ಮೈಸೂರು: ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಬೀದಿ ದೀಪಗಳನ್ನು ಮುಂದಿನ ಮೂರು ತಿಂಗಳವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ನಿರ್ವಹಣೆ ಮಾಡುವಂತೆ ಸಂಸದ ಪ್ರತಾಪಸಿಂಹ ಸೂಚಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮುಡಾ, ನಗರ ಪಾಲಿಕೆ, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿರುವ 42 ಕಿ.ಮೀ ರಿಂಗ್ ರಸ್ತೆಯಲ್ಲಿ ಕಳೆದ 6-7 ತಿಂಗಳಿನಿಂದ ವಿದ್ಯುತ್ ದೀಪಗಳು ಸರಿಯಾಗಿ ಉರಿಯುತ್ತಿಲ್ಲ.
ಈ ಮೊದಲು ಮುಡಾ ನಿರ್ವಹಣೆಯಲ್ಲಿದ್ದ ರಿಂಗ್ ರಸ್ತೆಯನ್ನು ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬೀದಿ ದೀಪಗಳ ನಿರ್ವಹಣೆ ಮಾಡಲು ಅವಕಾಶವಿಲ್ಲ. ಹೀಗಾಗಿ ನಗರ ಪಾಲಿಕೆ ಅಥವಾ ಮುಡಾ ವತಿಯಿಂದ ಬೀದಿದೀಪಗಳ ನಿರ್ವಹಣೆ ಮಾಡಬೇಕಿದ್ದು, ಈವರೆಗೂ ಇವುಗಳ ನಿರ್ವಹಣೆ ಮಾಡದ ಪರಿಣಾಮ ಯಾವುದೇ ಬೀದಿ ದೀಪಗಳ ಬಳಕೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಡಾ ಅಧೀಕ್ಷಕ ಅಭಿಯಂತರ ಸುರೇಶಬಾಬು, ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡುವ ಸಂದರ್ಭದಲ್ಲೇ ಬೀದಿ ದೀಪಗಳ ನಿರ್ವಹಣೆ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಆದರೆ, ಬೀದಿ ದೀಪ ನಿರ್ವಹಣೆ ಹೆದ್ದಾರಿ ಪ್ರಾಧಿಕಾರಕ್ಕೆ ಅವಕಾಶವಿಲ್ಲದ ಕಾರಣ, ಆ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳು ಮಾಡಬೇಕಿದೆ. ಆದರೆ ಬೀದಿ ದೀಪಗಳ ಶುಲ್ಕವನ್ನು ಎಸ್‌ಎಫ್ಸಿ ಅನುದಾನದಿಂದಲೇ ನೇರವಾಗಿ ಕಡಿತಗೊಳಿಸುವುದರಿಂದ ನಗರಪಾಲಿಕೆ ನಿರ್ವಹಣೆ ಮಾಡಬಹುದಾಗಿದೆ ಎಂದರು.
ನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ಲಕ್ಷ್ಮಣೇಗೌಡ ಮಾತನಾಡಿ, ನಗರಪಾಲಿಕೆ ಈಗಾಗಲೇ ತನ್ನ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳನ್ನು ನಿರ್ವಹಣೆ ಮಾಡುತ್ತಿದೆ. ಹೀಗಾಗಿ ರಿಂಗ್ ರಸ್ತೆಯಲ್ಲಿನ ಬೀದಿ ದೀಪಗಳ ನಿರ್ವಹಣೆ ಮಾಡಬೇಕಾದರೆ ವಿಷಯವನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಿದೆ ಎಂದರು. ಇದಕ್ಕೆ ಉತ್ತರಿಸಿದ ಪ್ರತಾಪ್‌ಸಿಂಹ, ಬೀದಿ ದೀಪಗಳ ನಿರ್ವಹಣೆ ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಅವಕಾಶವಿಲ್ಲ, ಮುಡಾದಲ್ಲಿ ಹಣವಿಲ್ಲ.
ಹೀಗಾಗಿ ನಗರ ಪಾಲಿಕೆಯಿಂದ ನಿರ್ವಹಣೆ ಮಾಡುವ ಬಗ್ಗೆ ಪತ್ರ ಬರೆಯಲಿದ್ದು, ಇದನ್ನು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯುವಂತೆ ಸಭೆಯಲ್ಲಿದ್ದ ಪಾಲಿಕೆ ಸದಸ್ಯ ಶಿವಕುಮಾರ್ ಅವರಿಗೆ ಸೂಚಿಸಿದರು. ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಪಾಲಿಕೆ ಸದಸ್ಯ ಶಿವಕುಮಾರ್, ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ಇನ್ನಿತರರಿದ್ದರು.