Advertisement

ಮೆಕ್ಕೆ ಜೋಳ: ರೈತರ ಕೈ ಹಿಡಿದ ಬೆಲೆ

04:49 PM Oct 31, 2022 | Team Udayavani |

ಹಾಸನ: ಜಿಲ್ಲೆಯಲ್ಲಿ ಈಗ ಮೆಕ್ಕೆ ಜೋಳದ ಕಟಾವು ಆರಂಭವಾಗಿದೆ. ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿರುವುದು, ರೈತರು ಜೋಳವನ್ನು ಕಟಾವು ಮಾಡಿ, ರಾಶಿ ಹಾಕಿಕೊಳ್ಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಮಳೆ ಆತಂಕದ ನಡುವೆಯೇ ಮೆಕ್ಕೆ ಜೋಳದ ಕಟಾವು ಮಾಡುತ್ತಿದ್ದಾರೆ.

Advertisement

ಈ ವರ್ಷ ಸುರಿದ ಭಾರೀ ಮಳೆಯಿಂದ ಮೆಕ್ಕೆ ಜೋಳದ ಬೆಳೆಗೂ ಹಾನಿಯಾಯಿತು. ಅತಿವೃಷ್ಟಿ ಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬೆಳೆಯಲಿಲ್ಲ. ಮಾನ್ಸೂನ್‌ ಮಳೆ ಆರಂಭವಾಗುವ ಮೊದಲೇ ಬಿತ್ತನೆ ಮಾಡಿದ್ದ ಬೆಳೆ ಹುಲುಸಾಗಿ ಬೆಳೆಯಿತು. ಆದರೆ, ಮಾನ್ಸೂನ್‌ ಮಳೆ ಆರಂಭದಲ್ಲಿ ಬಿತ್ತನೆ ಮಾಡಿದ ಮೆಕ್ಕೆ ಜೋಳ ಅತಿ ತೇವಾಂಶದಿಂದ ಬೆಳೆ ನಾಶವಾಯಿತು. ಅಳಿದುಳಿದ ಬೆಳೆಯಲ್ಲಿ ತೆನೆಗಳು ಚಿಕ್ಕದಾಗಿದ್ದು ಇಳುವರಿಯು ತೀವ್ರವಾಗಿ ಕುಸಿದಿದೆ.

ಜೋಳದ ಗುಣಮಟ್ಟವೂ ಹಾಳು: ಮೆಕ್ಕೆ ಜೋಳ ಕಟಾವಿಗೆ ಬಂದು ಸುಮಾರು ಒಂದು ತಿಂಗಳಾಗಿದೆ. ಆದರೆ, ಅಕ್ಟೋಬರ್‌ 3ನೇ ವಾರದವರೆಗೂ ಭಾರೀ ಮಳೆಯಾಗುತ್ತಿದ್ದರಿಂದ ಕಟಾವು ಮಾಡಲಾಗಿರಲಿಲ್ಲ. ಮಳೆ ಪರಿಣಾಮವಾಗಿ ತೆನೆಗಳಿಗೆ ನೀರು ಬಿದ್ದು, ಗಿಡದ ಮೇಲೆಯೇ ಫ‌ಂಗಸ್‌ ಕಾಣಿಸಿಕೊಂಡಿದ್ದು, ಜೋಳದ ಗುಣಮಟ್ಟವೂ ಹಾಳಾಗಿದೆ. ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿರುವುದರಿಂದ ರೈತರು ಜೋಳದ ಕಟಾವು ಮಾಡುತ್ತಿದ್ದಾರೆ. ಒಂದು ಎಕರೆಗೆ ಸಾಮಾನ್ಯವಾಗಿ ಮೆಕ್ಕೆ ಜೋಳದ ಇಳುವರಿ 25ರಿಂದ 30 ಕ್ವಿಂಟಲ್‌ ಬರುತ್ತಿದೆ. ಆದರೆ, ಈ ವರ್ಷ 15ರಿಂದ 20 ಕ್ವಿಂಟಲ್‌ ಮಾತ್ರ ಇಳುವರಿಯಿದ್ದು, ನಿರೀಕ್ಷಿತ ಇಳುವರಿ ಇಲ್ಲ.

