ಚಿಂಚೋಳಿ: ಶಿಕ್ಷಕರು ತಮ್ಮ ಕರ್ತವ್ಯ ಮತ್ತು ವೃತ್ತಿ ಪಾವಿತ್ರ್ಯತೆ, ಗೌರವ ಮತ್ತು ಘನತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ-ನಿರ್ದೇಶಕ ಅಶೋಕ ಭಜಂತ್ರಿ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾಪ್ರೌಢ ಶಾಲೆ ಮುಖ್ಯ ಶಿಕ್ಷಕ ಬಿ. ಜಗದೀಶ್ವರ ತಾಜಲಾಪುರ ಸೇವಾ ವಯೋನಿವೃತ್ತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಳಂದ, ಚಿತ್ತಾಪುರ, ಚಿಂಚೋಳಿ, ಜೇವರ್ಗಿ ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಲ್ಲದೇ ಹೊಲಗದ್ದೆಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದರೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಶಿಕ್ಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದ ಶಾಲೆ-ಕಾಲೇಜುಗಳು ಸರಿಯಾಗಿ ನಡೆದಿಲ್ಲ. ಅಧಿಕಾರ ಹೋಗುವುದು, ಬರುವುದು ನಮಗೆ ಬೇಕಾಗಿಲ್ಲ ಎಂದರು.
ಬಿಇಒ ರಾಚಪ್ಪ ಭದ್ರಶೆಟ್ಟಿ ಮಾತನಾಡಿ, ಮುಖ್ಯಶಿಕ್ಷಕರು ಮಕ್ಕಳನ್ನು ಅಪಾರ ಪ್ರೀತಿ, ಮಮತೆಯಿಂದ ಕಂಡು ಪಾಠ ಭೋಧನೆ ಹೇಳುತ್ತಿರುವುದನ್ನು ಶಾಲೆಯ ವಾತಾವರಣ ಉತ್ತಮವಾಗಿತ್ತು. ಅವರು ವಯೋನಿವೃತ್ತಿ ಹೊಂದುತ್ತಿದ್ದರೂ ಸೇವೆಯನ್ನು ಮತ್ತೆ ಮುಂದುವರಿಸಬೇಕು ಎಂದರು.
ವಿದ್ಯಾರ್ಥಿಗಳಾದ ಸಂಗೀತಾ, ಭಾಗ್ಯಶ್ರೀ, ಭುವನೇಶ್ವರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸೇವಾ ನಿವೃತ್ತಿಹೊಂದಿದ ಬಿ.ಜಗದೀಶ್ವರ ಸುಗಂಧ ತಾಜಲಾಪುರ ದಂಪತಿಗಳನ್ನು ಶಿಕ್ಷಕರು ಸನ್ಮಾನಿಸಿದರು. ಮಹಾರಾಷ್ಟ್ರದ ಶಿವಕುಮಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಪಾಲಾಮೂರ, ಶೌಕತ್ ಅಲಿ, ಮಾರುತಿ ಯಂಗನೂರ, ಜಯಪ್ಪ ಚಾಪೆಲ್, ಸುರೇಶ ಕೊರವಿ, ಜಗನ್ನಾಥರೆಡ್ಡಿ, ದೇವೇಂದ್ರಪ್ಪ ಹೋಳ್ಕರ, ರಾಘವೇಂದ್ರರೆಡ್ಡಿ ಚಿಮ್ಮನಚೋಡ, ಮಸೂದ್ ಅಲಿ, ದೇವಿದಾಸ ರಾಠೊಡ, ಶಾಮರಾವ್ ಮೋಘಾ ಇನ್ನಿತರರಿದ್ದರು. ಅಶೋಕ ಹೂವಿನಬಾವಿ ಸ್ವಾಗತಿಸಿದರು.