Advertisement

Solar ಶಕ್ತಿ ಘಟಕಗಳ ನಿರ್ವಹಣೆಗೂ ಲಕ್ಷ್ಯ ಇರಲಿ

12:25 AM Jan 24, 2024 | Team Udayavani |

ಇಂದಿನ ಯಾಂತ್ರೀಕೃತ ಯುಗದಲ್ಲಿ ವಿದ್ಯುತ್‌ ಇಲ್ಲದೆ ನಮ್ಮ ದೈನಂದಿನ ಕೆಲಸಕಾರ್ಯಗಳೂ ನಡೆಯಲಾರದ ಪರಿಸ್ಥಿತಿ ಇದೆ. ಹೀಗಾಗಿ ದೇಶದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ವಿದ್ಯುತ್‌ ಉತ್ಪಾದನೆಗೆ ಸರಕಾರ ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದರೂ ಅದರ ಪ್ರಯತ್ನಗಳು ಸಾಕಾಗುತ್ತಿಲ್ಲ. ಹೀಗಾಗಿ ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ದಿಸೆಯಲ್ಲಿ ಕೇಂದ್ರ ಸರಕಾರ ಈಗ ಮಹತ್ತರ ಯೋಜನೆಯೊಂದನ್ನು ಘೋಷಿಸಿದೆ.

Advertisement

“ಪ್ರಧಾನಮಂತ್ರಿ ಸೂರ್ಯೋ ದಯ ಯೋಜನೆ’ಯಡಿ ಸೌರಶಕ್ತಿ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದ್ದು ಅದರಂತೆ ದೇಶದ ಒಂದು ಕೋಟಿ ಮನೆಗಳ ಮೇಲ್ಛಾವಣಿಗಳಲ್ಲಿ ಸೌರಶಕ್ತಿ ಫ‌ಲಕಗಳನ್ನು ಅಳವಡಿಸುವ ಗುರಿಯನ್ನು ಹಾಕಿಕೊಂಡಿದೆ.

