Advertisement

ಪ್ಲಾಸ್ಟಿಕ್‌ಗೆ ಪರ್ಯಾಯವಾಗಬಲ್ಲ ಮೆಕ್ಕೆಜೋಳ, ಸಬ್ಬಕ್ಕಿಯ ಕ್ಯಾರಿಬ್ಯಾಗ್‌!

12:29 AM May 27, 2024 | Team Udayavani |

ಮಹಾನಗರ: ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಪ್ರಯತ್ನಗಳು ಪೂರ್ಣ ಸಫ‌ಲವಾಗಿಲ್ಲ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲ ಲಭ್ಯವಿದ್ದರೂ ಅದು ಹೆಚ್ಚಿನವರನ್ನು ಆಕರ್ಷಿಸುತ್ತಿಲ್ಲ. ಆದರೆ ಇದೀಗ ಪ್ಲಾಸ್ಟಿಕ್‌ ಕ್ಯಾರಿಬ್ಯಾಗನ್ನೇ ಹೋಲುವ ಮೆಕ್ಕೆಜೋಳ ಮತ್ತು ಸಬ್ಬಕ್ಕಿಯ ಗಂಜಿಯಿಂದ ತಯಾರಿಸಲಾದ ಪರಿಸರ ಸ್ನೇಹಿ ಕ್ಯಾರಿಬ್ಯಾಗ್‌ಗಳು ಪ್ಲಾಸ್ಟಿಕ್‌ಗೆ ಪರ್ಯಾಯವಾಗುವ ಆಶಾಭಾವನೆ ಮೂಡಿಸಿವೆ.

Advertisement

ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಅಥವಾ ಇತರ ಕೆಲವು ಪ್ಲಾಸ್ಟಿಕ್‌ ಉತ್ಪನ್ನಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದ, ಆದರೆ ಪೂರ್ಣವಾಗಿ ಪರಿಸರಕ್ಕೆ ಪೂರಕವಾದ ಈ ಪ್ರಾಕೃತಿಕ ಉತ್ಪನ್ನಗಳು ಹೊಸ ಭರವಸೆ ಮೂಡಿಸಿದ್ದು ಬೀದರ್‌ನ ರೋಹಿತ್‌ ವಿನಯ್‌ ಮತ್ತು ಪ್ರಕಾಶ್‌ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಈ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಇದಕ್ಕೆ ಡಿಆರ್‌ಡಿಒ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ ನೀಡಿದೆ.

120 ದಿನಗಳಲ್ಲಿ ಗೊಬ್ಬರ
ಪ್ಲಾಸ್ಟಿಕ್‌ನ ದೊಡ್ಡ ಸಮಸ್ಯೆ ಎಂದರೆ ಅದು ಮಣ್ಣಿನಲ್ಲಿ ಕರಗುವುದಿಲ್ಲ. ವರ್ಷಾನುಗಟ್ಟಲೆ ಭೂಮಿಗೆ ಹಾನಿಕಾರ ಕವಾಗಿರುತ್ತದೆ. ಆದರೆ ಮೆಕ್ಕೆಜೋಳ, ಸಬ್ಬಕ್ಕಿಯಿಂದ ತಯಾರಿಸಲಾಗುವ ಈ ಉತ್ಪನ್ನ 120 ದಿನಗಳಲ್ಲಿಯೇ ಸಂಪೂರ್ಣವಾಗಿ ಮಣ್ಣಿನಲ್ಲಿ ಕರಗಿ ಗೊಬ್ಬರದ ರೂಪ ಪಡೆಯುತ್ತವೆ ಎನ್ನುತ್ತಾರೆ ಪ್ರಕಾಶ್‌. ಇಂತಹ ಉತ್ಪನ್ನವನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇಂದ್ರ ಸರಕಾರವು ಶೇ. 25ರಷ್ಟು ಸಬ್ಸಿಡಿಯನ್ನು ಕೂಡ ಒದಗಿಸುತ್ತಿದೆ ಎನ್ನುತ್ತಾರೆ ಅವರು.

