ದುಬೈ: ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಿರುವ ನೂತನ ಹಿಂದೂ ದೇವಾಲಯವನ್ನು ದಸಾರಾ ಸಂದರ್ಭದಲ್ಲಿ ದುಬೈನಲ್ಲಿ ಉದ್ಘಾಟಿಸಲಾಗಿದೆ. ದುಬೈನ ಜೆಬೆಲ್ ಅಲಿ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ.
ಎಮಿರೇಟ್‌ನ ‘ಆರಾಧನಾ ಗ್ರಾಮ’ ಎಂದು ಕರೆಯಲ್ಪಡುವಲ್ಲಿರುವ ಈ ದೇವಾಲಯವು ಇಂದು ಯುಎಇಯಾದ್ಯಂತ ಆರಾಧಕರಿಗೆ ಔಪಚಾರಿಕವಾಗಿ ತನ್ನ ಬಾಗಿಲು ತೆರೆಯಿತು.
ಸಹಬಾಳ್ವೆ ಮತ್ತು ಸಹಿಷ್ಣುತೆ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಮತ್ತು ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಅವರು ಈ ದೇವಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ರಾಯಭಾರಿ ಸಂಜಯ್ ಸುಧೀರ್ ಅವರು ಯುಎಇಯಲ್ಲಿರುವ 3.5 ಮಿಲಿಯನ್ ಭಾರತೀಯ ವಲಸಿಗರಿಗೆ ನೀಡಿದ ಬೆಂಬಲಕ್ಕಾಗಿ ಯುಎಇ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು” ಎಂದು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಧರ್ಮ ಆಧಾರಿತ ಜನಸಂಖ್ಯಾ ಅಸಮತೋಲನವನ್ನು ನಿರ್ಲಕ್ಷಿಸುವಂತಿಲ್ಲ: ಮೋಹನ್ ಭಾಗವತ್
‘ಆರಾಧನಾ ಗ್ರಾಮ’ ಜೆಬೆಲ್ ಅಲಿಯಲ್ಲಿ ಈಗ ಏಳು ಚರ್ಚುಗಳು, ಗುರು ನಾನಕ್ ದರ್ಬಾರ್ ಸಿಖ್ ಗುರುದ್ವಾರ ಮತ್ತು ಹೊಸ ಹಿಂದೂ ದೇವಾಲಯ ಸೇರಿದಂತೆ ಒಟ್ಟು ಒಂಬತ್ತು ಧಾರ್ಮಿಕ ದೇವಾಲಯಗಳಿವೆ.
ರಾಜತಾಂತ್ರಿಕ ಮಿಷನ್ ಗಳ ಮುಖ್ಯಸ್ಥರು, ಹಲವಾರು ಧರ್ಮಗಳ ಧಾರ್ಮಿಕ ಮುಖಂಡರು, ಉದ್ಯಮಿಗಳು ಮತ್ತು ಭಾರತೀಯ ಸಮುದಾಯದ ಸದಸ್ಯರು ಸೇರಿದಂತೆ 200 ಕ್ಕೂ ಹೆಚ್ಚು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೋವಿಡ್ 19 ಸಾಂಕ್ರಾಮಿಕವು ದುಬೈಗೆ ಅಪ್ಪಳಿಸಿದ ಸ್ವಲ್ಪ ಸಮಯದ ನಂತರ, ಅಂದರೆ 2020 ರಲ್ಲಿ 70,000 ಚದರ ಅಡಿ ವಿಸ್ತೀರ್ಣದ ಈ ಹಿಂದೂ ದೇವಾಲಯ ನಿರ್ಮಿಸುವ ಯೋಜನೆಗಳನ್ನು ಘೋಷಿಸಲಾಗಿತ್ತು.
ಈ ದೇವಾಲಯವು ಸೂಕ್ಷ್ಮ ಕೆತ್ತನೆಗಳು, ಅಲಂಕೃತ ಕಂಬಗಳು, ಹಿತ್ತಾಳೆಯ ಗೋಪುರಗಳು ಮತ್ತು ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪವನ್ನು ಸಂಯೋಜನೆಯ ಲ್ಯಾಟಿಸ್ ಸ್ಕ್ರೀನ್ ಗಳನ್ನು ಒಳಗೊಂಡಿದೆ.
ದೇವಸ್ಥಾನಕ್ಕೆ ಭೇಟಿ ನೀಡಲು ಮುಂಗಡ ನೋಂದಣಿ ಅಗತ್ಯ. ಭಕ್ತರು ಆಗಮಿಸುವ ಮೊದಲು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.
ವರ್ಷಾಂತ್ಯಕ್ಕೆ ವಿವಾಹಗಳು ಸೇರಿದಂತೆ ಹಿಂದೂ ಆಚರಣೆಗಳು ಮತ್ತು ಪ್ರಾರ್ಥನೆಗಳು ನಡೆಯಬಹುದಾದ ವಿಶಾಲವಾದ ಸಮುದಾಯ ಭವನವೂ ಉದ್ಘಾಟನೆಯಾಗಲಿದೆ.