Advertisement

ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ: ಬಯ್ಯಾಪೂರ

06:35 PM Apr 30, 2020 | Suhan S |

ಕುಷ್ಟಗಿ: ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಕೋವಿಡ್‌-19, ನಿಯಂತ್ರಣ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಕ್ರಮ ಹಾಗೂ ಸರಳೀಕರಣದ ನಿರ್ವಹಣೆ ಕುರಿತು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಧ್ಯಕ್ಷತೆಯಲ್ಲಿ ನಡೆದ ವರ್ತಕರ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

Advertisement

ದೈನಂದಿನ ಅಗತ್ಯ ವಸ್ತುಗಳಾದ ಕಿರಾಣಿ ಹಾಗೂ ತರಕಾರಿ ಮಾರಾಟಕ್ಕೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಸಮಯ ನಿಗದಿಗೆ ಎಲ್ಲ ವರ್ತಕರು ಸಮ್ಮತಿಸಿದರು. ಬಟ್ಟೆ ಅಂಗಡಿ, ಪಾತ್ರೆ, ಆಭರಣ ಅಂಗಡಿಗಳನ್ನು ಸದ್ಯಕ್ಕೆ ತೆರೆಯುವುದು ಬೇಡ. ಕಿರಾಣಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. 1 ಮೀಟರ್‌ ಅಂತರದ ಚೌಕದಲ್ಲಿ ನಿಲ್ಲುವ ವ್ಯವಸ್ಥೆ ಮಾಡಬೇಕು. ಗ್ರಾಹಕರು ಸ್ಯಾನಿಟೈಸರ್‌, ಸೋಪಿನಿಂದ ಕೈ ತೊಳೆದುಕೊಂಡರೆ, ಮಾಸ್ಕ್ ಧರಿಸಿದ್ದರೆ ಮಾತ್ರ ದಿನಸಿ ಕೊಡಿ. ನಿಮ್ಮ ಅಂಗಡಿ ಮುಂದೆ ಅನಗತ್ಯವಾಗಿ ಜನರು ನಿಲ್ಲದಂತೆ ಎಚ್ಚರವಹಿಸಿ. ಉಳಿದಂತೆ ಎಲೆಕ್ಟ್ರಾನಿಕ್ಸ್‌, ಹಾರ್ಡವೇರ್‌, ಮೆಕ್ಯಾನಿಕ್‌ ಇತ್ಯಾದಿ ಅಂಗಡಿಗಳು ರಾತ್ರಿ 9ರವರೆಗೆ ನಿಗದಿಗೊಳಿಸಲಾಗಿದ್ದು, ಈ ಅಂಗಡಿಯವರು ಸಹ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವ್ಯವಹರಿಸುವ ಅಂಗಡಿಯವರು ಪುರಸಭೆಯಿಂದ ಟ್ರೇಡ್‌ ಲೈಸೆನ್ಸ್‌ ಕಡ್ಡಾಯವಾಗಿದೆ. ಈ ವಿಷಯದಲ್ಲಿ ಸಡಿಲಿಕೆ ಇಲ್ಲ ಸಭೆ ನಿರ್ಣಯಿಸಿತು.

ತಹಶೀಲ್ದಾರ್‌ ಎಂ. ಸಿದ್ದೇಶ ಜಿಲ್ಲಾಡಳಿತದ ಸಡಿಲಿಕೆ ನಿಯಮ, ಸರಳಿಕರಣದ ಕ್ರಮ ಕುರಿತು ಸಭೆಗೆ ಓದಿ ಹೇಳಿದರು. ಸಿಪಿಐ ಚಂದ್ರಶೇಖರ ಜಿ., ತಾಪಂ ಇಒ ಕೆ. ತಿಮ್ಮಪ್ಪ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಕುಷ್ಟಗಿ ಪಿಎಸ್‌ಐ ಚಿತ್ತರಂಜನ್‌ ನಾಯಕ್‌, ಹನುಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ, ತಾವರಗೇರಾ ಪಿಎಸ್‌ಐ ಗೀತಾಂಜಲಿ ಶಿಂಧೆ ಸೇರಿದಂತೆ ವರ್ತಕರಿದ್ದರು.

ತಾಲೂಕಿನಲ್ಲಿದ್ದವರಿಗೆ ಕೋವಿಡ್‌-19 ವೈರಸ್‌ ಬರುವುದಿಲ್ಲ ಎನ್ನುವ ವಿಶ್ವಾಸವಿದೆ. ಆದರೆ ಹೊರ ರಾಜ್ಯ, ಜಿಲ್ಲೆಗಳ ರೆಡ್‌ಝೋನ್‌ ಪ್ರದೇಶದಿಂದ ಸಾವಿರಕ್ಕೂ ಅಧಿಕ ಜನರು ಕುಷ್ಟಗಿ ತಾಲೂಕಿಗೆ ಬಂದಿದ್ದು, ನಮ್ಮ ಜಾಗೃತಿಯಲ್ಲಿ ನಾವಿರಬೇಕಿದೆ. ನಮ್ಮ ಕೊಪ್ಪಳ ಜಿಲ್ಲೆ ಸತತವಾಗಿ ಗ್ರೀನ್‌ ಝೋನ್‌ನಲ್ಲಿ ಉಳಿಯಬೇಕಿದೆ. ಸರ್ಕಾರವು ಜನಸಾಮಾನ್ಯರ ಜೀವ ರಕ್ಷಣೆಯಲ್ಲಿ ಕಟ್ಟುನಿಟ್ಟಿನ, ಕಠಿಣ ಕ್ರಮಗಳಿಂದ ಸಾರ್ವಜನಿಕರಿಗೂ ವ್ಯಾಪಾರಸ್ಥರಿಗೆ ತೊಂದರೆಯಾಗಿರಬಹುದು. ಆದರೂ ಪರಿಸ್ಥಿತಿ ನಿಭಾಯಿಸಲೇಬೇಕಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕಿರಾಣಿ ಹಾಗೂ ಕಾಯಿಪಲ್ಲೆ ಇತರೆ ಅಂಗಡಿಯವರು, ಬೆಲೆ ಹೆಚ್ಚಳ ಮಾಡದಿರಿ ನೋ ಪ್ರಾಫೀಟ್‌ ನೋ ಲಾಸ್‌ನಲ್ಲಿ ವ್ಯವಹರಿಸಿ. –ಅಮರೇಗೌಡ ಪಾಟೀಲ ಬಯ್ನಾಪೂರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next