ವಿವಿಧ ಉತ್ಪನ್ನಗಳು
ಕೇವಲ ಕ್ಯಾರಿಬ್ಯಾಗ್‌ಗಳನ್ನು ಮಾತ್ರ ವಲ್ಲದೆ ಟೇಬಲ್‌ ಶೀಟ್‌, ರೋಲ್ಸ್‌, ಆಸ್ಪತ್ರೆಗಳಿಗೆ ಬೇಕಾದ ಪರಿಕರಗಳು ಮೊದಲಾದ ಉತ್ಪನ್ನಗಳನ್ನು ಕೂಡ ಮೆಕ್ಕೆಜೋಳ ಮತ್ತು ಸಬ್ಬಕ್ಕಿಯಿಂದ ತಯಾರಿಸುತ್ತೇವೆ. ಅರ್ಧ ಕೆಜಿಯಿಂದ 10 ಕೆಜಿ ತೂಕದ ಸಾಮಗ್ರಿಗಳನ್ನು ಇಟ್ಟು ಕೊಂಡೊಯ್ಯಬಹುದಾದ ಕ್ಯಾರಿಬ್ಯಾಗ್‌ಗಳನ್ನು ಉತ್ಪಾದಿಸು ತ್ತೇವೆ. ಬೇಡಿಕೆ ಇದೆ. ಆದರೆ ಇನ್ನಷ್ಟು ಅರಿವು ಮೂಡಿಸಬೇಕಾಗಿದೆ. ಇದೇ ಉದ್ದೇಶಕ್ಕಾಗಿ ಮಂಗಳೂರಿನಲ್ಲಿ ಸಾವಯವ ಕೃಷಿಕರ ಬಳಗದಿಂದ ಆಯೋ ಜಿಸಿದ ಹಲಸು ಮೇಳದಲ್ಲಿಯೂ ಪ್ರದರ್ಶನ ಮಾಡಿದ್ದೇವೆ ಎನ್ನುತ್ತಾರೆ ರೋಹಿತ್‌ ವಿನಯ್‌.

ಬಿಸಿಗೂ, ತಂಪಿಗೂ ಸೈ
ಈ ಕ್ಯಾರಿಬ್ಯಾಗ್‌ಗಳಲ್ಲಿ ಗರಿಷ್ಠ 180 ಡಿಗ್ರಿ ಸೆಲ್ಸಿಯಸ್‌ ಬಿಸಿಯ ಪದಾರ್ಥಗಳನ್ನು ಹಾಕಬಹುದು. ಅಲ್ಲದೆ -18 ಡಿಗ್ರಿ ತಂಪಾಗಿರುವ ಸಾಮಗ್ರಿಗಳನ್ನು ಕೂಡ ಇಟ್ಟು ಸಾಗಿಸಬಹುದು. ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳಲ್ಲಿ ಬಿಸಿಯ ಪದಾರ್ಥಗಳನ್ನು ತುಂಬಿಸಿದರೆ ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು ಅದರೊಳಗೆ ಸೇರುವ ಅಪಾಯವಿರುತ್ತದೆ. ಆದರೆ ಮೆಕ್ಕೆಜೋಳ, ಸಬ್ಬಕ್ಕಿಯಿಂದ ತಯಾರಿಸಲ್ಪಟ್ಟ ಈ ಬ್ಯಾಗ್‌ಗಳಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ. ಹಾಗಾಗಿ ಆರೋಗ್ಯಕ್ಕೂ ಹಾನಿಕಾರಕವಲ್ಲ.
– ಪ್ರಕಾಶ್‌, ಪರಿಸರ ಸ್ನೇಹಿ ಕ್ಯಾರಿಬ್ಯಾಗ್‌ ತಯಾರಕರು

Advertisement

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next