ಸದ್ಯ ಅಡಿಕೆ ಧಾರಣೆ ಏರುಗತಿಯಲ್ಲಿದೆ. ಅತಿವೃಷ್ಟಿ, ಕೊಳೆರೋಗ, ಬೆಲೆ ಕುಸಿತ, ಕಾರ್ಮಿಕರ ವೇತನದಲ್ಲಿನ ಹೆಚ್ಚಳ ಮತ್ತಿತರ ಕಾರಣಗಳಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರು ಈಗ ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಯಾವುದೇ ಕೃಷಿ ಬೆಳೆಗಳ ಧಾರಣೆ ಏರಿಕೆಯಾಗುತ್ತಿದ್ದಂತೆ ಉತ್ಪಾದನ ವೆಚ್ಚ, ಅದರಲ್ಲೂ ಮುಖ್ಯವಾಗಿ ಕಾರ್ಮಿಕರ ವೇತನವೂ ಸಮಾನಾಂತರವಾಗಿ ಏರಿಕೆ ಯಾಗುವುದು ಸರ್ವೇ ಸಾಮಾನ್ಯ. ಮಾರುಕಟ್ಟೆ ಸ್ವಲ್ಪ ಕುಸಿತ ಕಂಡರೂ ಏರಿಕೆಯಾದ ಉತ್ಪಾದನ ವೆಚ್ಚವಾಗಲೀ ಕಾರ್ಮಿಕರ ವೇತನವಾಗಲೀ ಕಡಿಮೆಯಾಗುವುದಿಲ್ಲ. ಆಗ ಬೆಳೆಗಾರರು ಮತ್ತೆ ಸಂಕಷ್ಟಕ್ಕೀಡಾಗುತ್ತಾರೆ.
ಹವಾಮಾನ ವೈಪರೀತ್ಯ, ಕೀಟ, ರೋಗಭಾದೆ ಮುಂತಾದವುಗಳಿಂದಾಗಿ ಅಡಿಕೆ ಉತ್ಪಾದನೆಯಲ್ಲಿ ಕುಸಿತ, ವಿದೇಶಗಳಿಂದ ಅನಧಿಕೃತವಾಗಿ ಆಮ ದಾಗುತ್ತಿರುವ ಅಡಿಕೆಗೆ ನಿಯಂತ್ರಣ ಮತ್ತು ಆಮದು ಆಡಿಕೆಯ ಮೇಲಣ ಸುಂಕ ಹೆಚ್ಚಳ ಮತ್ತಿತರ ಕಾರಣಗಳಿಂದಾಗಿ ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಸಹಜವಾಗಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಿದೆ.
ರಾಜ್ಯದ ಮಲೆನಾಡು ಮತ್ತು ಕರಾವಳಿಯಲ್ಲಿ ಸಾವಿರಾರು ಕೃಷಿ ಕುಟುಂಬಗಳಿಗೆ ವಾಣಿಜ್ಯ ಬೆಳೆಯಾದ ಅಡಿಕೆ ಜೀವನಾಧಾರವಾಗಿದೆ. ಇಡೀ ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ.75ರಷ್ಟಿದೆ. ಕಳೆದ ಐದು ವರ್ಷಗಳಲ್ಲಿ ಅಡಿಕೆ ಉತ್ಪಾದನ ಪ್ರಮಾಣ ಶೇ. 95ರಷ್ಟು ಏರಿಕೆಯಾಗಿದ್ದು , 2015-16ರಲ್ಲಿ 4.30 ಲಕ್ಷ ಟನ್‌ಗಳಷ್ಟು ಇದ್ದ ಅಡಿಕೆ 8.54ಲಕ್ಷ ಟನ್‌ಗಳಿಗೆ ಹೆಚ್ಚಿದೆ.
ದೇಶದಲ್ಲಿ 2015-16ರಲ್ಲಿ 7.13 ಲಕ್ಷ ಟನ್‌ಗಳಷ್ಟು ಅಡಿಕೆ ಉತ್ಪಾದನೆಯಾಗಿದ್ದರೆ ಕಳೆದ ಅರ್ಧ ದಶಕದಲ್ಲಿ ಅಡಿಕೆ ಉತ್ಪಾದನೆಯ ಪ್ರಮಾಣ ಶೇ. 55 ಏರಿಕೆಯಾಗಿ 11.07 ಲಕ್ಷ ಟನ್‌ಗಳಿಗೆ ತಲುಪಿದೆ. ಇದರಲ್ಲಿ ಕರ್ನಾಟಕದ್ದೇ ಸಿಂಹಪಾಲು. ಅಸ್ಸಾಂ, ಕೇರಳ, ಮೇಘಾಲಯಗಳ ಕೊಡುಗೆಯೂ ಸೇರಿವೆ. ವಿಶ್ವದ ಅಡಿಕೆ ರಫ್ತು ಮಾರುಕಟ್ಟೆಯಲ್ಲಿ ನಮ್ಮ ದೇಶದ ಪಾಲು ಕೇವಲ ಶೇ. 5ರಷ್ಟಾಗಿದೆ. ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಡಿಕೆ ಬೆಳೆಯ ಪ್ರಮಾಣ ಇಳಿಮುಖವಾಗುತ್ತಿದ್ದು 2015-16ರಲ್ಲಿ 1.02 ಲಕ್ಷ ಟನ್‌ಗಳಷ್ಟಿದ್ದ ಅಡಿಕೆ ಉತ್ಪಾದನೆ ಈಗ 63,000 ಟನ್‌ಗಳಿಗೆ ಇಳಿಕೆಯಾಗಿದೆ.
