani |

ಕುಂದಾಪುರ: ಬಡಗುತಿಟ್ಟಿನ ಹಿರಿಯ ವೇಷಧಾರಿಗಳಾದ ಮಜ್ಜಿಗೆಬೈಲು ಆನಂದ ಶೆಟ್ಟಿ(78) ಇಂದು (10 ಜುಲೈ ) ಯಡಾಡಿಯ ಸ್ವಗೃಹದಲ್ಲಿ ರಾತ್ರಿ ನಿಧನ ಹೊಂದಿದರು.

Advertisement

ಪರಂಪರೆಯ ಪ್ರಾತಿನಿಧಿಕ ಪುರುಷ ಮತ್ತು ಎರಡನೆ ವೇಷಧಾರಿಯಾಗಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಪೆರ್ಡೂರು, ಮಾರಣಕಟ್ಟೆ, ಸಾಲಿಗ್ರಾಮ, ಗೋಳಿಗರಡಿ ಮತ್ತು ದೀರ್ಘ ಕಾಲ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆಗೈದ ಸಜ್ಜನ ಕಲಾವಿದರಾಗಿದ್ದರು.

ಯಕ್ಷಗಾನ ಕಲಾರಂಗ ಸಹಿತ ಹಲವಾರು ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದವು. ಪತ್ನಿ, ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಆನಂದ ಶೆಟ್ಟರು ಪಾರಂಪರಿಕ ವರ್ಚಸ್ಸಿನ ಪ್ರಾತಿನಿಧಿಕರಾಗಿ ನಡುಬಡಗಿನ ವೇಷವೈವಿಧ್ಯದಲ್ಲಿ ತನ್ನದೇ ಛಾಪು ಮೂಡಿಸಿ ಸಮಕಾಲಿನ ರಂಗಭೂಮಿಗೆ ಒಗ್ಗಿಕೊಳ್ಳದೆ ಸನಾತನ ಕಲಾಸಾರವನ್ನೇ ಗಂಭೀರವಾಗಿ ಹೀರಿಕೊಂಡ ಶಿಷ್ಟ ಕಲಾವಿದರು.ಡೇರೆ ಮೇಳಗಳ ಹೊಸ ಪ್ರಸಂಗಗಳು ಯಕ್ಷಗಾನಕ್ಕೆ ಲಗ್ಗೆ ಇಟ್ಟಾಗಲೂ ತನ್ನತನದೊಂದಿಗೆ ರಾಜಿ ಮಾಡಿಕೊಳ್ಳದೆ ಮುಂದುವರಿದವರು.

ಇದನ್ನೂ ಓದಿ : ಶ್ರೀರಂಗಪಟ್ಟಣ : ಕಾರು – ಬೈಕ್ ನಡುವೆ ಭೀಕರ ಅಪಘಾತ : ಓರ್ವ ಸಾವು, ಇನ್ನೋರ್ವನ ಸ್ಥಿತಿ ಗಂಭೀರ

Advertisement

ಗತ್ತು ಗಾಂಭೀರ್ಯದ ನಡೆ ಪ್ರೌಢ‌ ಸಾಹಿತ್ಯ ಯಕ್ಷಗಾನೀಯ ಸೊಗಡು ಮೈವೆತ್ತ ಅವರ ವೇಷಗಳಲ್ಲಿ ನಡುತಿಟ್ಟಿನ ಎರಡು ಶೈಲಿಗಳನ್ನು ಗುರುತಿಸಬಹುದಾಗಿದೆ. ಕರ್ಣ, ಜಾಂಬವ, ಭೀಷ್ಮ, ವಿಭೀಷಣ ಮುಂತಾದ ಎರಡನೇ ವೇಷಗಳಲ್ಲಿ ಹಾರಾಡಿ ಶೈಲಿಯ ಛಾಪು , ಸುಧನ್ವ, ಅರ್ಜುನ, ತಾಮ್ರಧ್ವಜ, ಪುಷ್ಕಳ, ದೇವವ್ರತ ಮುಂತಾದ ಪುರುಷ ವೇಷಗಳಲ್ಲಿ ಮಟಪಾಡಿ ಶೈಲಿಯ ಕಿರುಹೆಜ್ಜೆಯನ್ನು ಗುರುತಿಸಬಹುದಾಗಿದೆ.

ಬಹುಕಾಲ ಮೊಳಹಳ್ಳಿ ಹೆರಿಯ ನಾಯ್ಕರೊಂದಿಗಿನ ಅವರ ಪುರುಷವೇಷ ಮಂದಾರ್ತಿ ಮೇಳದ ರಂಗಸ್ಥಳವನ್ನು ತುಂಬಿಸಿತ್ತು.

ಸುಮಾರು 50 ವರ್ಷ ಬಡಗುತಿಟ್ಟಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದ ಶೆಟ್ಟರು ಅರ್ಜುನ, ಪುಷ್ಕಳ, ಸುಧನ್ವ ಮುಂತಾದ ಪುರುಷವೇಷಗಳಿಗೆ ಜೀವತುಂಬಿ ತಿರುಗಾಟದ ಕೊನೆಯಲ್ಲಿ ಹಲವು ವರ್ಷ ಮಂದಾರ್ತಿ ಮೇಳದಲ್ಲಿ ಎರಡನೇ ವೇಷದಾರಿಯಾಗಿ ಬಡ್ತಿ ಹೊಂದಿ ಕರ್ಣ, ಜಾಂಬವ, ಮಾರ್ತಾಂಡತೇಜ ಮುಂತಾದ ಪ್ರಧಾನ ವೇಷಗಳಿಗೆ ನ್ಯಾಯ ಒದಗಿಸಿದ್ದರು..ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಸನ್ಮಾನಗಳು ಗಳು ಸಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next