ವರ್ಷಗಳುರುಳಿದಂತೆಯೇ ವಿದ್ಯುತ್‌ನ ಅವಲಂಬನೆ ಹೆಚ್ಚುತ್ತಲೇ ಸಾಗಿರು ವುದರಿಂದ ವಿದ್ಯುತ್‌ನ ತೀವ್ರ ಅಭಾವ ಕಾಡಲಾರಂಭಿಸಿದೆ. ಇದೇ ವೇಳೆ ದೇಶ ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿರುವ ಇಂದಿನ ದಿನಗಳಲ್ಲಿ ದೇಶದ ಮೂಲೆಮೂಲೆಗೂ ವಿದ್ಯುತ್‌ ಸಂಪರ್ಕವನ್ನು ನೀಡಿ ಪ್ರತೀ ಮನೆಯಲ್ಲಿಯೂ ವಿದ್ಯುದ್ದೀಪಗಳು ಬೆಳಗಲಾರಂಭಿಸಿವೆ. ಇನ್ನು ಕೈಗಾರಿಕ ಕ್ಷೇತ್ರವಂತೂ ನಾಗಾಲೋಟದಲ್ಲಿದ್ದು ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ನೀಡುತ್ತಲಿದೆ. ಇವೆಲ್ಲದರ ಜೀವಸೆಲೆಯಾದ ವಿದ್ಯುತ್‌ ಮಾತ್ರ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿಲ್ಲ. ಜಲ, ಕಲ್ಲಿದ್ದಲು, ಅಣು ವಿದ್ಯುತ್‌ ಸ್ಥಾವರಗಳ ಮೂಲಕ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದ್ದರೂ ದೇಶದ ಬೇಡಿಕೆಯನ್ನು ಪೂರೈಸಲು ಇವುಗಳಿಂದ ಸಾಧ್ಯವಾಗುತ್ತಿಲ್ಲ. ಇನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳತ್ತಲೂ ಸರಕಾರ ದಶಕಗಳ ಹಿಂದೆಯೇ ಲಕ್ಷ್ಯ ಹರಿಸಿ, ಸೌರ ವಿದ್ಯುತ್‌ ವ್ಯವಸ್ಥೆಯ ಅಳವಡಿಕೆಗೆ ಜನರಿಗೆ ಸಬ್ಸಿಡಿ, ಸಾಧನ, ಸಾಮಗ್ರಿಗಳಿಗೆ ರಿಯಾಯಿತಿ ಮತ್ತಿತರ ಕೊಡುಗೆಗಳನ್ನು ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಇವೆಲ್ಲದರ ಹೊರತಾಗಿಯೂ ದೇಶವಾಸಿಗಳು ಸೌರಶಕ್ತಿ ಯತ್ತ ಹೆಚ್ಚಿನ ಆಸಕ್ತಿ ತೋರಿಸದಿರುವುದರಿಂದ ನಿರೀಕ್ಷಿತ ಗುರಿಯನ್ನು ತಲುಪಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸೌರಶಕ್ತಿ ಬಳಕೆಯ ಜಪವನ್ನು ಪಠಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮಮಂದಿರದಲ್ಲಿ ಶ್ರೀರಾಮಲಲ್ಲಾನ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇ ರಿಸಿದ ಬಳಿಕ ಪ್ರಧಾನಿ ಮೋದಿ ಅವರು, ಭಾರತೀಯರ ಮನೆಗಳ ಮೇಲ್ಛಾ ವಣಿಯಲ್ಲಿ ಸೌರ ವಿದ್ಯುತ್‌ ಘಟಕಗಳಿರಬೇಕೆಂಬುದು ನನ್ನ ಸಂಕಲ್ಪ ಎಂದು ಹೇಳುವ ಮೂಲಕ ದೇಶವಾಸಿಗಳನ್ನು ಸೌರ ವಿದ್ಯುತ್‌ನತ್ತ ಸೆಳೆಯುವ ಭಾವನಾತ್ಮಕ ಪ್ರಯತ್ನವನ್ನು ನಡೆಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್‌ ಫ‌ಲಕಗಳ ಅಳವಡಿಕೆ ಯೋಜನೆ ಜಾರಿಯಲ್ಲಿದ್ದರೂ ಈವರೆಗೂ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಈ ಯೋಜನೆಯ ಅವಧಿಯನ್ನು 2026ರ ವರೆಗೆ ವಿಸ್ತರಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಮುಂದಿನ 2 ವರ್ಷಗಳಲ್ಲಿ ಮನೆಗಳ ಮೇಲ್ಛಾವಣಿ ಮೇಲಿನ ಸೌರ ವಿದ್ಯುತ್‌ ಘಟಕಗಳಿಂದ ಉತ್ಪಾದಿಸಲಾಗುವ ಒಟ್ಟು ವಿದ್ಯುತ್‌ನ ಪ್ರಮಾಣವನ್ನು 40 ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.

Advertisement

ದೇಶದ ಬಹುತೇಕ ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೌರ ವಿದ್ಯುತ್‌ ಘಟಕಗಳ ನಿರ್ವಹಣೆಯೇ ಗ್ರಾಹಕರಿಗೆ ಬಲುದೊಡ್ಡ ಸಮಸ್ಯೆಯಾಗಿದೆ. ಸೌರವಿದ್ಯುತ್‌ ಘಟಕಗಳ ಸ್ಥಾಪನೆಗೆ ಸರಕಾರ ಉತ್ತೇಜನ ನೀಡುವ ಜತೆಜತೆಯಲ್ಲಿ ಅದರ ನಿರ್ವಹಣೆಗೂ ಹೆಚ್ಚಿನ ಪ್ರೋತ್ಸಾಹವನ್ನು ಗ್ರಾಹಕರಿಗೆ ನೀಡಬೇಕಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಸರಕಾರ ಇತ್ತ ಹೆಚ್ಚಿನ ಗಮನ ಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next