ಕ್ವಿಂಟಲ್‌ಗೆ 2000 ರೂ. ಮೀರಿದ ಬೆಲೆ: ಮೆಕ್ಕೆ ಜೋಳದ ಇಳುವರಿ ಕುಸಿದಿದ್ದರೂ, ಈಗ ಜೋಳದ ಬೆಲೆ ಕ್ವಿಂಟಲ್‌ಗೆ 2000 ರೂ. ಗಿಂತ ಹೆಚ್ಚಿದೆ. ಇದರಿಂದ ರೈತರಿಗೆ ತೀವ್ರ ನಷ್ಟವಾಗುವುದಿಲ್ಲ ಎಂಬ ಸಮಾಧಾನವಿದೆ. ಗ್ರಾಮಗಳಿಗೇ ಬರುತ್ತಿರುವ ಜೋಳದ ವ್ಯಾಪಾರಿಗಳು 2100 ರೂ.ನಿಂದ 2200 ರೂ. ದರದಲ್ಲಿ ಖರೀದಿಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಕ್ವಿಂಟಲ್‌ಗೆ 1500ರಿಂದ 1600 ರೂ. ದರದಲ್ಲಿ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೆಕ್ಕೆ ಜೋಳದ ಧಾರಣೆ ಸಮಾಧಾನಕರ ವಾಗಿದ್ದು, ಇಳುವರಿ ಕಡಿಮೆ ಇದ್ದರೂ ದರ ಹೆಚ್ಚಿರುವುದರಿಂದ ರೈತರು ನಷ್ಟ ಅನುಭವಿಸುವುದು ತಪ್ಪಿದೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಗುರಿ ಮೀರಿದ ಜೋಳದ ಬಿತ್ತನೆ: ಈ ವರ್ಷ ಮೆಕ್ಕೆ ಜೋಳದ ಬಿತ್ತನೆ ಗುರಿ ಮೀರಿ ಬಿತ್ತನೆಯಾಗಿತ್ತು. 1.05 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಗೆ ಬದಲಾಗಿ 1.10 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಜಿಲ್ಲೆಯ 8 ತಾಲೂಕುಗಳ ಪೈಕಿ 7 ತಾಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆ ಜೋಳದ ಪ್ರಧಾನ ಹಾಗೂ ವಾಣಿಜ್ಯ ಬೆಳೆಯಾಗಿದೆ. ಹಾಸನ ತಾಲೂಕಿನಲ್ಲಿ ಅತಿ ಹೆಚ್ಚು 37886 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಆನಂತದ ಸ್ಥಾನ ಅರಕಲಗೂಡು ತಾಲೂಕಿನಲ್ಲಿ 21, 561 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಬೇಲೂರು – 19.535 ಹೆಕ್ಟೇರ್‌, ಚನ್ನರಾಯಪಟ್ಟಣ – 10,198 ಹೆಕ್ಟೇರ್‌, ಅರಸೀಕೆರೆ – 9725 ಹೆಕ್ಟೇರ್‌, ಆಲೂರು – 8, 559 ಹೆಕ್ಟೇರ್‌, ಹೊಳೆನರಸೀಪುರ ತಾಲೂಕಿನಲ್ಲಿ 7,965 ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ ಈ ವರ್ಷ ಬಿತ್ತನೆಯಾಗಿತ್ತು.

ಪಶು, ಕೋಳಿ ಆಹಾರಕ್ಕೆ ಹೆಚ್ಚು ಬಳಕೆ : ಮೆಕ್ಕೆ ಜೋಳದ ಬಳಕೆ ಅತಿ ಹೆಚ್ಚು ಬಳಕೆಯಾ ಗುವುದು ಪಶು ಆಹಾರ ಮತ್ತು ಕೋಳಿಗಳ ಆಹಾರ ತಯಾರಿಕೆಗೆ. ವಿವಿಧ ಆಹಾರ ಉತ್ಪನ್ನಗಳ ತಯಾರಿಗೆಗೂ ಅಲ್ಪ ಪ್ರಮಾಣದಲ್ಲಿ ಮೆಕ್ಕೆ ಜೋಳ ಬಳಕೆಯಾಗುತ್ತದೆ. ಪಶು ಆಹಾರ ತಯಾರಿಕಾ ಘಟಕಗಳು ಈ ಹಂಗಾಮಿನಲ್ಲಿ ಮೆಕ್ಕೆ ಜೋಳವನ್ನು ಖರೀದಿಸಿ, ದಾಸ್ತಾನಿರಿಸಿಕೊಂಡು ವರ್ಷ ಪೂರ್ಣ ಪಶು ಆಹಾರ ತಯಾರಿ ಕೆಗೆ ಬಳಕೆ ಮಾಡಿಕೊಳ್ಳುತ್ತವೆ. ಹಾಗೆಯೇ ಕೋಳಿ ಫಾರಂಗಳಿಗೆ ಆಹಾರ ಪೂರೈಕೆ ಮಾಡುವ ಘಟಕಗಳೂ ಮೆಕ್ಕೆ ಜೋಳ ಖರೀದಿಸಿ ದಾಸ್ತಾನಿರಿಸಿಕೊಳ್ಳುತ್ತವೆ. ಮುಂಗಾರು ಹಂಗಾಮಿನ ಮಳೆ ಆಶ್ರಯದಲ್ಲಿ ಅತಿ ಹೆಚ್ಚು ಮೆಕ್ಕೆ ಜೋಳ ಬೆಳೆಯಲಾಗುತ್ತಿದ್ದು, ನೀರಾವರಿ ಅಶ್ರಯದಲ್ಲಿ ಹಿಂಗಾರು ಹಂಗಾಮಿನಲ್ಲೂ ಕಡಿಮೆ ಪ್ರಮಾಣದಲ್ಲಿ ಮೆಕ್ಕೆ ಜೋಳ ಬೆಳೆಯಲಾಗುತ್ತದೆ.

Advertisement

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next