ಈ ಮಧ್ಯೆ ರಾಜ್ಯದ ಅಡಿಕೆ ಬೆಳೆಗಾರರ ನೆರವಿಗೆ ಬಂದಿರುವ ರಾಜ್ಯ ಸರಕಾರ, ತಜ್ಞರ ಸಮಿತಿಯೊಂದನ್ನು ರಚಿಸಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಗೊಂದಲವನ್ನು ಹೋಗಲಾಡಿಸುವ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ. ಈ ಮೂಲಕ ಅಡಿಕೆ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಗೆ ತೆರೆ ಎಳೆಯಲು ಪ್ರಯತ್ನಗಳು ಸಾಗುತ್ತಿವೆ. ಅಡಿಕೆ ಬೆಳೆಗಾರರು ಹಾಗೂ ಸಂಘಟನೆಗಳ ಹಿತರಕ್ಷಣೆಗೆ “ಅಡಿಕೆ ಪ್ರಾಧಿಕಾರ’ದ ರಚನೆ, ವಿದೇಶಿ ಅಡಿಕೆ ಅಮದು ಮೇಲಣ ನಿಯಂತ್ರಣ, ಉತ್ಪಾದನ ವೆಚ್ಚವನ್ನು ಆಧರಿಸಿ ಬೆಲೆ ನಿಗದಿಪಡಿಸುವ ಸುಧಾರಿತ ಯೋಜನೆಗಳು ಅನು ಷ್ಠಾನದ ಹಾದಿಯಲ್ಲಿವೆ. ಅಡಿಕೆ ಬೆಳೆಯ ಮೌಲ್ಯವ ರ್ಧನೆಗೆ ಇರುವ ಅವಕಾಶಗಳ ಸಂಶೋಧನೆ ಇಂದಿನ ತುರ್ತು ಅಗತ್ಯವಾಗಿದ್ದು , ಈ ನಿಟ್ಟಿನಲ್ಲಿ ವಿಜ್ಞಾನಿಗಳು ಕಾರ್ಯೋನ್ಮುಖರಾಗಿರುವುದು ಸಂತಸದ ವಿಷಯ.
ವಿವಿಧ ವಾಣಿಜ್ಯ ಬೆಳೆಗಳ ಸಂಬಂಧಿತ ಮಂಡಳಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ವಾಣಿಜ್ಯ ಬೆಳೆಗಳ ಸಂಶೋಧನ ಕೇಂದ್ರ, ಕ್ಯಾಂಪ್ಕೋದಂತಹ ಸಂಸ್ಥೆಗಳು ಕಾರ್ಯನಿರ್ವಹಿಸು ತ್ತಿವೆ. ಹೀಗಾಗಿ ಅಡಿಕೆಗಾಗಿ ಪ್ರತ್ಯೇಕ ಮಂಡಳಿ ಅಥವಾ ನಿಗಮ ಸ್ಥಾಪನೆ ಕೇಂದ್ರದ ಆದ್ಯತಾ ಪಟ್ಟಿಯಲ್ಲಿ ಇಲ್ಲ ಎಂಬುದಾಗಿ ಕೇಂದ್ರ ಕೃಷಿ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆಯಾದರೂ ನೂತನ ತಂತ್ರಜ್ಞಾನವನ್ನು ಬಳಸಿ ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶದ ವಿಸ್ತೀರ್ಣ ಹಾಗೂ ಉತ್ಪಾದನ ಪ್ರಮಾಣದ ನಿಖರ ಮಾಹಿತಿ ಸಂಗ್ರಹಿಸುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ತಿಳಿಸಿದೆ ಎನ್ನುವ ವರದಿಯೂ ಬೆಳೆಗಾರರ ಪಾಲಿಗೆ ಸಿಹಿ ಸುದ್ದಿಯೇ.
ಅಡಿಕೆ ಸಹಿತ ಎಲ್ಲ ವಾಣಿಜ್ಯ ಬೆಳೆಗಳ ಧಾರಣೆಯೂ ಅಸ್ಥಿರತೆ ಹೊಂದಿರುವುದು ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿದೆ. ಇದರಿಂದಾಗಿ ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂಬುದು ಇನ್ನು ಮರೀಚಿಕೆಯಾಗಿಯೇ ಉಳಿದಿದೆ. ಸದ್ಯ ಅಡಿಕೆ ಧಾರಣೆ ಏರುಗತಿಯಲ್ಲಿದ್ದರೂ ಮುಂದಿನ ದಿನಗಳಲ್ಲಿ ಇದೇ ಸ್ಥಿತಿಯಲ್ಲಿರಲಿದೆ ಎನ್ನಲಾಗದು. ಹೀಗಾಗಿ ಅಡಿಕೆ ಸಹಿತ ಎಲ್ಲ ವಾಣಿಜ್ಯ ಬೆಳೆಗಳ ಬೆಲೆಗಳು ಸ್ಥಿರತೆಯನ್ನು ಕಾಯ್ದುಕೊಳ್ಳುವಂತಾಗಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
– ಬೆಳ್ಳಿಪ್ಪಾಡಿ ರಾಜೇಂದ್ರ ರೈ